ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನೋದ್ಯಮ ಉಳಿಸದಿದ್ದರೆ ಅಪಾಯ: ಗೋವಿಂದಗೌಡ ಆತಂಕ

Last Updated 14 ಫೆಬ್ರುವರಿ 2020, 12:19 IST
ಅಕ್ಷರ ಗಾತ್ರ

ಕೋಲಾರ: ‘ಅವಿಭಜಿತ ಕೋಲಾರ ಜಿಲ್ಲೆಯ ರೈತರ ಜೀವಾಳವಾಗಿದ್ದ ರೇಷ್ಮೆ ಉತ್ಪಾದನೆ ಕುಸಿದಿದ್ದು, ಅದೇ ಹಾದಿಯಲ್ಲಿ ಸಾಗಿರುವ ಹೈನೋದ್ಯಮ ಉಳಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ರೈತರಿಗೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಆತಂಕ ವ್ಯಕ್ತಪಡಿಸಿದರು.

ಡಿಸಿಸಿ ಬ್ಯಾಂಕ್ ಹಾಗೂ ತಾಲ್ಲೂಕಿನ ಅರಹಳ್ಳಿ ರೇಷ್ಮೆ ಬೆಳೆಗಾರರ ಮತ್ತು ರೈತರ ಸೇವಾ ಸಹಕಾರ ಸಂಘದ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಸಂಘಗಳಿಗೆ ಸಾಲ ವಿತರಿಸಿ ಮಾತನಾಡಿದರು.

‘ಅವಿಭಜಿತ ಕೋಲಾರ ಜಿಲ್ಲೆ ಹಿಂದೆ ಚಿನ್ನ, ರೇಷ್ಮೆ ಮತ್ತು ಹಾಲು ಉತ್ಪಾದನೆಯಲ್ಲಿ ಖ್ಯಾತಿ ಪಡೆದಿತ್ತು. ಆದರೆ, ಚಿನ್ನದ ಗಣಿ ಮುಚ್ಚಿತು. ರೇಷ್ಮೆ ಕೃಷಿ ನಷ್ಟದ ಹಾದಿ ಹಿಡಿದಿದ್ದು, ಹೈನೋದ್ಯಮ ಮಾತ್ರ ಉಳಿದಿದೆ. ಲಕ್ಷಾಂತರ ರೈತ ಕುಟುಂಬಗಳು ಹೈನೋದ್ಯಮ ಅವಲಂಬಿಸಿದ್ದು, ಕೋಚಿಮುಲ್‌ ದಿನಕ್ಕೆ 11.40 ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಮೂಲಕ ರಾಜ್ಯದಲ್ಲೇ 2ನೇ ಸ್ಥಾನದಲ್ಲಿತ್ತು. ಆದರೆ, ಈಗ ಹಾಲಿನ ಉತ್ಪಾದನೆ 7.90 ಲಕ್ಷ ಲೀಟರ್‌ಗೆ ಕುಸಿದಿರುವುದು ಆತಂಕಕಾರಿ ಬೆಳವಣಿಗೆ’ ಎಂದರು.

‘ಹಾಲು ಉತ್ಪಾದನೆ ಕುಸಿತ ಮುಂದುವರಿದರೆ ಭವಿಷ್ಯದಲ್ಲಿ ಹೊರ ದೇಶಗಳಿಂದ ಹಾಲು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಶೇ 90ರಷ್ಟು ಮಹಿಳೆಯರು ಹೈನೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಮಹಿಳೆಯರಿಂದ ಮಾತ್ರ ಹೈನೋದ್ಯಮ ಉಳಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಹಸು ಖರೀದಿಗೆ ಸಾಲ: ‘ಹಸು ಖರೀದಿಗೆ ₹ 75 ಸಾವಿರದಿಂದ ₹ 1 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಈ ಸಾಲದ ಹಣವನ್ನು ಹಸು ಖರೀದಿಗೆ ಬಳಸಬೇಕು. ಅಕ್ಕಪಕ್ಕದ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯದವರು ನಮ್ಮ ಜಿಲ್ಲೆಯಲ್ಲಿ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದ ಆಮಿಷವೊಡ್ಡಿ ರೈತರಿಂದ ಹಸು ಖರೀದಿಸುತ್ತಿರುವ ಕಾರಣಕ್ಕೆ ಹಾಲು ಉತ್ಪಾದನೆ ಕುಸಿದಿದೆ’ ಎಂದು ಹೇಳಿದರು.

‘ರೈತರು ಹೆಚ್ಚಿನ ಹಣ ಬರುತ್ತದೆಂದು ಹಸು ಮಾರಾಟ ಮಾಡಿದರೆ ಮುಂದೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಡಿಸಿಸಿ ಬ್ಯಾಂಕನ್ನು ಸಾಲ ಪಡೆಯಲು ಮಾತ್ರ ಸೀಮಿತಗೊಳಿಸದೆ ಉಳಿತಾಯದ ಹಣವನ್ನು ಇದೇ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕು. ಯಾವುದೇ ಕಾರಣಕ್ಕೂ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಹಣ ಠೇವಣಿ ಇಡಬಾರದು’ ಎಂದು ಮನವಿ ಮಾಡಿದರು.

ಸಾಲ ಆಂದೋಲನ: ‘ಅರಹಳ್ಳಿ ಸೊಸೈಟಿಗೆ ಒಟ್ಟಾರೆ ₹ 30 ಕೋಟಿ ಸಾಲ ನೀಡುವ ಗುರಿಯಿದ್ದು, ಈ ಪೈಕಿ ಈವರೆಗೆ ₹ 10.96 ಕೋಟಿ ಸಾಲ ನೀಡಲಾಗಿದೆ. ಬ್ಯಾಂಕ್‌ನ ವ್ಯಾಪ್ತಿಯ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಿಳಾ ಸಂಘಗಳಿಗೆ ಸಾಲ ವಿತರಣೆ ಆಂದೋಲನ ನಡೆಸಲಾಗುತ್ತಿದೆ. ಮಹಿಳೆಯರೇ ಬ್ಯಾಂಕ್‌ನ ಬೆನ್ನೆಲುಬು’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ನಾಗನಾಳ ಸೋಮಣ್ಣ ಹೇಳಿದರು.

‘ಪ್ರತಿ ಸಂಘಕ್ಕೂ ವಿಮೆ ಸೌಲಭ್ಯ ಕಲ್ಪಿಸಿರುವುದರಿಂದ ಸದಸ್ಯರು ಆತಂಕಪಡಬೇಕಿಲ್ಲ. ಬ್ಯಾಂಕ್‌ನ ಠೇವಣಿ ಸದ್ಯ ₹ 270 ಕೋಟಿಯಿದ್ದು, ಮಾರ್ಚ್‌ ಅಂತ್ಯದೊಳಗೆ ₹ 500 ಕೋಟಿ ಠೇವಣಿ ಸಂಗ್ರಹಿಸಬೇಕು. ಆಗ ಬ್ಯಾಂಕ್‌ಗೆ ₹ 1,500 ಕೋಟಿವರೆಗೆ ಸಾಲ ವಿತರಿಸುವ ಆರ್ಥಿಕ ಶಕ್ತಿ ಬರುತ್ತದೆ’ ಎಂದು ಬ್ಯಾಂಕ್‌ ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್‌ ವಿವರಿಸಿದರು.

ಮಹಿಳಾ ಸಂಘಗಳಿಗೆ ₹ 3.18 ಕೋಟಿ ಸಾಲ ವಿತರಿಸಲಾಯಿತು. ಅರಹಳ್ಳಿ ಎಸ್‍ಎಫ್‌ಸಿಎಸ್‌ ಅಧ್ಯಕ್ಷ ಲಿಂಗೇಗೌಡ, ನಿರ್ದೇಶಕರಾದ ಬಾಬುಮೌನಿ, ವೆಂಕಟೇಶಪ್ಪ, ವೆಂಕಟಾಚಲಪತಿ, ಮುನಿಸ್ವಾಮಿರೆಡ್ಡಿ, ಮುನಿಸ್ವಾಮಿ, ಕೃಷ್ಣಪ್ಪ, ನಾರಾಯಣಸ್ವಾಮಿ, ಲಕ್ಷಮ್ಮ, ಕಿಟ್ಟಣ್ಣ, ರವಿ, ಕಾರ್ಯದರ್ಶಿ ಹರೀಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT