ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ಬಯಲು ಕೆಡಿಸಿದ ಬಯಲು ಕುಡಿತ

ರಸ್ತೆ ಬದಿ, ಮಾವಿನ ತೋಟದಲ್ಲಿ ಕುಡುಕರ ಹಾವಳಿ
Last Updated 13 ಜನವರಿ 2021, 4:19 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಬಯಲು ಕುಡಿತ ಹೆಚ್ಚಿದೆ. ಮದ್ಯದ ಅಂಗಡಿಯಿಂದ ಮದ್ಯ ಖರೀದಿಸಿ ರಸ್ತೆ ಅಥವಾ ರಸ್ತೆ ಪಕ್ಕದ ಮಾವಿನ ತೋಟಗಳಲ್ಲಿ ಕುಡಿದು ಕುಣಿದು ಕುಪ್ಪಳಿಸುವವರ ಸಂಖ್ಯೆ ಹೆಚ್ಚುತ್ತಿದೆ.

ಕೊರೊನಾ ಸಂಕಷ್ಟ ಶುರುವಾದ ಮೇಲೆ ಬಯಲು ಕುಡುಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಆಗ ಕೆಲವು ದಿನ ತಾಲ್ಲೂಕಿನ ಡಾಬಾಗಳಲ್ಲಿ ಮದ್ಯ ಮಾರಾಟಕ್ಕೆ ತೆರೆ ಎಳೆಯಲಾಗಿತ್ತು. ಬಾರ್‌ಗಳನ್ನು ಮುಚ್ಚಲಾಗಿತ್ತು. ಈ ಕಾರಣದಿಂದಾಗಿ ಕುಡುಕರ ಬಯಲಿಗೆ ಬಂದಿದ್ದರು. ಈಗ ಆ ಪರಿಪಾಠ ಮುಂದುವರಿದಿದೆ.

ಬಯಲು ಕುಡುಕರು ತಮ್ಮೊಂದಿಗೆ ಮದ್ಯದ ಬಾಟಲ್ ಮಾತ್ರ ತರುವುದಿಲ್ಲ. ಅವರಿಗೆ ಅಗತ್ಯವಾದ ಆಹಾರ, ನೀರಿನ ಬಾಟಲ್ ತರುತ್ತಾರೆ. ಕುಡಿದ ಬಳಿಕ ತಮ್ಮೊಂದಿಗೆ ತಂದ ಎಲ್ಲ ವಸ್ತುಗಳನ್ನೂ ಅಲ್ಲೇ ಬಿಟ್ಟು ತೆರಳುತ್ತಾರೆ.

ಇನ್ನು ಕೆಲವರು ಬೀರ್ ಬಾಟಲ್‌ಗಳನ್ನು ಒಡೆದು ಪ್ರತಾಪ ಮೆರೆಯುತ್ತಾರೆ. ಹಾಗೆ ಮಾಡುವುದರಿಂದ ಗಾಜಿನ ಚೂರುಗಳು ಹರಡಿ ಇಡೀ ಪ್ರದೇಶ ಭಯಾನಕವಾಗುತ್ತದೆ. ಬಿಟ್ಟ ಪ್ಲಾಸ್ಟಿಕ್ ವಸ್ತುಗಳು ಭೂಮಾಲಿನ್ಯ ಉಂಟು ಮಾಡುತ್ತವೆ.

ಇಷ್ಟು ಮಾತ್ರವಲ್ಲದೆ, ಈ ಬಯಲು ಕುಡುಕರು ಕೃಷಿಕ ಮಹಿಳೆಯರ ಭಯಕ್ಕೆ ಕಾರಣರಾಗಿದ್ದಾರೆ. ಹುಲ್ಲು ಹೊಟ್ಟಿಗಾಗಿ ಹೋಗುವ ಮಹಿಳೆಯರು ಗಿಡಮರಗಳ ಕೆಳಗೆ ಕುಳಿತು ಕುಡಿಯುವ ಜನರನ್ನು ಕಂಡು ದೂರ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ಹೀಗೆ ಕುಡಿಯುವವರಲ್ಲಿ ಯುವಕರ ಸಂಖ್ಯೆಯೇ ಹೆಚ್ಚು. ಇನ್ನು ಕಳೆದ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಂತೂ ಬಯಲು ಪಾರ್ಟಿಗಳು ಸಾಮಾನ್ಯವಾಗಿದ್ದವು ಎಂದು ಜನರು ಮಾತನಾಡಿಕೊಳ್ಳುತ್ತಾರೆ. ಇವೆಲ್ಲವೂ ಗುಮಾನಿಗೂ ಸಿಗದ ಗುಟ್ಟಿನ ಪಾರ್ಟಿಗಳಾಗಿದ್ದವು ಎನ್ನುವುದಲ್ಲಿ ಎರಡು ಮಾತಿಲ್ಲ.

ಕೆಲವರು ಪಟ್ಟಣದ ಹೊರವಲಯ ಹಾಗೂ ಗ್ರಾಮೀಣ ಪ್ರದೇಶದ ರಸ್ತೆಗಳು ಹಾಗೂ ರಸ್ತೆ ಪಕ್ಕದ ತೋಟಗಳಲ್ಲಿ ಸುತ್ತಾಡಿ, ಬಯಲು ಕುಡುಕರು ಕುಡಿದು ಬಿಟ್ಟ ಖಾಲಿ ಪ್ಲಾಸ್ಟಿಕ್ ಬಾಟಲ್‌ಗಳನ್ನು ಸಂಗ್ರಹಿಸಿ ಮಾರಿ ನಾಲ್ಕು ಕಾಸು ಗಳಿಸುತ್ತಿದ್ದಾರೆ. ಬಯಲು ಕುಡಿತ ಇಂಥ ಕೆಲವರಿಗೆ ಗಳಿಕೆಯ ಮಾರ್ಗವಾಗಿ ಪರಿಣಮಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಅನಾಗರಿಕ ವಾತಾವರಣ ನಿರ್ಮಾಣ ಮಾಡಿರುವ ಬಯಲು ಕುಡಿತವನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಟ್ಟ ಹಾಕಬೇಕು ಎಂಬುದು ಸಾರ್ವಜನಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT