ಗುರುವಾರ , ಜನವರಿ 23, 2020
19 °C

8ಕ್ಕೆ ಗ್ರಾಮೀಣ ಭಾರತ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಕೇಂದ್ರ ಸರ್ಕಾರದ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ದೇಶದೆಲ್ಲೆಡೆ ಜ.8ರಂದು ಗ್ರಾಮೀಣ ಭಾರತ ಬಂದ್ ಆಚರಿಸಲಾಗುವುದು’ ಎಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಕಾರ್ಯದರ್ಶಿ ಜಿ.ಸಿ.ಬಯ್ಯಾರೆಡ್ಡಿ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಂದ್‌ಗೆ ಬೆಂಬಲ ನೀಡುವಂತೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ರೈತರ ಸಮಾವೇಶ, ಜಾಗೃತಿ ಮೆರವಣಿಗೆ ನಡೆಸಲಾಗಿದೆ. ಜತೆಗೆ ರಾಪ್ಟ್ರಪತಿಗೆ ಬಂದ್‌ ಕರೆಯ ಪ್ರತಿ ನೀಡಲಾಗಿದೆ’ ಎಂದರು.

‘ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ರೈತರು ಹಲವು ಬಾರಿ ಹೋರಾಟ ಮಾಡಿದ್ದಾರೆ. ಆದರೆ, ಸರ್ಕಾರ ವರದಿ ಜಾರಿಗೊಳಿಸದೆ ರೈತರಿಗೆ ಅನ್ಯಾಯ ಮಾಡುತ್ತಿದೆ. ಎಲ್ಲಾ ಸರ್ಕಾರಗಳು ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ಹೀಗಾಗಿ ಬಂದ್‌ ನಡೆಸುವ ಅನಿವಾರ್ಯತೆ ಎದುರಾಗಿದೆ’ ಎಂದು ಹೇಳಿದರು.

‘ಬಿಜೆಪಿ ಸರ್ಕಾರವು ರೈತರ ಸಮಸ್ಯೆ ನಿವಾರಿಸುವಲ್ಲಿ ತಾರತಮ್ಯ ಮಾಡುತ್ತಿದೆ. ಫಸಲ್ ಭೀಮಾ ಯೋಜನೆ ಸೇರಿದಂತೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಲಾಭ ಉದ್ಯಮಿಗಳು ಹಾಗೂ ಕಂಪನಿಗಳ ಪಾಲಾಗುತ್ತಿದೆ. ದೇಶದಲ್ಲಿ ರೈತರಿಗೆ, ಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದರೂ ಪ್ರಶ್ನಿಸುವಂತಿಲ್ಲ. ಕೇಂದ್ರ ಸರ್ಕಾರ ಮನಸೋಇಚ್ಛೆ ಕಾನೂನು ತಿದ್ದುಪಡಿ ಮಾಡುತ್ತಿದೆ. ದುಡಿಯುವ ವರ್ಗಗಳು ದುರ್ಬಲಗೊಳ್ಳುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದೇಶದಲ್ಲಿ ಕೇಂದ್ರವೇ ರೈತರ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಿದೆ. ಜ.8ರಂದು ನಡೆಯುವ ಅಖಿಲ ಭಾರತ ಮುಷ್ಕರಕ್ಕೆ ಪ್ರತಿಯೊಬ್ಬರು ಬೆಂಬಲ ನೀಡಬೇಕು’ ಎಂದು ರೈತ ಸಂಘ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಮನವಿ ಮಾಡಿದರು.

ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ತಾಲ್ಲೂಕು ಘಟಕದ ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.ರಾಮೇಗೌಡ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು