ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕರು 3ನೇ ದರ್ಜೆ ಪ್ರಜೆಗಳಲ್ಲ: ಶಿವಣ್ಣ ಹೇಳಿಕೆ

ಸೇವೆಗೆ ಬೆಲೆ ಕಟ್ಟಲಾಗದು: ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಶಿವಣ್ಣ ಹೇಳಿಕೆ
Last Updated 17 ಮೇ 2022, 15:26 IST
ಅಕ್ಷರ ಗಾತ್ರ

ಕೋಲಾರ: ‘ಪೌರ ಕಾರ್ಮಿಕರು ಜೀವದ ಹಂಗು ತೊರೆದು ಹಗಲಿರುಳು ಸ್ವಚ್ಛತಾ ಕಾರ್ಯ ಮಾಡುತ್ತಾರೆ. ಅವರ ಸೇವೆಗೆ ಬೆಲೆ ಕಟ್ಟಲಾಗದು. ಅಧಿಕಾರಿಗಳು ಹಾಗೂ ಸಾರ್ವಜನಿಕರು ಪೌರ ಕಾರ್ಮಿಕರನ್ನು ಮೂರನೇ ದರ್ಜೆಯ ಪ್ರಜೆಗಳಂತೆ ಕಾಣಬಾರದು’ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಸೂಚಿಸಿದರು.

ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮತ್ತು ಗ್ರಾಮ ಪಂಚಾಯಿತಿಗಳ ಸ್ವಚ್ಛತಾ ಕಾರ್ಮಿಕರು ಹಾಗೂ ಪೌರ ಕಾರ್ಮಿಕರ ಜತೆ ಇಲ್ಲಿ ಮಂಗಳವಾರ ನಡೆದ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ‘ಪೌರ ಕಾರ್ಮಿಕರು ಕುಟುಂಬ ಸದಸ್ಯರಿಂದ ದೂರವಾಗಿ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಾರೆ. ಅವರು ಒಂದು ದಿನ ಕೆಲಸ ಮಾಡದಿದ್ದರೆ ಹಳ್ಳಿ, ಪಟ್ಟಣ ಅಥವಾ ನಗರದಲ್ಲಿ ಸ್ವಚ್ಛತೆ ಇರುವುದಿಲ್ಲ’ ಎಂದರು.

‘ಪೌರ ಕಾರ್ಮಿಕರಲ್ಲಿ ಶೇ 90ರಷ್ಟು ಮಂದಿ ನಾನಾ ಕಾಯಿಲೆಗೆ ತುತ್ತಾಗಿ ಸೇವಾವಧಿ ಪೂರ್ಣಗೊಳ್ಳುವ ಮುನ್ನವೇ ಮೃತಪಡುತ್ತಿದ್ದಾರೆ. ಶೇ 10ರಷ್ಟು ಮಂದಿ ಮಾತ್ರ ಸೇವಾವಧಿ ಪೂರ್ಣಗೊಳಿಸಿ ಪಿಂಚಣಿ ಪಡೆಯುತ್ತಾರೆ. ಹಗಲು ರಾತ್ರಿ ಸೇನಾನಿಗಳಂತೆ ಕೆಲಸ ಮಾಡುವ ಪೌರ ಕಾರ್ಮಿಕರನ್ನು ಸಮಾಜ ಗೌರವಯುತವಾಗಿ ಕಾಣಬೇಕು. ಅಧಿಕಾರಿಗಳು ಪೌರ ಕಾರ್ಮಿಕರಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಗ್ರಾ,ಪಂಗಳಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಸಮಸ್ಯೆ ಆಲಿಸುವ ಉದ್ದೇಶಕ್ಕೆ ಈ ಸಭೆ ನಡೆಸುತ್ತಿದ್ದೇವೆ. ಪೌರ ಕಾರ್ಮಿಕರ ತಮ್ಮ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ ನನಗೆ ನೇರವಾಗಿ ತಿಳಿಸಿದರೆ ಪರಿಹರಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಅವಿಭಾಜ್ಯ ಅಂಗ: ‘ಪೌರ ಕಾರ್ಮಿಕರು ಸಹ ಮನುಷ್ಯರೇ. ಜನರು ಅವರನ್ನು ಸಮಾಜದ ಅವಿಭಾಜ್ಯ ಅಂಗವೆಂದು ಪರಿಗಣಿಸಬೇಕು. ಆದರೆ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವ ಪೌರ ಕಾರ್ಮಿಕರನ್ನು ಸಮಾಜ ಮೂರನೇ ದರ್ಜೆಯ ಪ್ರಜೆಗಳಂತೆ ಕಾಣುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪೌರ ಕಾರ್ಮಿಕರು ಕೆಲಸದ ಜತೆಗೆ ಆರೋಗ್ಯದ ಕಡೆ ಗಮನ ಹರಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೂಡಿಸಿ ಸುಶಿಕ್ಷಿತರಾಗಿ ಮಾಡುವ ಮೂಲಕ ಭವಿಷ್ಯ ಉಜ್ವಲಗೊಳಿಸಬೇಕು. ಕೆಲಸದ ಸಮಯದಲ್ಲಿ ಅಗತ್ಯ ರಕ್ಷಣಾ ಪರಿಕರಗಳನ್ನು ಧರಿಸಿ ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳು ಪೌರ ಕಾರ್ಮಿಕರಿಗೆ ಸುರಕ್ಷತಾ ಸಲಕರಣೆಗಳನ್ನು ಕಲ್ಪಿಸಬೇಕು’ ಎಂದು ಹೇಳಿದರು.

‘ಪೌರ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ತಿಂಗಳಿಗೊಮ್ಮೆ ಅವರಿಗೆ ಆರೋಗ್ಯ ತಪಾಸಣೆ ಶಿಬಿರ ನಡೆಸಬೇಕು.ಜತೆಗೆ ವಿಶ್ರಾಂತಿ ಗೃಹಗಳನ್ನು ಕಲ್ಪಿಸಬೇಕು. ಪ್ರತಿ ತಿಂಗಳು 10ನೇ ತಾರೀಖಿನೊಳಗೆ ವೇತನ ಪಾವತಿಸಬೇಕು. ನೇಮಕಾತಿಯಲ್ಲಿ ವಿಳಂಬ ಮಾಡದೆ ನಿಯಮಾನುಸಾರ ನೇಮಕ ಮಾಡಬೇಕು. ಸರ್ಕಾರ ಹಾಗೂ ಆಯೋಗವು ಪೌರ ಕಾರ್ಮಿಕರ ಬೆನ್ನೆಲುಬಾಗಿ ನಿಲ್ಲುತ್ತದೆ’ ಎಂದರು.

‘ಜಿಲ್ಲೆಯ ಪ್ರತಿ ಗ್ರಾ.ಪಂನಲ್ಲಿ ವಾಟರ್‌ಮನ್‌, ಸ್ವಚ್ಛತಾ ಸಿಬ್ಬಂದಿಗೆ ಅವರ ವಿದ್ಯಾಭ್ಯಾಸ ಮತ್ತು ಸೇವಾನುಭವಕ್ಕೆ ಅನುಗುಣವಾಗಿ ಬಡ್ತಿ ನೀಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯುಕೇಶ್‌ಕುಮಾರ್ ವಿವರಿಸಿದರು.

ಜಿಲ್ಲಾಧಿಕಾರಿ ವೆಂಕಟ್‌ರಾಜಾ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಯೋಜನಾ ನಿರ್ದೇಶಕ ಶರಣಪ್ಪ, ಸದಸ್ಯರಾದ ಪದ್ಮಾ, ಭಾಸ್ಕರ್, ಸುಭಾಷ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ, ಜಿಲ್ಲೆಯ ನಗರಸಭೆ ಮತ್ತು ಪುರಸಭೆಗಳ ಆಯುಕ್ತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT