ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಂಡ, ಮಾನಗೆಟ್ಟ ರಾಜ್ಯ ಸರ್ಕಾರ

ಅಕ್ಕಿ ಬೇಳೆ ವಿತರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಕಿಡಿ
Last Updated 18 ಮೇ 2021, 4:10 IST
ಅಕ್ಷರ ಗಾತ್ರ

ಕೆಜಿಎಫ್‌: ‘ಬಿಜೆಪಿ ಸರ್ಕಾರದಂತಹ ಮಾನಗೆಟ್ಟ, ದಪ್ಪ ಚರ್ಮದ ಸರ್ಕಾರವನ್ನು ಹಿಂದೆಂದೂ ನೋಡಿಲ್ಲ’ ಎಂದು ವಿರೋಧ ‍ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ರಾಬರ್ಟಸನ್‌ ಪೇಟೆಯಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷವು ಆಯೋಜಿಸಿದ್ದ ಅಕ್ಕಿ ಬೇಳೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಸಾಧ್ಯವಾದಷ್ಟು ನೆರವು ನೀಡಬೇಕು ಎಂದು ಪಕ್ಷವು ಎಲ್ಲಾ ಶಾಸಕರಿಗೆ ಮತ್ತು ಮುಖಂಡರಿಗೆ ತಿಳಿಸಿತ್ತು. ಅದರಂತೆ ಕೆಜಿಎಫ್ ಶಾಸಕಿ 30 ಸಾವಿರ ಕುಟುಂಬಕ್ಕೆ ಅಕ್ಕಿ ಮತ್ತು ಬೇಳೆ ನೀಡುತ್ತಿರುವುದು ಶ್ಲಾಘನೀಯ. ಇದು ರಾಜ್ಯಕ್ಕೆ ಮಾದರಿ’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ಕೆಜಿಎಫ್‌ನಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಪ್ರತಿನಿತ್ಯ ಬೆಂಗಳೂರಿಗೆ ಹೋಗಿ ಕೆಲಸ ಮಾಡುತ್ತಿದ್ದರು. ಈಗ ಕೆಲಸ ಇಲ್ಲದೆ ಮನೆಯಲ್ಲಿದ್ದಾರೆ. ಇಂತಹವರಿಗೆ ನೆರವು ನೀಡಬೇಕು. ಲಾಕ್‌ಡೌನ್‌ ಮಾಡಿ, ನಾವು ಬೆಂಬಲ ನೀಡುತ್ತೇವೆ. ಎಲ್ಲರಿಗೂ ಹತ್ತು ಕೆಜಿ ಅಕ್ಕಿ, ₹10 ಸಾವಿರ ರೂಪಾಯಿ ಕೊಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದೆವು. ಇದರಿಂದ ಸುಮಾರು ₹25 ಸಾವಿರ ಕೋಟಿ ಖರ್ಚಾಗುತ್ತಿತ್ತು. ಅದೇನು ಯಡಿಯೂರಪ್ಪ ಅಥವಾ ಸುಧಾಕರ್ ಮನೆಯಿಂದ ಕೊಡುತ್ತಿರಲಿಲ್ಲ. ಅದು ಜನರ ದುಡ್ಡು. ಕೆರೆಯ ನೀರನ್ನು ಕೆರೆಗೆ ಚೆಲ್ಲಿದ ರೀತಿ ಆಗುತ್ತಿತ್ತು. ನಾನು ಅಧಿಕಾರದಲ್ಲಿ ಇದ್ದಿದ್ದರೆ ಎಲ್ಲರಿಗೂ ಹತ್ತು ಕೆ.ಜಿ ಅಕ್ಕಿ, ಹತ್ತು ಸಾವಿರ ಕೊಟ್ಟು ಕೋವಿಡ್ ಅವಧಿಯಲ್ಲಿ ಮನೆ ಬಿಟ್ಟು ಹೊರಗೆ ಬರಬೇಡಿ ಎಂದು ಹೇಳುತ್ತಿದ್ದೆ’ ಎಂದು ಹೇಳಿದರು.

‘ಕೋವಿಡ್ ಪರೀಕ್ಷೆ ಮಾಡುವುದನ್ನು ಕಡಿಮೆ ಮಾಡಿ, ಕೋವಿಡ್ ನಿಯಂತ್ರಣದಲ್ಲಿ ಇದೆ ಎಂದು ಹೇಳುತ್ತಿದ್ದಾರೆ. ಪರೀಕ್ಷೆ ಮಾಡಿಸಿಕೊಳ್ಳಲು ಆಗದೆ ಜನ ಆಸ್ಪತ್ರೆಯಿಂದ ವಾಪಸ್ ಬರುತ್ತಿದ್ದಾರೆ. 18 ವರ್ಷ ಮೇಲ್ಪಟ್ಟರವರಿಗೆ ಲಸಿಕೆ ಹಾಕುತ್ತೇವೆ ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಸಿಕೆ ಇಲ್ಲದೆ ನಿಲ್ಲಿಸಿದರು. ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಆಮ್ಲಜನಕ, ಹಾಸಿಗೆ, ಆಂಬುಲೆನ್ಸ್‌ ನೀಡಲು ಸರ್ಕಾರಕ್ಕೆ ಆಗಲಿಲ್ಲ. ನಿಮಗೆ ಅಧಿಕಾರ ನಡೆಸಲು ಸಾಧ್ಯವಿಲ್ಲದೆ ಇದ್ದರೆ ಬಿಟ್ಟುಹೋಗಿ, ನಾವು ನಡೆಸುತ್ತೇವೆ ಎಂದರೂ ಬಿಡುವುದಿಲ್ಲ. ಭಂಡರು, ಮಾನಗೆಟ್ಟವರು, ಸುಳ್ಳೇ ಅವರ ಮನೆ ದೇವರು’ ಎಂದು ಸಿದ್ದರಾಮಯ್ಯ ಜರಿದರು.

ರಾಜ್ಯಕ್ಕೆ ಮಾದರಿ: ‘ಕೋವಿಡ್ ಸಂದರ್ಭದಲ್ಲಿ ಹೊರಗೆ ಬರಲು ಧೈರ್ಯ ಮಾಡದ ಸಂದರ್ಭದಲ್ಲಿ ಸಂಪನ್ಮೂಲ ಒಟ್ಟು ಮಾಡಿ 30 ಸಾವಿರ ಕುಟುಂಬಗಳಿಗೆ ಅಕ್ಕಿ ಬೇಳೆ ಕೊಟ್ಟು ರಾಜ್ಯಕ್ಕೆ ಮಾದರಿಯಾಗುವ ಕೆಲಸವನ್ನು ಶಾಸಕಿ ರೂಪಕಲಾ ಮಾಡಿದ್ದಾರೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಮುಂದಿನ ಬಾರಿ ಕೂಡ ಅವರನ್ನು ಶಾಸಕರನ್ನಾಗಿ ಮಾಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

30 ಸಾವಿರ ಕುಟುಂಬಕ್ಕೆ ದಿನಸಿ ನೀಡಿದ ಕೆಲಸದ ವರದಿಯನ್ನು ಸೋನಿಯಾಗಾಂಧಿ, ರಾಹುಲ್ ಗಾಂಧಿ, ಸುರ್ಜಿತ್‌ ವಾಲ ರವರಿಗೆ ಕಳಿಸುತ್ತೇನೆ ಎಂದು ಅವರು ಹೇಳಿದರು.

‘ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಿ ಕಾರ್ಯಕ್ರಮ ಮಾಡುವುದು ಅತ್ಯಂತ ಕಷ್ಟದ ಕೆಲಸವಾಗಿತ್ತು. ಸಾಕಷ್ಟು ಒತ್ತಡವಿತ್ತು. ಆದ್ದರಿಂದ ಪಕ್ಷವನ್ನು ಕಟ್ಟಿದ್ದ ಹಲವಾರು ನಾಯಕರು, ನಗರಸಭೆ ಸದಸ್ಯರಿಗೆ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಗಲಿಲ್ಲ. ಬಡವರಿಗೆ ಅಕ್ಕಿ ಕೊಡಬೇಕು ಎನ್ನುವ ಸದುದ್ದೇಶ ಇಲ್ಲಿರುವುದರಿಂದ ಕಾರ್ಯಕರ್ತರು ತಪ್ಪು ತಿಳಿಯಬಾರದು’ ಎಂದು ಶಾಸಕಿ ಎಂ.ರೂಪಕಲಾ ತಿಳಿಸಿದರು.

ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್, ಹೊಸಕೋಟೆ ಶಾಸಕ ಶರತ್, ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಆರ್.ಸುದರ್ಶನ್, ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊದಲೈಮುತ್ತು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT