ಮಂಗಳವಾರ, ಜನವರಿ 18, 2022
15 °C
ವೃತ್ತ–ರಸ್ತೆಗಳಲ್ಲಿ ಕನ್ನಡಪರ ಸಂಘ ಸಂಸ್ಥೆಗಳ ಸದಸ್ಯರಿಂದ ಭಾವಪೂರ್ಣ ಶ್ರದ್ಧಾಂಜಲಿ

ಚಂಪಾ ನಿಧನಕ್ಕೆ ಸಾಹಿತ್ಯಾಸಕ್ತರ ಕಂಬನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಚಂಪಾ’ ಎಂದೇ ಖ್ಯಾತರಾಗಿದ್ದ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರ ನಿಧನಕ್ಕೆ ಸಾಹಿತ್ಯಾಸಕ್ತರು ಇಲ್ಲಿ ಸೋಮವಾರ ಕಂಬನಿ ಮಿಡಿದರು. ಚಂಪಾರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕನ್ನಡಪರ ಸಂಘ ಸಂಸ್ಥೆಗಳ ಸದಸ್ಯರು ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಜಮಾಯಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿಯಲ್ಲಿ ಚಂದ್ರಶೇಖರ ಪಾಟೀಲರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಪರಿಷತ್‌ ಅಧ್ಯಕ್ಷ ಎನ್.ಬಿ.ಗೋಪಾಲಗೌಡ, ‘ಕನ್ನಡದ ವಿಚಾರ ಬಂದಾಗ ಯಾವುದೇ ರಾಜಿ ಮಾಡಿಕೊಳ್ಳದೆ ಕನ್ನಡ ಪರ ನಿಲುವು ತೆಗೆದುಕೊಳ್ಳುತ್ತಿದ್ದ ಚಂಪಾ ಅವರು ಕನ್ನಡ ಕಟ್ಟುವ ಕೆಲಸದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು’ ಎಂದು ಸ್ಮರಿಸಿದರು.

‘ಚಂದ್ರಶೇಖರ ಪಾಟೀಲರು ಹಲವು ಯುವ ಬರಹಗಾರರಿಗೆ ಸ್ಫೂರ್ತಿಯಾಗಿ ಅವರ ಬೆಳವಣಿಗೆಗೆ ಪ್ರೋತ್ಸಾಹಿಸಿದರು. ಅವರು ಗೋಕಾಕ್ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದು, ಕನ್ನಡ ಪರವಾದ ದೊಡ್ಡ ಧ್ವನಿಯಾಗಿದ್ದರು. ಇಂತಹ ಕನ್ನಡಪರ ಹೋರಾಟಗಾರ ಮತ್ತು ಸಾಹಿತ್ಯದ ಕೊಂಡಿ ಕಳಚಿರುವುದು ನೋವಿನ ಸಂಗತಿ’ ಎಂದರು.

‘ನಾಡಿನಾದ್ಯಂತ ನೆಲ, ಜಲ, ಭಾಷೆ ವಿಚಾರವಾಗಿ ಚಂಪಾರ ಧ್ವನಿ ಸರ್ಕಾರಗಳನ್ನು ಎಚ್ಚರಿಸುತ್ತಿತ್ತು. ಬಂಡಾಯದ ಸಾಹಿತಿ ಎಂದೇ ಗುರುತಿಸಿಕೊಂಡಿರುವ ಚಂಪಾ ಅವರ ಕೊಡುಗೆ ಅಪಾರ. ಅದ್ಭುತ ನಾಟಕಗಳನ್ನು ರಚಿಸುವ ಮೂಲಕ ಜನಸಾಮಾನ್ಯರ ಮನಸ್ಸುಗಳಿಗೆ ಹತ್ತಿರವಾದರು. ಅವರ ಅದ್ಭುತ ಜ್ಞಾನ ಮತ್ತು ಹರಿತವಾದ ಭಾಷಣ ಎಂಥಹವರನ್ನೂ ಮೋಡಿ ಮಾಡುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.

‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಚಂಪಾರ ಸೇವೆ ಅನನ್ಯವಾಗಿತ್ತು. ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅವರು ಕನ್ನಡಿಗರಿಗೆ ನೀಡಿದ ಸಂದೇಶ ಅದ್ಭುತವಾಗಿತ್ತು’ ಎಂದು ಹೇಳಿದರು.

ಬದುಕು ಮೀಸಲಿಟ್ಟರು: ‘ಚಂಪಾ ಎಂದೇ ಸಾರಸ್ವತ ಲೋಕದಲ್ಲಿ ಹೆಸರಾಗಿದ್ದ ಚಂದ್ರಶೇಖರ ಪಾಟೀಲರು ಸಾಹಿತ್ಯ ಕೃಷಿಯ ಜತೆಗೆ ನಾಡು, ನುಡಿ, ನೆಲಕ್ಕಾಗಿ ಬದುಕು ಮೀಸಲಿಟ್ಟಿದ್ದರು. ಕನ್ನಡ ನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭಾಷಾ ಚಳವಳಿಗಳಲ್ಲಿ ಹೋರಾಟ ನಡೆಸಿದವರು’ ಎಂದು ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಕೆ.ಆರ್.ತ್ಯಾಗರಾಜ್ ಅಭಿಪ್ರಾಯಪಟ್ಟರು.

‘ಹಾವೇರಿ ಜಿಲ್ಲೆಯಲ್ಲಿ ಜನಿಸಿದ ಚಂಪಾ ಅವರು ಅಧ್ಯಾಪಕರಾಗಿ ಸೇವೆ ಆರಂಭಿಸಿ ಅನೇಕ ಸಾಹಿತ್ಯ ಕೃತಿ ರಚಿಸಿದರು. ಸಂಕ್ರಮಣ ಪತ್ರಿಕೆಯ ಮೂಲಕ ಅನೇಕ ಲೇಖಕರನ್ನು ಬೆಳೆಸಿದ ಕೀರ್ತಿ ಪಾಟೀಲರಿಗೆ ಸಲ್ಲುತ್ತದೆ. ಕನ್ನಡ ಭಾಷೆಗೆ ಸಮಸ್ಯೆ ಎದುರಾದಾಗಲೆಲ್ಲಾ ಕನ್ನಡದ ಉಳಿವಿಗಾಗಿ ನಿರಂತರ ಹೋರಾಟ ಮಾಡಿದವರು’ ಎಂದು ಬಣ್ಣಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.