ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಫೈನಾನ್ಸ್‌ಗೆ ಕಡಿವಾಣ ಹಾಕಿ: ಶಾಸಕ ರಮೇಶ್‌ಕುಮಾರ್‌ ಕಿವಿಮಾತು

Last Updated 8 ಜುಲೈ 2021, 13:50 IST
ಅಕ್ಷರ ಗಾತ್ರ

ಕೋಲಾರ: ‘ಬಡ ಜನರ ರಕ್ತ ಹೀರುವ ಖಾಸಗಿ ಫೈನಾನ್ಸ್‌ಗಳಿಗೆ ಕಡಿವಾಣ ಹಾಕುವ ಬದ್ಧತೆಯೊಂದಿಗೆ ಕೆಲಸ ಮಾಡಿ’ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್‌) ಸಿಇಒಗಳಿಗೆ ತಾಕೀತು ಮಾಡಿದರು.

ಇಲ್ಲಿ ಗುರುವಾರ ನಡೆದ ಶ್ರೀನಿವಾಸಪುರ ತಾಲ್ಲೂಕಿನ ವ್ಯಾಪ್ತಿಯ ಪ್ಯಾಕ್ಸ್‌ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಸಹಕಾರಿ ರಂಗ ಬಲಗೊಳಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಲ ಸೌಲಭ್ಯ ಕಲ್ಪಿಸಿ’ ಎಂದು ಕಿವಿಮಾತು ಹೇಳಿದರು.

‘ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಪರವಾನಗಿ ಪಡೆದ ಕೆಲ ಫೈನಾನ್ಸ್‌ಗಳು ಜನರಿಗೆ ಚಿನ್ನಾಭರಣ ಸಾಲ ಕೊಟ್ಟು, ಅವರು ಸಾಲ ಕಟ್ಟದ ಕಾರಣ ಸುಮಾರು ಮೂರೂವರೆ ಸಾವಿರ ಕೆ.ಜಿ ಚಿನ್ನ ಹರಾಜು ಹಾಕಿವೆ. ರೈತರ ಅಡವಿಟ್ಟಾಗ ಇದ್ದ ಚಿನ್ನದ ಬೆಲೆ ಹಾಗೂ ಈಗಿನ ಬೆಲೆ ಹೋಲಿಕೆ ಮಾಡಿದರೆ ಶೇ 280ರಷ್ಟು ಏರಿಕೆಯಾಗಿದೆ. ಇದೊಂದು ಸಾವಿರಾರು ಕೋಟಿಯ ಹಗರಣ’ ಎಂದು ಗುಡುಗಿದರು.

‘ವಂಚಕ ಫೈನಾನ್ಸ್‌ಗಳಿಂದ ರೈತರು, ಮಹಿಳೆಯರನ್ನು ಉಳಿಸಲು ಸಹಕಾರಿ ವ್ಯವಸ್ಥೆಯಿಂದ ಮಾತ್ರ ಸಾಧ್ಯ, ಸೊಸೈಟಿ ವ್ಯಾಪ್ತಿಯಲ್ಲಿ ಮಹಿಳಾ ಸಂಘಗಳ ಸಂಖ್ಯೆ ಹೆಚ್ಚಿಸಿ. ಬಡ್ಡಿರಹಿತ ಸಾಲ ನೀಡುವ ಮೂಲಕ ಫೈನಾನ್ಸ್‌ ಕಂಪನಿಗಳಿಗೆ ಬೀಗ ಹಾಕಿಸಬಹುದು’ ಎಂದು ಅಭಿಪ್ರಾಯಪಟ್ಟರು.

‘ಬಡ ಜನರು, ರೈತರು ಬ್ಯಾಂಕ್‌ಗೆ ಹೋಗದೆ ಸೊಸೈಟಿಗೆ ಬರಬೇಕು. ಸೊಸೈಟಿಗಳಲ್ಲಿ ರೈತರಿಗೆ ಅಗತ್ಯವಾದ ಕೃಷಿ ಸಲಕರಣೆ ಸಿಗುವ ಮಾಲ್‌ ಸ್ಥಾಪಿಸಿ. ಈ ಪ್ರಯೋಗಕ್ಕೆ ಜಿಲ್ಲೆಯಲ್ಲಿ ಬುನಾದಿ ಹಾಕೋಣ. ಟಿಎಪಿಸಿಎಂಎಸ್‌ಗಳನ್ನು ಮಾಲ್‌ಗಳಾಗಿ ಪರಿವರ್ತಿಸಿ ನೇರ ಕಂಪನಿಗಳಿಂದ ಸಲಕರಣೆ, ಕೀಟನಾಶಕ ತರಿಸಿ ರೈತರಿಗೆ ಮಾರಾಟ ಮಾಡಬೇಕು. ಜತೆಗೆ ಜನೌಷಧ ಮಳಿಗೆ ಆರಂಭಿಸಿ ಬಡವರಿಗೆ ನೆರವಾಗಬೇಕು’ ಎಂದರು.

ಶೇ 6ರಷ್ಟು ಸದಸ್ಯತ್ವ: ‘ರಾಜ್ಯದಲ್ಲಿ ಸಹಕಾರಿ ಸದಸ್ಯತ್ವ ಶೇ 6ರಷ್ಟಿದೆ. ಶ್ರೀಮಂತರ ಸ್ವತ್ತಾಗಿದ್ದ ಬ್ಯಾಂಕ್‌ಗಳನ್ನು ಇಂದಿರಾಗಾಂಧಿ ರಾಷ್ಟ್ರೀಕರಣಗೊಳಿಸಿದರು. ಆದರೆ, ಈ ಖುಷಿ ಸ್ವಲ್ಪ ದಿನ ಮಾತ್ರ ಇತ್ತು. ನಂತರ ಬ್ಯಾಂಕ್‌ಗಳಿಂದ ಗ್ರಾಮೀಣ ಜನರಿಗೆ ಸಹಾಯವಾಗಲಿಲ್ಲ. ಸೊಸೈಟಿ ಸಿಇಒಗಳು ಸಾಲ ವಸೂಲಾತಿ ಮತ್ತು ವಿತರಣೆಗೆ ನೆಪ ಹೇಳುವುದಾದರೆ ಸಹಕಾರಿ ವ್ಯವಸ್ಥೆಯಲ್ಲಿ ಇರಲು ಯೋಗ್ಯರಲ್ಲ’ ಎಂದು ಹೇಳಿದರು.

‘ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ಜಿಲ್ಲೆಯ ಎಲ್ಲಾ ಕೆರೆಗಳಿಗೆ ತುಂಬಿದರೆ ಅಂತರ್ಜಲ ವೃದ್ದಿಯಾಗಿ 500 ಅಡಿಗೆ ಬಂದರೆ ರೈತರು ಸ್ವಾಭಿಮಾನದಿಂದ ಬದುಕಬಹುದು. ಜನರಲ್ಲಿ ಕೊಳ್ಳುವ ಶಕ್ತಿ ಹೆಚ್ಚಾಗಲು ಇನ್ನಷ್ಟು ಸ್ವಸಹಾಯ ಸಂಘಗಳನ್ನು ರಚಿಸಿ’ ಎಂದು ಸಲಹೆ ನೀಡಿದರು.

ಸೊಸೈಟಿಗಳು ವಿಫಲ: ‘ಇ-ಶಕ್ತಿ ಅನುಷ್ಠಾನ ಹಾಗೂ ಪ್ಯಾಕ್ಸ್‌ಗಳ ಗಣಕೀಕರಣದಲ್ಲಿ ರಾಜಿಯಿಲ್ಲ. ಈ ಕಾರ್ಯಕ್ಕೆ ಮಣಿಗಾನಹಳ್ಳಿ, ಮರಸನಪಲ್ಲಿ, ವೇಂಪಲ್ಲಿ ಸೊಸೈಟಿಗಳು ಸ್ಪಂದಿಸುತ್ತಿಲ್ಲ. ಸ್ವಸಹಾಯ ಸಂಘಗಳ ರಚನೆ, ಗಣಕೀಕರಣ, ಸಾಲ ವಸೂಲಾತಿ ಮತ್ತು ವಿತರಣೆಗೆ ಪ್ರಸ್ತಾವ ಸಲ್ಲಿಸುವಲ್ಲಿ ಕೆಲ ಸೊಸೈಟಿಗಳು ವಿಫಲವಾಗಿವೆ. ಕೆಲಸ ಮಾಡುವುದಾದರೆ ಇರಿ, ಇಲ್ಲವೇ ರಾಜೀನಾಮೆ ಕೊಟ್ಟು ಹೋಗಿ’ ಎಂದು ಸೊಸೈಟಿ ಸಿಇಒಗಳನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತರಾಟೆಗೆ ತೆಗೆದುಕೊಂಡರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಎಂ.ಎಲ್.ಅನಿಲ್‌ಕುಮಾರ್‌, ವೆಂಕಟರೆಡ್ಡಿ, ವೃತ್ತಿನಿರತ ನಿರ್ದೇಶಕ ಎಸ್.ವಿ.ಸುಧಾಕರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಶೋಕ್, ಎಸ್‍ಎಫ್‌ಸಿಎಸ್‌ ಅಧ್ಯಕ್ಷರಾದ ತಿಮ್ಮರಾಯಪ್ಪ, ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT