ಮಂಗಳವಾರ, ಮೇ 17, 2022
23 °C
ರೇಷ್ಮೆ ಇಲಾಖೆ ಉಪನಿರ್ದೇಶಕ ಕಾಳಪ್ಪ ಅಭಿಪ್ರಾಯ

ರೇಷ್ಮೆ ಕೃಷಿ ರೈತರ ಆರ್ಥಿಕ ಜೀವಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪ ಹಾಗೂ ಅಧಿಕ ಉಷ್ಣಾಂಶದಿಂದ ರೇಷ್ಮೆ ಬೆಳೆಗಾರರು ಬೆಳೆ ನಷ್ಟ ಆಗುವುದನ್ನು ತಪ್ಪಿಸಲು ಹುಳು ಸಾಕಾಣಿಕೆ ಕೊಠಡಿಯಲ್ಲಿ ಸಮರ್ಪಕವಾಗಿ ತೇವಾಂಶ ನಿರ್ವಹಣೆ ಮಾಡಬೇಕು’ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕ ಟಿ.ಎಂ.ಕಾಳಪ್ಪ ಸಲಹೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರ ಮತ್ತು ರೇಷ್ಮೆ ಇಲಾಖೆ ಸಹಯೋಗದಲ್ಲಿ ಇಲ್ಲಿ ಮಂಗಳವಾರ ರೇಷ್ಮೆ ಬೆಳೆಗಾರರಿಗೆ ಹಮ್ಮಿಕೊಂಡಿದ್ದ ‘ಬೇಸಿಗೆಯಲ್ಲಿ ಹಿಪ್ಪುನೇರಳೆ ತೋಟ ಹಾಗೂ ದ್ವಿತಳಿ ರೇಷ್ಮೆ ಹುಳು ನಿರ್ವಹಣೆ’ ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ರೇಷ್ಮೆ ಕೃಷಿಯು ಜಿಲ್ಲೆಯ ರೈತರ ಆರ್ಥಿಕ ಜೀವಾಳವಾಗಿದೆ. ಈ ಉದ್ಯಮದಲ್ಲಿ ಖರ್ಚು ಕಡಿಮೆ ಮಾಡಿ ಲಾಭ ಹೆಚ್ಚಿಸುವ ಹಾದಿಯಲ್ಲಿ ಇಲಾಖೆ ನೀಡುವ ತಂತ್ರಜ್ಞಾನದ ಸದುಪಯೋಗ ಪಡೆಯಬೇಕು. ನೂಲು ಬಿಚ್ಚಾಣಿಕೆದಾರರು ಗುಣಮಟ್ಟದ ನೆಪ ಮಾಡಿಕೊಂಡು ಚೀನಾ ರೇಷ್ಮೆಗೆ ಬೇಡಿಕೆಯೊಡ್ಡುತ್ತಾರೆ. ರೈತರು ಗುಣಮಟ್ಟದ ರೇಷ್ಮೆಗೂಡು ಉತ್ಪಾದಿಸಿದರೆ ಚೀನಾ ರೇಷ್ಮೆ ಆಮದು ನಿಲ್ಲುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಚೀನಾ ರೇಷ್ಮೆ ಆಮದು ತಡೆ ಜತೆಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭದಾಯಕವಾಗಿ ರೇಷ್ಮೆ ಕೃಷಿ ನಿರ್ವಹಣೆ ಮಾಡಲು ರೈತರು ತಾಂತ್ರಿಕ ಅರಿವು ಪಡೆಯಬೇಕು. ದ್ವಿತಳಿ ರೇಷ್ಮೆಗೂಡು ಉತ್ಪಾದನೆಗೆ ಇಲಾಖೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ರೇಷ್ಮೆ ಬೆಳೆಗಾರರು ದ್ವಿತಳಿ ರೇಷ್ಮೆಗೂಡಿನ ಉತ್ಪಾದನೆಗೆ ಹೆಚ್ಚು ಒತ್ತು ಕೊಡಬೇಕು’ ಎಂದು ಸೂಚಿಸಿದರು.

‘ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆಯಿದೆ. ರೇಷ್ಮೆ ಬೆಳೆಗಾರರು ಆಧುನಿಕ ತಾಂತ್ರಿಕತೆ ಅಳವಡಿಸಿಕೊಳ್ಳುವ ಮೂಲಕ ಹಿಪ್ಪುನೇರಳೆ ಮತ್ತು ದ್ವಿತಳಿ ರೇಷ್ಮೆಗೂಡಿನ ಇಳುವರಿ ಹೆಚ್ಚಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ದೇಶದ ರೈತರು ಗುಣಮಟ್ಟದ ರೇಷ್ಮೆ ಉತ್ಪಾದಿಸಿದರೆ ನೂಲು ಬಿಚ್ಚಾಣಿಕೆದಾರರು ಸ್ವದೇಶಿ ನೂಲು ಖರೀದಿಸುತ್ತಾರೆ. ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದು’ ಎಂದರು.

ಸೂಕ್ತ ಹವಾಗುಣ: ‘ರೇಷ್ಮೆ ಹುಳು ಸಾಕಾಣಿಕೆಗೆ ರಾಜ್ಯದ ಹವಾಗುಣ ಹೆಚ್ಚು ಸೂಕ್ತವಾಗಿದ್ದು, ವರ್ಷವಿಡೀ ರೇಷ್ಮೆ ಹುಳು ಸಾಕಾಣಿಕೆ ಮಾಡಬಹುದು. ಸುಧಾರಿತ ತಾಂತ್ರಿಕತೆ ಅಳವಡಿಸಿಕೊಂಡು ಕಾಲಕ್ಕೆ ತಕ್ಕಂತೆ ನಿರ್ವಹಣೆ ಮಾಡುವ ಮೂಲಕ ಗುಣಮಟ್ಟದ ರೇಷ್ಮೆಗೂಡು ಉತ್ಪಾದಿಸಿ ಸರ್ಕಾರಿ ನೌಕರರಂತೆ ಸಂಬಳ ಗಳಿಸಬಹುದು’ ಎಂದು ‌ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಕೆ.ತುಳಸಿರಾಮ್‌ ಕಿವಿಮಾತು ಹೇಳಿದರು.

‘ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಉತ್ತಮ ಭವಿಷ್ಯವಿದೆ. ಭವಿಷ್ಯದಲ್ಲಿ ಭಾರತದ ರೇಷ್ಮೆಗೆ ಬೇಡಿಕೆ ಹೆಚ್ಚಲಿದೆ. ರೈತರು ನರೇಗಾದಡಿ ಹಿಪ್ಪುನೇರಳೆ ತೋಟದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು. ಗುಣಮಟ್ಟದ ಹಿಪ್ಪುನೇರಳೆ ಬೆಳೆಯಲು ಗಮನ ಹರಿಸಬೇಕು. ಕೇಂದ್ರ ಸರ್ಕಾರವು ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿಗೆ ಹೆಚ್ಚು ಉತ್ತೇಜನ ನೀಡುತ್ತಿದೆ. ಸಾವಯವ ಆಧಾರಿತ ಗೊಬ್ಬರಗಳನ್ನು ಉತ್ಪಾದಿಸುವ ಮೂಲಕ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ ಕಡಿಮೆ ಮಾಡಬೇಕು’ ಎಂದರು.

ಫಲವತ್ತತೆ ಕಾಪಾಡಿ: ‘ರೇಷ್ಮೆ ಬೆಳೆಗಾರರು ಸಾವಯವ ಕೃಷಿ ತಾಂತ್ರಿಕತೆಗಳಾದ ಎರೆಗೊಬ್ಬರ, ಸಾವಯವ ಗೊಬ್ಬರ, ದ್ರವ ರೂಪದ ಸಾವಯವ ಗೊಬ್ಬರ ಉತ್ಪಾದನೆ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಬೇಕು ಮತ್ತು ಪರಿಸರ ಸಂರಕ್ಷಣೆ ಮಾಡಬೇಕು. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 11 ಸ್ವಯಂಚಾಲಿತ ರೇಷ್ಮೆನೂಲು ಬಿಚ್ಚಾಣಿಕೆ ಯಂತ್ರ ಸ್ಥಾಪಿಸಲಾಗಿದ್ದು, ಈ ಯಂತ್ರಗಳಿಂದ ವಿಶ್ವ ದರ್ಜೆಯ ರೇಷ್ಮೆ ನೂಲು ಉತ್ಪಾದಿಸಬಹುದು’ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಎಂ.ಮಂಜುನಾಥ್‌ ವಿವರಿಸಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಎಸ್.ಅನಿಲ್‌ಕುಮಾರ್‌, ಜಿ.ಆರ್‌.ಅರುಣಾ, ರೇಷ್ಮೆ ಕೃಷಿ ವಿಜ್ಞಾನಿ ಕೆ.ಆರ್‌.ಶಶಿಧರ್, ರೇಷ್ಮೆ ಬೆಳೆಗಾರರು ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.