ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ಆಂಡರಸನ್‌ಪೇಟೆ ರಸ್ತೆಯಲ್ಲಿ ದೂಳಿನದ್ದೇ ಕಾರುಬಾರು

ನಿಧಾನಗತಿಯ ಕಾಮಗಾರಿ, ಸಂಚಾರಕ್ಕೆ ಅಡ್ಡಿ
ಕೃಷ್ಣಮೂರ್ತಿ
Published 22 ಏಪ್ರಿಲ್ 2024, 7:21 IST
Last Updated 22 ಏಪ್ರಿಲ್ 2024, 7:21 IST
ಅಕ್ಷರ ಗಾತ್ರ

ಕೆಜಿಎಫ್‌: ರಾಜ್ಯದಿಂದ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಹೋಗುವ ಮುಖ್ಯ ರಸ್ತೆಯ ಭಾಗವಾದ ಆಂಡರಸನ್‌ಪೇಟೆ ಮುಖ್ಯ ರಸ್ತೆ ಸುಮಾರು ಒಂದು ವರ್ಷದಿಂದ ಅಭಿವೃದ್ಧಿಯಾಗದೆ, ಪ್ರತಿನಿತ್ಯ ಸುತ್ತಮುತ್ತಲಿನ ನಿವಾಸಿಗಳು ಮತ್ತು ವಾಹನ ಸವಾರರು ದೂಳಿನಿಂದ ಹೈರಾಣವಾಗಿದ್ದಾರೆ.

ದೇವನಹಳ್ಳಿ–ಕೆಂಪಾಪುರ ಮುಖ್ಯ ರಸ್ತೆ ಅಭಿವೃದ್ಧಿಗೆ ಸುಮಾರು ಒಂದು ವರ್ಷ ಹಿಂದೆಯೇ ಚಾಲನೆ ಸಿಕ್ಕಿತ್ತು. ಇದೇ ಮಾರ್ಗವಾಗಿ ಆಂಧ್ರದ ಕುಪ್ಪಂ, ತಮಿಳುನಾಡಿನ ಕೃಷ್ಣಗಿರಿ ಮೊದಲಾದ ಪ್ರದೇಶಗಳಿಗೆ ಹೋಗಬೇಕು. ಕಿರಿದಾಗಿದ್ದ ರಸ್ತೆಯನ್ನು ವಿಸ್ತರಿಸಲು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಸುಮಾರು ₹12 ಕೋಟಿ ಬಿಡುಗಡೆಯಾಗಿತ್ತು. ರಸ್ತೆ ವಿಸ್ತರಣೆ ಮಾಡುವಾಗ ಕೊಂಚ ಅಡಚಣೆಯಾದರೂ, ರಸ್ತೆ ವಿಸ್ತರಣೆಯಿಂದ ಜನರಿಗೆ ಅನುಕೂಲ ಎಂಬ ಕಾರಣದಿಂದಾಗಿ ರಸ್ತೆಯ ಅಕ್ಕಪಕ್ಕದ ನಿವಾಸಿಗಳು ಸ್ವಯಂಪ್ರೇರಿತರಾಗಿ ಒತ್ತುವರಿಯನ್ನು ತೆರವು ಮಾಡಿದ್ದರು. ಮಸೀದಿ ಮತ್ತು ರಾಮಮಂದಿರದ ಒತ್ತುವರಿಯನ್ನು ಕೂಡ ಸ್ವಯಂಪ್ರೇರಿತವಾಗಿ ತೆರವು ಮಾಡಲಾಗಿತ್ತು. ಕೆಲ ಕಡೆ ತಕರಾರು ಉಂಟಾಗಿದ್ದರೂ, ಶಾಸಕಿ ರೂಪಕಲಾ ಮಧ್ಯಸ್ಥಿಕೆ ವಹಿಸಿ ತೆರವು ಮಾಡಿಸಿದ್ದರು.

ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಕಟ್ಟಡ ಕುಸಿದು ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಕಾಮಗಾರಿಗೆ ಕೊಂಚ ಹಿನ್ನೆಡೆಯಾಗಿದ್ದರೂ, ಅದನ್ನು ನಿವಾರಿಸಿಕೊಂಡು ಕೆಲಸ ಪ್ರಾರಂಭ ಮಾಡಲಾಗಿತ್ತು. ಆದರೆ ಈಚೆಗೆ ಕಾಮಗಾರಿಯ ವೇಗಕ್ಕೆ ಸಂಪೂರ್ಣವಾಗಿ ನಿಂತು ಹೋಗಿದೆ.

ರಸ್ತೆಯಲ್ಲಿನ ದೂಳು ಸುತ್ತಮುತ್ತಲಿನ ಮನೆಗಳನ್ನು ಆವರಿಸಿಕೊಂಡಿದೆ. ರಸ್ತೆ ಅಕ್ಕಪಕ್ಕದ ಅಂಗಡಿಗಳು ಸಂಪೂರ್ಣವಾಗಿ ಧೂಳಿನ ಮಯವಾಗಿದೆ. ರಸ್ತೆಯಲ್ಲಿ ಅಲ್ಲಲ್ಲಿ ಹಳ್ಳಗಳು ಬಿದ್ದಿದ್ದು, ಅವುಗಳನ್ನು ದಾಟಿಕೊಂಡು ಬರುವಷ್ಟರಲ್ಲಿ ಸವಾರರು ಹೈರಾಣಾಗಿದ್ದಾರೆ. ರಸ್ತೆಯ ಪಕ್ಕದ ಚರಂಡಿಯ ಕಾಮಗಾರಿ ಇನ್ನೂ ಶೈಶಾವಸ್ಥೆಯಲ್ಲಿದೆ. ಕೆಲ ಕಡೆ ಅಗೆದು ಬಿಟ್ಟಿರುವ ಜಾಗವನ್ನು ತುಂಬಿಲ್ಲ.

ಹಗಲಿನಲ್ಲಿ ಕಷ್ಟಪಟ್ಟು ಓಡಾಡಬಹುದು. ಆದರೆ ರಾತ್ರಿ ವೇಳೆ ಅದರಲ್ಲೂ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೆ, ಈ ರಸ್ತೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ಸ್ಥಳೀಯರು ದೂರುತ್ತಾರೆ. ಮಳೆ ಏನಾದರೂ ಶುರುವಾದರೆ ಈ ರಸ್ತೆ ಇನ್ನೂ ಅಪಾಯಕಾರಿಯಾಗಿರುತ್ತದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ರಸ್ತೆ ಪಕ್ಕದಲ್ಲಿರುವ ಚರಂಡಿಗಳನ್ನು ನಗರಸಭೆ ಇನ್ನೂ ಪೂರ್ಣಗೊಳಿಸಿಲ್ಲ. ಅದನ್ನು ಪೂರ್ತಿಗೊಳಿಸದೆ ಕಾಮಗಾರಿ ನಡೆಸಲು ಕಷ್ಟವಾಗುತ್ತದೆ. ರಸ್ತೆಗೆ ಅಡ್ಡಲಾಗಿರುವ ವಿದ್ಯುತ್ ಕಂಬಗಳನ್ನು ಕೂಡ ಇನ್ನೂ ತೆಗೆದಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ವಿವರಣೆ ನೀಡುತ್ತಾರೆ. ಶೇ 10ರಷ್ಟು ಉಸ್ತುವಾರಿ ಶುಲ್ಕವನ್ನು ಬೆಸ್ಕಾಂಗೆ ಗುತ್ತಿಗೆದಾರರು ನೀಡಿ, ಕಂಬಗಳನ್ನು ಗುತ್ತಿಗೆದಾರರೇ ತೆಗೆಸಬೇಕು ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT