ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದಲ್ಲಿ ಆಹಾರ ಭದ್ರತೆಗೆ ಸಂಚಕಾರ

ಅಡ್ವೆಂಟ್ಜ್ ಸಮೂಹ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಕುಲದೀಪ್‌ ಶರ್ಮಾ ಹೇಳಿಕೆ
Last Updated 6 ಡಿಸೆಂಬರ್ 2019, 11:05 IST
ಅಕ್ಷರ ಗಾತ್ರ

ಕೋಲಾರ: ‘ದೇಶದಲ್ಲಿ ಆಹಾರ ಭದ್ರತೆಗೆ ಎದುರಾಗುತ್ತಿರುವ ಕಂಟಕ ತಪ್ಪಿಸಲು ರೈತರು ಮಣ್ಣು ಪರೀಕ್ಷೆಗೆ ಒತ್ತು ನೀಡಬೇಕು’ ಎಂದು ಬೆಂಗಳೂರಿನ ಅಡ್ವೆಂಟ್ಜ್ ಸಮೂಹ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಕುಲದೀಪ್‌ ಶರ್ಮಾ ಕಿವಿಮಾತು ಹೇಳಿದರು.

ಕೃಷಿ ವಿಜ್ಞಾನ ಕೇಂದ್ರ, ರೇಷ್ಮೆ ಇಲಾಖೆ, ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ಅಡ್ವೆಂಟ್ಜ್ ಸಮೂಹ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನಾಚರಣೆಯಲ್ಲಿ ಮಾತನಾಡಿ, ‘ಮಣ್ಣು ನೈಸರ್ಗಿಕ ಸಂಪತ್ತು. ಅದನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ’ ಎಂದು ತಿಳಿಸಿದರು.

‘ಮಣ್ಣಿನಿಂದ ಮಾತ್ರ ವ್ಯವಸಾಯ ಮಾಡಲು ಸಾಧ್ಯ. ರೈತರು ಮಣ್ಣಿನ ಬಗ್ಗೆ ಹೆಚ್ಚಿನ ತಿಳಿವಳಿಕೆ ಪಡೆದು ಬೆಳೆಗಳಿಗೆ ಉಪಯುಕ್ತ ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸುವ ಗೊಬ್ಬರ ಬಳಸುವುದು ಸೂಕ್ತ. ಈ ಹಿಂದೆ ಮಣ್ಣಿನ ಬಗ್ಗೆ ರೈತರಿಗೆ ಅರಿವಿರಲಿಲ್ಲ. ಈಗ ಮನುಷ್ಯ ತನ್ನ ದೇಹದ ಆರೋಗ್ಯ ಕಾಪಾಡಿಕೊಳ್ಳುವಂತೆ ಮಣ್ಣಿನ ಆರೋಗ್ಯ ಕಾಪಾಡುವ ಪರಿಸ್ಥಿತಿ ಎದುರಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಮಣ್ಣಿನಲ್ಲಿ ಪೋಷಕಾಂಶ ಕೊರತೆ ಇರುವುದನ್ನು ಪರಿಶೀಲಿಸಿ ಪೂರೈಕೆ ಮಾಡುವ ಮೂಲಕ ಹೆಚ್ಚಿನ ಇಳುವರಿ ಪಡೆಯಬಹುದು. ರೈತರ ಅಭಿವೃದ್ಧಿಯಿಂದಲೇ ದೇಶದ ಅಭಿವೃದ್ಧಿ ಸಾಧ್ಯ. ರೈತರು ಆಧುನಿಕ ತಂತ್ರಜ್ಞಾನ ಬಳಸಿ ಬೇಸಾಯ ಮಾಡಬೇಕು. ಮಣ್ಣಿನ ಪರೀಕ್ಷೆಯು ಬೆಳೆ ಬೆಳೆಯಲು ತುಂಬಾ ಉಪಯುಕ್ತ’ ಎಂದು ಸಲಹೆ ನೀಡಿದರು.

‘ಅತಿಯಾಗಿ ರಾಸಾಯನಿಕ ಗೊಬ್ಬರ ಬಳಸುವುದರಿಂದ ಮಣ್ಣಿನಲ್ಲಿ ಆಮ್ಲೀಯ ಪ್ರಮಾಣ ಹೆಚ್ಚಾಗಿ ಫಲವತ್ತತೆ ನಾಶವಾಗುತ್ತದೆ. ಇಂತಹ ಮಣ್ಣಿನಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿಲ್ಲ. ಇಳುವರಿ ಕುಸಿತದಿಂದ ಭವಿಷ್ಯದಲ್ಲಿ ಆಹಾರ ಭದ್ರತೆಗೆ ಸಂಚಕಾರ ಎದುರಾಗುತ್ತದೆ. ಆದ ಕಾರಣ ಮಣ್ಣಿಗೆ ರಾಸಾಯನಿಕ ಗೊಬ್ಬರದ ಜತೆಗೆ ಸಾವಯವ ಗೊಬ್ಬರ ಸೇರಿಸಬೇಕು’ ಎಂದರು.

ಕೊಟ್ಟಿಗೆ ಗೊಬ್ಬರ: ‘ಭೂ ಸವಕಳಿ ತಡೆದು ಮಣ್ಣಿನ ಸಂರಕ್ಷಣೆ ಮಾಡಬೇಕು. ಕೃಷಿಯಲ್ಲಿ ಮಣ್ಣಿನ ನಿರ್ವಹಣೆ ಸಹ ಪ್ರಮುಖ. ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಂಠಿತಗೊಳ್ಳುತ್ತದೆ. ಆದ ಕಾರಣ ರಸಗೊಬ್ಬರ ಬಳಕೆಯನ್ನು ತಗ್ಗಿಸಿ ಕೊಟ್ಟಿಗೆ ಗೊಬ್ಬರ ಬಳಸಬೇಕು’ ಎಂದು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಟಿ.ಬಿ.ಬಸವರಾಜು ಹೇಳಿದರು.

‘ಬೆಳೆಗಳಿಗೆ ಮಣ್ಣು ಹೆಚ್ಚು ಶಕ್ತಿಭರಿತವಾಗಿದೆ. ನೀರಿನಿಂದ ಮಣ್ಣು ಕೊಚ್ಚಿ ಹೋಗುವುದನ್ನು ತಡೆಯಬೇಕು. ರಾಸಾಯನಿಕ ಗೊಬ್ಬರಗಳ ಜತೆಗೆ ಕಾಂಪೋಸ್ಟ್, ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ ಬಳಕೆಗೆ ಒತ್ತು ನೀಡಬೇಕು’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಬಿ.ಜಿ.ಪ್ರಕಾಶ್ ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಅನಿಲ್‌ಕುಮಾರ್‌, ಅಡ್ವೆಂಟ್ಜ್ ಸಮೂಹ ಸಂಸ್ಥೆ ಉಪ ಪ್ರಧಾನ ವ್ಯವಸ್ಥಾಪಕ ರುದ್ರಪ್ಪ, ಹಿರಿಯ ವ್ಯವಸ್ಥಾಪಕ ನಾಗೇಶ್, ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ನೊಬೆಲ್ ಮೋರಿಸನ್, ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಂ.ಕೆ.ಪ್ರಭಾಕರ್, ಸಹಾಯಕ ನಿರ್ದೇಶಕ ಎಂ.ಮಂಜುನಾಥ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT