ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯಲ್ಲಿ ಮಣ್ಣು ರೈತನ ಕಣ್ಣು

Last Updated 11 ಮಾರ್ಚ್ 2020, 19:35 IST
ಅಕ್ಷರ ಗಾತ್ರ

ಕೋಲಾರ: ‘ಮಣ್ಣಿನ ಆರೋಗ್ಯ ಕ್ಷೀಣಿಸಲು ಅವೈಜ್ಞಾನಿಕ ಬೇಸಾಯ ಪದ್ಧತಿ ಪ್ರಮುಖ ಕಾರಣ’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಎಸ್‌.ಅನಿಲ್‌ಕುಮಾರ್ ಅಭಿಪ್ರಾಯಪಟ್ಟರು.

ಮಣ್ಣಿನ ಆರೋಗ್ಯ ಕುರಿತು ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ತಾಲ್ಲೂಕಿನ ಮೂರಾಂಡಹಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬೆಳೆಯ ಅಗತ್ಯಕ್ಕಿಂತ ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಮಣ್ಣಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ’ ಎಂದರು.

‘ರೈತರು ಕಾಲಕಾಲಕ್ಕೆ ಮಣ್ಣು ಪರೀಕ್ಷೆ ಮಾಡಿಸಿ ಮಣ್ಣು ಆರೋಗ್ಯ ಚೀಟಿ ಪಡೆಯಬೇಕು. ಇದಕ್ಕೆ ಅನುಗುಣವಾಗಿ ರಾಸಾಯನಿಕ ಪೋಷಕಾಂಶ ನಿರ್ವಹಣೆ ಮಾಡಿದರೆ ಹೆಚ್ಚು ಇಳುವರಿ ಪಡೆಯಬಹುದು. ಜತೆಗೆ ಮಣ್ಣಿನ ಆರೋಗ್ಯ ಕೂಡ ರಕ್ಷಿಸಬಹುದು’ ಎಂದು ಸಲಹೆ ನೀಡಿದರು.

‘ದೇಶದಲ್ಲಿ ಆಹಾರ ಭದ್ರತೆಗೆ ಎದುರಾಗುತ್ತಿರುವ ಕಂಟಕ ತಪ್ಪಿಸಲು ರೈತರು ಮಣ್ಣು ಪರೀಕ್ಷೆಗೆ ಒತ್ತು ನೀಡಬೇಕು. ಮಣ್ಣು ನಿಸರ್ಗದ ಅತ್ಯಮೂಲ್ಯ ಕೊಡುಗೆ. ಕೃಷಿ ಕ್ಷೇತ್ರದಲ್ಲಿ ಮಣ್ಣು ರೈತನ ಕಣ್ಣು. ಜಗತ್ತಿನ ಜೀವಸಂಕುಲದ ಬದುಕಿಗೆ ಮಣ್ಣೇ ಆಧಾರ. ಮಣ್ಣಿನ ಭೌತಿಕ ಗುಣ ಅಭಿವೃದ್ಧಿ ರೈತರಿಂದ ಮಾತ್ರ ಸಾಧ್ಯ. ಮಣ್ಣು ನೈಸರ್ಗಿಕ ಸಂಪತ್ತು. ಅದನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ’ ಎಂದು ತಿಳಿಸಿದರು.

‘2015ರ ಫೆ.19ರಂದು ರಾಜಸ್ಥಾನದಲ್ಲಿ ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮ ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿದ್ದೇವೆ. ರಾಸಾಯನಿಕ ಗೊಬ್ಬರದ ಅತಿಯಾದ ಬಳಕೆಯಿಂದ ಮಣ್ಣಿನಲ್ಲಿರುವ ಜೈವಿಕ ಗುಣ ನಶಿಸುತ್ತಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್‌ ಕಳವಳ ವ್ಯಕ್ತಪಡಿಸಿದರು.

‘ಮಣ್ಣಿನಲ್ಲಿ ಪೋಷಕಾಂಶ ಕೊರತೆ ಇರುವುದನ್ನು ಪರಿಶೀಲಿಸಿ ಪೂರೈಕೆ ಮಾಡುವ ಮೂಲಕ ಹೆಚ್ಚಿನ ಇಳುವರಿ ಪಡೆಯಬಹುದು. ರೈತರ ಅಭಿವೃದ್ಧಿಯಿಂದಲೇ ದೇಶದ ಅಭಿವೃದ್ಧಿ ಸಾಧ್ಯ. ರೈತರು ಆಧುನಿಕ ತಂತ್ರಜ್ಞಾನ ಬಳಸಿ ಬೇಸಾಯ ಮಾಡಬೇಕು. ಮಣ್ಣಿನ ಪರೀಕ್ಷೆಯು ಬೆಳೆ ಬೆಳೆಯಲು ತುಂಬಾ ಉಪಯುಕ್ತ’ ಎಂದು ಹೇಳಿದರು.

ಕೃಷಿ ಇಲಾಖೆ ಅಧಿಕಾರಿ ಸುನಿಲ್‌, ಸಹಾಯಕ ಕೃಷಿ ಅಧಿಕಾರಿ ವೀರಣ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT