ಶನಿವಾರ, ಮೇ 21, 2022
20 °C

22ಕ್ಕೆ ಶ್ರೀನಿವಾಸ ಕಲ್ಯಾಣ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ನಗರದ ಕಠಾರಿಪಾಳ್ಯ ಬಡಾವಣೆಯ ಶ್ರೀನಿವಾಸ ಭಜನೆ ಮಂದಿರದ 150ನೇ ವಾರ್ಷಿಕೋತ್ಸವ ಹಾಗೂ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಫೆ.22ರಂದು ಹಮ್ಮಿಕೊಳ್ಳಲಾಗಿದೆ’ ಎಂದು ಶ್ರೀನಿವಾಸ ಭಜನೆ ಮಂದಿರ ಟ್ರಸ್ಟ್‌ ಅಧ್ಯಕ್ಷ ಎನ್.ಕೆ.ಜಯಶಂಕರ್ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘1871ರಲ್ಲಿ ಸ್ಥಾಪನೆಯಾದ ಭಜನೆ ಮಂದಿರದಲ್ಲಿ ಸತತವಾಗಿ ಪ್ರತಿ ಶುಕ್ರವಾರ ಭಜನೆ ನಡೆಯುತ್ತಿದೆ. ಜಾತಿ ಮತದ ಭೇದವಿಲ್ಲದೆ ಮಂದಿರದಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ಭಜನೆ ಮಂದಿರದ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ (ಫೆ.20) ಭಾಗೀರಥಿ ಪೂಜೆ, ಕಳಶ ಸ್ಥಾಪನೆ, ವಾಸ್ತುಪೂಜೆ ಹಾಗೂ ಹೋಮ ನಡೆಸಲಾಗುವುದು. ಫೆ.21ರಂದು ಲಕ್ಷ್ಮೀನಾರಾಯಣ ಹೃದಯ ಹೋಮ, ಧನ್ವಂತರಿ ಹೋಮ, ಸುಮಂಗಲಿ ಪೂಜೆ, ಪೂರ್ಣಾಹುತಿ, ಪ್ರಾಣ ಪ್ರತಿಷ್ಠಾಪನೆ, ಪೂರ್ಣ ಕುಂಬಾಭಿಷೇಕ, ಚಂಡಿಕಾ ಹೋಮ, ಕುಂಕುಮಾರ್ಚನೆ ನಡೆಯಲಿದೆ’ ಎಂದು ವಿವರಿಸಿದರು.

‘ಫೆ.22ರಂದು ಶ್ರೀನಿವಾಸ ಕಲ್ಯಾಣ ಮಹೋತ್ಸವ ನಡೆಯಲಿದೆ. ಜತೆಗೆ ತುಳಸಿ ರಾಮದಾಸರ ಜೀವನ ಚರಿತ್ರೆಯ ಕಿರುಪರಿಚಯ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ನಡೆಯಲಿವೆ’ ಎಂದು ಮಾಹಿತಿ ನೀಡಿದರು.

ನವೀಕರಣ: ‘ಟ್ರಸ್ಟ್ ರಚಿಸಿಕೊಂಡು ಭಜನೆ ಮಂದಿರ ನವೀಕರಣ ಮಾಡಲಾಗಿದೆ. ಮಕ್ಕಳಿಗೆ ಸಂಗೀತ ಕಲಿಸುವ ಮತ್ತು ಸಮಾಜಮುಖಿ ಕೆಲಸಗಳನ್ನು ಮಾಡಲು ಚಿಂತಿಸಲಾಗಿದೆ. ಭಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಬೇಕು’ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಮನವಿ ಮಾಡಿದರು.

ಟ್ರಸ್ಟ್‌ನ ಗೌರವ ಅಧ್ಯಕ್ಷ ವಿ.ಮುನಿವೆಂಕಟೇಶ್, ಉಪಾಧ್ಯಕ್ಷರಾದ ಎ.ಆರ್.ಮುದ್ದುಪ್ರಕಾಶ್, ಆರ್.ರಘುನಾಥ್, ಖಜಾಂಚಿ ಚಂದ್ರಶೇಖರ್, ನಿರ್ದೇಶಕರಾದ ಮೋಹನ್‌ಪ್ರಸಾದ್, ಮಂಜುನಾಥ್, ಮಹೇಶ್, ಸುರೇಶ್‌ಬಾಬು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.