ಗುರುವಾರ , ಏಪ್ರಿಲ್ 9, 2020
19 °C
ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಇರುವ ರೈತರಿಗೆ ಮೂಡುತ್ತಿದೆ ನಿರಾಸೆ

ಆತಂಕ ತಂದ ಹೀಚು ಉದುರುವಿಕೆ

ಆರ್‌.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿದಂತೆ ಮಾವಿನ ಹೀಚು ಉದುರುವ ಪ್ರಮಾಣ ಹೆಚ್ಚಿದೆ. ತಾಲ್ಲೂಕಿನಾದ್ಯಂತ ಮಾವಿನ ತೋಟಗಳಲ್ಲಿ ಹೀಚು ದೊಡ್ಡ ಪ್ರಮಾಣದಲ್ಲಿ ನೆಲಕಚ್ಚಿದೆ.

ಈ ಬಾರಿ ಶೇ 10 ರಿಂದ ಶೇ 15ರಷ್ಟು ಫಸಲು ಮಾತ್ರ ಬಂದಿದೆ. ತಾಲ್ಲೂಕಿನ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯ ಫಸಲು ಕಾಣಿಸಿಕೊಂಡಿದೆ. ಬೆಳೆಗಾರರು ಇರುವ ಫಸಲಿಗೆ ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದಾರೆ. ಆದರೆ ವಾತಾವರಣದಲ್ಲಿ ಹೆಚ್ಚುತ್ತಿರುವ ಉಷ್ಣಾಂಶ ಫಸಲನ್ನು ಬಲಿ ತೆಗೆದುಕೊಳ್ಳುತ್ತಿದೆ.

ಮಾವಿನ ಬೆಳೆಯಲ್ಲಿ ಹೀಚು ಉದುರುವಿಕೆ ಸಾಮಾನ್ಯ. ಆದರೆ ಮರಗಳಲ್ಲಿನ ಫಸಲಿನ ಮುಕ್ಕಾಲು ಭಾಗ ಉದುರಿಬಿದ್ದರೆ ಹೇಗೆ ಎಂಬುದು ಬೆಳೆಗಾರರ ಪ್ರಶ್ನೆ. ವಿಶೇಷವೆಂದರೆ ಈ ಬಾರಿ ಬಾದಾಮಿ ಜಾತಿಯ ಮರಗಳಲ್ಲಿ ಹೆಚ್ಚು ಫಸಲು ಬಂದಿದೆ. ಉಳಿದ ಎಲ್ಲ ಜಾತಿಯ ಮರಗಳಲ್ಲೂ ತೀರಾ ಕಡಿಮೆ ಫಸಲಿದೆ. ಫಸಲೇ ಇಲ್ಲದ ಮರಗಳ ಸಂಖ್ಯೆ ಹೆಚ್ಚಾಗಿದೆ.

ಕೆಲವು ರೈತರು ಹೀಚು ಉದುರುವುದನ್ನು ಕಡಿಮೆ ಮಾಡಲು ಮರಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕುತ್ತಿದ್ದಾರೆ. ನೀರಿನ ಅನುಕೂಲ ಇರುವವರು ಹನಿ ನೀರಾವರಿ ಅಳವಡಿಸಿದ್ದಾರೆ. ಇಷ್ಟಾದರೂ ಉದುರುವಿಕೆ ನಿಂತಿಲ್ಲ. ‘ಈ ಸಲ, ಇರುವ ಕಾಯಿಗೆ ಒಳ್ಳೆ ಬೆಲೆ ಬರಬಹುದು ಎಂದುಕೊಂಡಿದ್ದೆ. ಏರುತ್ತಿರುವ ಬಿಸಿಲಿನ ತಾಪ ಆಸೆಗೆ ಕಲ್ಲುಹಾಕಿದೆ’ ಎಂದು ಮಾವು ಬೆಳೆಗಾರ ವೆಂಕಟರಾಮರೆಡ್ಡಿ ಹೇಳಿದರು.

ಈಗಾಗಲೇ ಹೀಚಿಗೆ ಹಣ್ಣು ನೊಣದ ಹಾವಳಿ ಹೆಚ್ಚಿದೆ. ಬಿದ್ದ ದೊಡ್ಡ ಗಾತ್ರದ ಹೀಚು ಕೊಳೆಯುವುದರಿಂದ ಊಜಿ ನೊಣದ ಹಾವಳಿ ಇನ್ನಷ್ಟು ಹೆಚ್ಚುತ್ತದೆ. ಇದು ಕಾಯಿ ಕೆಡಲು ಕಾರಣವಾಗುತ್ತದೆ. ‘ಮಾವು ಬೆಳೆಗಾರರು ಉದುರಿದ ಹೀಚು ಹಾಗೂ ಕಾಯಿಯನ್ನು ಮರಗಳ ಕೆಳಗೆ ಬಿಡದೆ, ಆರಿಸಿ ಗುಳಿಯಲ್ಲಿ ಹಾಕಿ ಮಣ್ಣು ಮುಚ್ಚಬೇಕು. ಹಾಗೆ ಮಾಡುವುದರಿಂದ ಹಣ್ಣು ನೊಣದ ಅಭಿವೃದ್ಧಿ ಕಡಿಮೆಯಾಗುತ್ತದೆ. ಈ ನೊಣದ ತಡೆಗೆ ರೈತರು ತಪ್ಪದೆ ಮೋಹಕ ಬಲೆ ಬಳಸಬೇಕು’ ಎಂದು ತಾಲ್ಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ.ಬೈರಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗಾಗಲೇ ಮೂರು ಸಲ ಔಷಧ ಸಿಂಪಡಣೆ ಮಾಡಿರುವ ಮಾವು ಬೆಳೆಗಾರರು, ಮರಗಳಲ್ಲಿ ಕಡಿಮೆ ಫಸಲು ಬಂದಿರುವ ಕಾರಣ, ಇನ್ನೊಂದು ಸಿಂಪಡಣೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಹೀಚು ಉದುರುವಿಕೆ ತಡೆಯಲು ಯಾವುದೇ ಪರಿಣಾಮಕಾರಿ ಪರಿಹಾರ ಇಲ್ಲವೆಂದು ತಿಳಿದಿರುವ ರೈತರು ಕೈಚೆಲ್ಲಿದ್ದಾರೆ.

***

ಕೆಲವರು ತೊಟಗಳಲ್ಲಿ ಬಿದ್ದ ದೊಡ್ಡ ಹೀಚನ್ನು ಆರಿಸಿ ತಂದು ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಅಂತಹ ಹೀಚು ತಿನ್ನಲು ಯೋಗ್ಯವಲ್ಲ

ಎನ್‌.ಶ್ರೀರಾಮರೆಡ್ಡಿ, ಮಾವು ಬೆಳೆಗಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)