ಮಂಗಳವಾರ, ಆಗಸ್ಟ್ 20, 2019
22 °C

ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ: ವೈದ್ಯರಿಗೆ ಸ್ಪೀಕರ್‌ ತರಾಟೆ

Published:
Updated:
Prajavani

ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ದಿಢೀರ್‌ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ಔಷಧಗಳ ಕೊರತೆಯಿಂದ ಅಸಮಾಧಾನಗೊಂಡು ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಯಲ್ಲಿ ರೋಗಿಗಳ ಅಹವಾಲು ಆಲಿಸಿ ವೈದ್ಯರ ವಿರುದ್ಧ ಹರಿಹಾಯ್ದ ರಮೇಶ್‌ಕುಮಾರ್‌, ‘ಬಾಯಿ ಮುಚ್ಚಿ, ನೀವೆಲ್ಲಾ ಸ್ಕೌಂಡ್ರಲ್ಸ್‌. ದೇವರು ಇದ್ರೆ ನಿಮೆಗೆಲ್ಲಾ ತಕ್ಕ ಶಾಸ್ತಿಯಾಗುತ್ತೆ. ಬಡ ರೋಗಿಗಳಿಗೆ ಅಗತ್ಯವಿರುವ ಔಷಧ, ಮಾತ್ರ ನೀಡಲು ನಿಮಗೇನು ಕಷ್ಟ?’ ಎಂದು ಕೆಂಡಾಮಂಡಲರಾದರು.

‘ಆಸ್ಪತ್ರೆಯಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಸಿಗುತ್ತಿಲ್ಲ. ಮಾತ್ರ, ಔಷಧಗಳಿಲ್ಲ ಎಂದು ವೈದ್ಯರು ಹೊರಗೆ ಖರೀದಿಸುವಂತೆ ಚೀಟಿ ಬರೆದು ಕೊಡುತ್ತಾರೆ. ಔಷಧ ಖರೀದಿಗೆ ನಮ್ಮ ಬಳಿ ಹಣವಿಲ್ಲ’ ಎಂದು ರೋಗಿಗಳು ಹಾಗೂ ಸಂಬಂಧಿಕರು ರಮೇಶ್‌ಕುಮಾರ್‌ ಎದುರು ಅಲವತ್ತುಕೊಂಡರು.

ಇದಕ್ಕೆ ಸ್ಪಂದಿಸಿದ ರಮೇಶ್‌ಕುಮಾರ್‌, ‘ವೈದ್ಯರು ರೋಗಿಗಳ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಬಡವರ ಆರೋಗ್ಯ ಕೆಡದಂತೆ ಎಚ್ಚರ ವಹಿಸಬೇಕು’ ಎಂದು ಸೂಚಿಸಿದರು.

‘ವೈದ್ಯರು ಔಷಧ ಮಾತ್ರೆ ಹೊರಗೆ ಖರೀದಿಸುವಂತೆ ಚೀಟಿ ಬರೆದು ಕೊಟ್ಟರೆ ರೋಗಿಗಳು ಕಿಡಿಕಾರುತ್ತಾರೆ. ವೈದ್ಯರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಸರಿಯಾಗಿ ಔಷಧ ಪೂರೈಕೆ ಆಗದಿರುವುದಕ್ಕೆ ಗುತ್ತಿಗೆದಾರರು ಕಾರಣ. ಗುತ್ತಿಗೆದಾರರು ಕಾಲಕಾಲಕ್ಕೆ ಸರಿಯಾಗಿ ಅಗತ್ಯ ಔಷಧ ಪೂರೈಸಿದರೆ ಸಮಸ್ಯೆ ಆಗುವುದಿಲ್ಲ’ ಎಂದು ಗುತ್ತಿಗೆದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಆಸ್ಪತ್ರೆ ಜವಾಬ್ದಾರಿ ಹೊತ್ತವರು ಕಾಲ ಕಾಲಕ್ಕೆ ಸರಿಯಾಗಿ ಔಷಧ ಪೂರೈಕೆ ಆಗುವುದರ ಬಗ್ಗೆ ಗಮನ ನೀಡಬೇಕು. ಲೋಪ ಕಂಡುಬಂದಲ್ಲಿ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸರ್ಕಾರವನ್ನು ಯಾರೂ ಲಘುವಾಗಿ ಪರಿಗಣಿಸಬಾರದು. ವ್ಯವಸ್ಥೆ ನೋಡಿಕೊಳ್ಳಲು ಶಾಸಕರಿರುತ್ತಾರೆ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.

ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌, ಎಪಿಎಂಸಿ ಅಧ್ಯಕ್ಷ ಎನ್‌.ರಾಜೇಂದ್ರಪ್ರಸಾದ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್‌ ಇದ್ದರು.

Post Comments (+)