ಬುಧವಾರ, ಆಗಸ್ಟ್ 4, 2021
20 °C

ಕೋಲಾರ | ಕೋವಿಡ್–19 ಸಂಕಷ್ಟದ ಸಂದರ್ಭದಲ್ಲಿ ಶಾಲೆ ಆರಂಭ ದೊಡ್ಡ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಶಾಲಾ ಮಟ್ಟದ ಸ್ವಚ್ಛತಾ ಕಾರ್ಯ ಯೋಜನೆ ಹಾಗೂ ‘ನನ್ನ ಶಾಲೆ ನನ್ನ ಕೊಡುಗೆ’ ಕುರಿತು ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ತಾಲ್ಲೂಕಿನ ಚುಂಚುದೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆನ್‌ಲೈನ್ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

‘ಕೋವಿಡ್–19 ಸಂಕಷ್ಟದ ಸಂದರ್ಭದಲ್ಲಿ ಶಾಲೆಗಳ ಆರಂಭವೇ ದೊಡ್ಡ ಸವಾಲಾಗಿದ್ದು, ಸೋಂಕು ಹರಡುವಿಕೆ ತಡೆಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲು ತರಬೇತಿ ಅಗತ್ಯ’ ಎಂದು ಸಂಪನ್ಮೂಲ ವ್ಯಕ್ತಿ ವಾಣಿಶ್ರೀ ಅಭಿಪ್ರಾಯಪಟ್ಟರು.

‘ಶಾಲೆ ಆರಂಭಕ್ಕೂ ಮುನ್ನವೇ ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು. ಶಾಲಾ ಆವರಣ, ಕೊಠಡಿ, ಕಚೇರಿ, ಅಡುಗೆ ಮನೆ ಸ್ವಚ್ಛವಾಗಿ ಇಟ್ಟುಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು. ಇದಕ್ಕೆ ಕಾರ್ಯ ಯೋಜನೆ ರೂಪಿಸುವುದು ಮುಖ್ಯ. ಮಕ್ಕಳ ಆರೋಗ್ಯ ರಕ್ಷಣೆಗೆ ಒತ್ತು ಕೊಡಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರದ ಸೂಚನೆಯಂತೆ ಹಲವಾರು ಶಾಲೆಗಳಲ್ಲಿ ನಡೆದಿರುವ ಪೋಷಕರ ಸಭೆಯಲ್ಲಿ ಕೊರೊನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಬಿಸಿಯೂಟ ವಿತರಿಸುವುದು ಬೇಡ. ಬದಲಿಗೆ ಮಕ್ಕಳು ಮನೆಯಿಂದಲೇ ಊಟ ತರಲಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ’ ಎಂದು ವಿವರಿಸಿದರು.

‘ಶಾಲೆಗಳ ಸ್ವಚ್ಛತೆಯ ಜತೆಗೆ ಮಕ್ಕಳ ವೈಯಕ್ತಿಕ ಸ್ವಚ್ಛತೆಗೂ ಒತ್ತು ಕೊಡಬೇಕು. ಕೊರೊನಾ ಸೋಂಕಿನಿಂದ ಮಕ್ಕಳನ್ನು ರಕ್ಷಿಸುವ ಹೊಣೆ ಪೋಷಕರಷ್ಟೇ ಶಿಕ್ಷಕರಿಗೂ ಇದೆ’ ಎಂದು ಕಿವಿಮಾತು ಹೇಳಿದರು.

‘ಶಿಕ್ಷಕರು ಶಾಲೆಗಳಲ್ಲಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಬೇಕು. ಶಾಲೆಗೆ ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಗೂ ದಾನಿಗಳಿಂದ ಆರ್ಥಿಕ ನೆರವು ಪಡೆಯುವ ಬಗ್ಗೆ ಗಮನ ಹರಿಸಬೇಕು’ ಎಂದು ಸಂಪನ್ಮೂಲ ವ್ಯಕ್ತಿ ಎಸ್.ಬಸವರಾಜ್ ತಿಳಿಸಿದರು.

ಚುಂಚುದೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಬಸವರಾಜ್, ಶಿಕ್ಷಕರಾದ ರಾಜಣ್ಣ, ಎನ್.ಮುನಿಯಪ್ಪ, ಮಂಜುನಾಥ್, ಜೀಜಾಬಾಯಿ, ವೆಂಕಟೇಶ್, ರಾಜೇಶ್, ಲಾವಣ್ಯ, ಕುಸುಮ, ಸವಿತಾ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು