ಸೋಮವಾರ, ಜುಲೈ 26, 2021
21 °C
ರಾಜ್ಯದಲ್ಲೇ ನೀರು ಇಂಗಿಸಲು, ಕೆರೆ ಹೂಳು ತೆಗೆಸಲು ಒತ್ತಾಯ

ಆಂಧ್ರಕ್ಕೆ ಹರಿದ ರಾಜ್ಯದ ನೀರು

ಜಿ.ವಿ.ಪುರುಷೋತ್ತಮರಾವ್ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ತಾಲ್ಲೂಕಿನಲ್ಲಿ ಮಳೆಯಾದ ಕಾರಣ ಆಂಧ್ರ ಪ್ರದೇಶ ಮತ್ತು ಶ್ರೀನಿವಾಸಪುರ ತಾಲ್ಲೂಕು ಗಡಿಭಾಗಕ್ಕೆ ಹೊಂದಿಕೊಂಡಿರುವ ಮೇಲಿನ ಗೂಕುಂಟೆ ಗ್ರಾಮದ ಹೊಸಕೆರೆ ಕೋಡಿ ಬಿದ್ದಿದೆ. ಇಲ್ಲಿಯ ನೀರು ಕಳೆದ ಮೂರು ದಿನಗಳಿಂದ ನೆರೆಯ ಆಂಧ್ರಪ್ರದೇಶಕ್ಕೆ ಹರಿಯುತ್ತಿದೆ.

ಎಚ್.ಗೊಲ್ಲಹಳ್ಳಿ, ಬೀಸನಹಳ್ಳಿ ಮತ್ತು ನೆರೆಯ ಶ್ರೀನಿವಾಸಪುರ ತಾಲ್ಲೂಕಿನ ದಟ್ಟವಾದ ಅರಣ್ಯ ಪ್ರದೇಶಗಳಿಂದ ಹಾಗೂ ಸುತ್ತಮುತ್ತಲ 10 ಕಿ.ಮೀ. ವ್ಯಾಪ್ತಿಯಿಂದ ನೀರು ಬಂದು ಹೊಸಕೆರೆ ಕೋಡಿ ಹರಿದಿದೆ.

ನೀರು ತಾಲ್ಲೂಕಿನ ಸಣ್ಣ ಪುಟ್ಟ ಕೆರೆಗಳ ಮೂಲಕ ನೇರವಾಗಿ ಆಂಧ್ರದ ಗ್ರಾಮಗಳಾದ ಕನಗಾನಿ, ಸೀತಾತರಗಂಪಲ್ಲಿ, ಚೊಕ್ಕಂಡ್ಲಪಲ್ಲಿ, ಬಿಕ್ಕಮಾಕನಪಲ್ಲಿ, ಗುಂಡ್ಲಪಲ್ಲಿ ಕೆರೆಗಳನ್ನು ತುಂಬಿ ಪುಂಗನೂರು ಕೆರೆಗೆ ಸೇರುತ್ತದೆ.

‘ಆಂಧ್ರ ಪ್ರದೇಶದ ಪುಂಗನೂರು ಭಾಗದಲ್ಲಿ ಮಳೆ ಬೀಳದಿದ್ದರೂ ತಾಲ್ಲೂಕಿನ ಗೂಕುಂಟಿ ಗ್ರಾಮದ ಸುತ್ತಮುತ್ತ ಮಳೆ ಬಂದರೆ ಸಾಕು ಅನಾಯಾಸವಾಗಿ ಅಲ್ಲಿಯ ಕೆರೆಗಳು ತುಂಬಿ ಅಂತರ್ಜಲ ವೃದ್ಧಿ ಆಗುತ್ತದೆ. ವಾರದ ಹಿಂದೆ ಬಿದ್ದ ನೀರು ತಗ್ಗು ಪ್ರದೇಶದ ಮೂಲಕ ಹರಿದು ನೆರೆಯ ರಾಜ್ಯದ ಗ್ರಾಮಗಳಿಗೆ ಅನುಕೂಲ ಮಾಡಿಕೊಟ್ಟಿದೆ’ ಎನ್ನುತ್ತಾರೆ ಗ್ರಾಮದ ಹಿರಿಯ ವೆಂಕಟಪ್ಪ.

‘ನೆರೆಯ ರಾಜ್ಯದವರು ಕೆರೆ ಹಾಗೂ ಮಳೆ ನೀರು ಸಂಗ್ರಹಿಸುವಲ್ಲಿ ಅನೇಕ ವೈಜ್ಞಾನಿಕ ಕ್ರಮಗಳನ್ನು ಅನುಸರಿಸುತ್ತಾರೆ. ನಮ್ಮ ತಾಲ್ಲೂಕಿನಲ್ಲಿ ಕುರುಡುಮಲೆ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಹುಟ್ಟಿದ ಕೌಂಡಿನ್ಯ
ಋಷಿಯ ಹೆಸರಿನ ಆನೆಕೆರೆಯ ನೀರು ನೆರೆಯ ಆಂಧ್ರದ ಪಲಮನೇರು ತಾಲ್ಲೂಕಿಗೆ ಸೇರುತ್ತದೆ. ಅವರು ತಮ್ಮ ಅಭಯಾರಣ್ಯಗಳಿಗೆ ಕೌಂಡಿನ್ಯ ಹೆಸರು ಇಟ್ಟಿದ್ದಾರೆ. ನಮ್ಮಲ್ಲಿನ ಗಡಿಭಾಗದ ನೀರಿನ ಹರಿವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ’ ಎಂದು ವಾಸ್ತವ ವಿವರಿಸುತ್ತಾರೆ ಗ್ರಾಮದ ವೆಂಕಟಾಚಲಪತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.