ಮಾನಸಿಕ ವಿಕಾಸಕ್ಕೆ ಬೇಸಿಗೆ ಶಿಬಿರ ಸಹಕಾರಿ: ಸಂತೋಷ್

ಕೋಲಾರ: ‘ದೈಹಿಕವಾಗಿ ಹಾಗೂ ಮಾನಸಿಕವಾಗಿ ವಿಕಾಸ ಹೊಂದಲು ಬೇಸಿಗೆ ಶಿಬಿರಗಳು ಸಹಕಾರಿ’ ಎಂದು ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮಾವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಅಭಿಪ್ರಾಯಪಟ್ಟರು.
ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಹಯೋಗದಲ್ಲಿ ಮಾವಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿ, ‘ಮಕ್ಕಳು ಬೇಸಿಗೆ ರಜೆಯಲ್ಲಿ ಕಾಲಹರಣ ಮಾಡದೆ ಶಿಬಿರಗಳಲ್ಲಿ ಭಾಗವಹಿಸಿ ಕ್ರಿಯಾಶೀಲರಾಗಬೇಕು’ ಎಂದು ಸಲಹೆ ನೀಡಿದರು.
‘ಕಲಿತ ಋಣ ತೀರಿಸಲು ತಾವು ಮತ್ತೊಬ್ಬರಿಗೆ ಕಲಿಸಬೇಕು. ಕಲಿಕಾಂಶಗಳನ್ನು ಇತರರೊಂದಿಗೆ ಹಂಚಿಕೊಂಡಾಗ ಮಾತ್ರ ಕಲಿಕೆ ನಿರಂತರವಾಗುತ್ತದೆ. ಕಲಿಕೆ ಶಾಶ್ವತವಾಗಲು ನಾವು ನಿರಂತರವಾಗಿ ಕಲಿಯುತ್ತಾ ಇತರರಿಗೆ ಕಲಿಸುತ್ತಾ ಸಾಗಬೇಕು. ಆರೋಗ್ಯವಂತರಾಗಿರಲು ನಿಯಮಿತವಾಗಿ ವ್ಯಾಯಾಮ, ಯೋಗ ಮಾಡಬೇಕು’ ಎಂದರು.
‘ವಿದ್ಯಾರ್ಥಿ ದಿಸೆಯಿಂದಲೇ ದೈಹಿಕ ಕಸರತ್ತು ಮತ್ತು ಯೋಗವನ್ನು ಜೀವನದ ಹವ್ಯಾಸವಾಗಿ ರೂಢಿಸಿಕೊಳ್ಳಬೇಕು. ಬಾಲ್ಯದಲ್ಲಿ ಕಲಿತ ಹಾಗೂ ಸಂಭ್ರಮಿಸಿದ ದಿನಗಳು ಜೀವನಪೂರ್ತಿ ನೆನಪಿನಲ್ಲಿ ಉಳಿಯಲಿವೆ. ಮಕ್ಕಳು ಸುತ್ತಲಿನ ಪರಿಸರವನ್ನು ಪ್ರೀತಿಸುವ ಹಾಗೂ ಪೋಷಿಸುವ ಗುಣ ಬೆಳೆಸಿಕೊಳ್ಳಬೇಕು’ ಎಂದು ಗ್ರಾಮದ ಮುಖಂಡ ಹರೀಶ್‌ಬಾಬು ತಿಳಿಸಿದರು.
‘ಗ್ರಾಮದ ಶಾಲೆಯ ಎಲ್ಲಾ ಮಕ್ಕಳಿಗೂ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣ ಸಿಗಲು ಅಗತ್ಯ ಸಹಕಾರ ಮತ್ತು ಮಾರ್ಗದರ್ಶನ ನೀಡುತ್ತೇವೆ. ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣವು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿ. ಗ್ರಾಮಸ್ಥರು ತಿಂಗಳಲ್ಲಿ ಒಂದು ಭಾನುವಾರ ನಿಗದಿಪಡಿಸಿ ಶಿಬಿರ ಆಯೋಜಿಸಿದರೆ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ’ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಸಂಘಟನಾ ಆಯುಕ್ತ ಬಾಬು ಹೇಳಿದರು.
ಗ್ರಾ.ಪಂ ಸದಸ್ಯ ನವೀನ್‌ಕುಮಾರ್, ಗ್ರಾಮದ ಮುಖಂಡರಾದ ಚಲಪತಿ, ವೆಂಕಟರಾಮ್, ಶ್ರೀನಿವಾಸ, ಮುನಿಶಾಮಪ್ಪ, ಬಾಬು ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.