ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರ್ನಹಳ್ಳಿ: ಗುತ್ತಿಗೆದಾರರಿಂದ ಪೈಪ್‌ಲೈನ್ ನಾಶ, ನೀರಿಲ್ಲದೆ ಗ್ರಾಮಸ್ಥರು ಕಂಗಾಲು

ಕೃಷ್ಣಮೂರ್ತಿ
Published 15 ಮಾರ್ಚ್ 2024, 5:52 IST
Last Updated 15 ಮಾರ್ಚ್ 2024, 5:52 IST
ಅಕ್ಷರ ಗಾತ್ರ

ಕೆಜಿಎಫ್: ಬಂಡೆ ಊರು ಎಂದೇ ಖ್ಯಾತಿಯಾಗಿರುವ ನೆರ್ನಹಳ್ಳಿ ಗ್ರಾಮದಲ್ಲಿ ಕೆಲ ದಿನಗಳಿಂದ ನೀರಿನ ಅಭಾವ ತಲೆದೋರಿದ್ದು,  ಗ್ರಾಮಸ್ಥರಿಗೆ ಕೇವಲ ಕುಡಿಯುವ ನೀರು ಮಾತ್ರ ಲಭ್ಯವಾಗುತ್ತಿದ್ದು, ಜಾನುವಾರುಗಳಿಗೆ ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿವೆ.

ಸುಮಾರು 500 ಜನಸಂಖ್ಯೆ ಹೊಂದಿರುವ ರಾಮಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ನೆರ್ನಹಳ್ಳಿ ಗ್ರಾಮಕ್ಕೆ ಎರಡು ಕುಡಿಯುವ ನೀರಿನ ಕೊಳವೆ ಬಾವಿಗಳಿದ್ದು, ಒಂದು ನೀರಿಲ್ಲದೆ ಭತ್ತಿದೆ. ಮತ್ತೊಂದು ಕೊಳವೆಬಾವಿಯಲ್ಲಿ ನೀರಿದ್ದರೂ, ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ಕಾರಿಡಾರ್‌ಗೆ ಮಣ್ಣು ಸಾಗಿಸುವ ಗುತ್ತಿಗೆದಾರರು ಪೈಪ್‌ಲೈನ್‌ ಹೊಡೆದು ಹಾಕಿದ್ದಾರೆ. ಇದರಿಂದ ಗ್ರಾಮದಿಂದ ಸುಮಾರು ಎರಡು ಕಿ.ಮೀ ದೂರದಲ್ಲಿರುವ ಕೊಳವೆಬಾವಿಯಿಂದ ನೀರನ್ನು ತರಲು ಪೈಪ್‌ಲೈನ್ ಅಳವಡಿಸಬೇಕಾಗಿದೆ. ಆದರೆ ಪಂಚಾಯಿತಿಯಲ್ಲಿ ಹಣವಿಲ್ಲದೆ ಪೈಪ್‌ಲೈನ್‌ ಅಳವಡಿಸಿಲ್ಲ. ಹಾಗಾಗಿ ಗ್ರಾಮದ ಜನತೆ ನೀರಿಲ್ಲ ಪರದಾಡುತ್ತಿದ್ದಾರೆ.

ನೆರ್ನಹಳ್ಳಿ ಗ್ರಾಮದ ಬಹುತೇಕ ಮನೆಗಳು ಬಂಡೆ ಕಲ್ಲಿನ ಮೇಲೆ ನಿರ್ಮಿತವಾಗಿದೆ. ಈ ಜಾಗದಲ್ಲಿ ಕೊಳವೆ ಬಾವಿ ಕೊರೆಯುವುದು ಅಸಾಧ್ಯ. ಹಿಂದೆ ಬಂಡೆಯ ಮಧ್ಯದಲ್ಲಿ 1350 ಅಡಿ ಆಳದ ಕೊಳವೆಬಾವಿ ಕೊರೆದಿದ್ದರೂ, ಅದರಲ್ಲಿ ನೀರು ಸಿಗದೆ ಅದನ್ನು ಮುಚ್ಚಲಾಗಿತ್ತು. ಈಗ ಇರುವ ಮತ್ತೊಂದು ಕೊಳವೆಬಾವಿಯಲ್ಲಿ ಅರ್ಧ ಗಂಟೆ ಮಾತ್ರ ನೀರು ಸಣ್ಣಗೆ ಬರುತ್ತದೆ. ಇಡೀ ರಾತ್ರಿ ಹಾಗಾಗ ಮೋಟಾರ್ ಚಾಲನೆ ಮಾಡಿದರೆ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮಾತ್ರ ನೀರು ಸಿಗುತ್ತಿದೆ ಎಂಬುದು ಗ್ರಾಮಸ್ಥರ ಮಾತಾಗಿದೆ.

‌ಗೆನ್ನೇರಹಳ್ಳಿ ಕೆರೆಯಲ್ಲಿರುವ ಕೊಳವೆಬಾವಿಯಲ್ಲಿ ಚೆನ್ನಾಗಿ ನೀರು ಸಿಗುತ್ತಿದೆ ಎಂದು ದೃಢಪಡಿಸಲಾಗಿದೆ. ಆದರೆ, ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ಗೆ ಮಣ್ಣು ಸರಬರಾಜು ಮಾಡುವ ಗುತ್ತಿಗೆದಾರರು ಅಕ್ರಮವಾಗಿ ಕೊಳವೆಬಾವಿ ಸುತ್ತಲೂ ಸುಮಾರು ನಲವತ್ತು ಅಡಿಗಳಷ್ಟು ಆಳದ ಮಣ್ಣನ್ನು ತೆಗೆದಿದ್ದಾರೆ. ಕೊಳವೆಬಾವಿಗೆ ಹಾಕಲಾಗಿದ್ದ ಕೇಬಲ್ ತುಂಡರಿಸಿದ್ದಾರೆ. ಗ್ರಾಮಕ್ಕೆ ಹಾಕಲಾಗಿದ್ದ ಪೈಪ್‌ಲೈನ್ ಅನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದೆ. ಇದರಿಂದಾಗಿ ಗ್ರಾಮದಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಾಬುರೆಡ್ಡಿ ಮಾಹಿತಿ ನೀಡಿದರು.

ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ತಕ್ಷಣವೇ ಪಂಚಾಯಿತಿ ಅಧಿಕಾರಿಗಳು ಲಭ್ಯ ಇರುವ ಜಲಮೂಲಗಳಿಂದ ನೀರನ್ನು ಗ್ರಾಮಸ್ಥರಿಗೆ ಸರಬರಾಜು ಮಾಡಬೇಕು. ಆದರೆ, ಇದುವರೆವಿಗೂ ಸ್ಥಳ ಪರಿಶೀಲನೆ ಕೂಡ ಮಾಡಿಲ್ಲ. ಕೆರೆಯಲ್ಲಿರುವ ಕೊಳವೆಬಾವಿಗೆ ಮೋಟಾರ್ ಅಳವಡಿಸಲಾಗಿದೆ. ಆದರೆ, ವಿದ್ಯುತ್ ಸರಬರಾಜಿಗೆ ಟ್ರಾನ್ಸ್‌ಫಾರ್ಮ್‌ ದುರಸ್ತಿ ಮಾಡುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಅವರೂ ಕೂಡ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಕುಡಿಯುವ ನೀರಿಗೆ ಆಸರೆಯಾದ ಶುದ್ಧ ಕುಡಿಯುವ ನೀರಿನ ಘಟಕ
ಕುಡಿಯುವ ನೀರಿಗೆ ಆಸರೆಯಾದ ಶುದ್ಧ ಕುಡಿಯುವ ನೀರಿನ ಘಟಕ
ದುರಸ್ತಿಯಾಗದ ಟ್ರಾನ್ಸ್ ಫಾರ್ಮ್‌
ದುರಸ್ತಿಯಾಗದ ಟ್ರಾನ್ಸ್ ಫಾರ್ಮ್‌
ನೀರಿಲ್ಲದೆ ಒಣಗಿದ ಬೀದಿ ನಲ್ಲಿಗಳು
ನೀರಿಲ್ಲದೆ ಒಣಗಿದ ಬೀದಿ ನಲ್ಲಿಗಳು

ತ್ವರಿತ ಗತಿಯಲ್ಲಿ ಸಮಸ್ಯೆಗೆ ಮುಕ್ತಿ

ತಾಲ್ಲೂಕಿನಲ್ಲಿ ಐದಾರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಎನ್‌ಡಿಆರ್‌ಎಫ್‌ ಅನುದಾನದಲ್ಲಿ ತ್ವರಿತವಾಗಿ ಸಮಸ್ಯೆ ಬಗೆಹರಿಸಲಾಗುವುದು. ಗ್ರಾಮಗಳಲ್ಲಿರುವ ಗೋಕುಂಟೆಗಳಲ್ಲಿ ನೀರು ಬಿಡುವುದಕ್ಕೆ ಪಿಡಿಒಗಳಿಗೆ ಸೂಚಿಸಲಾಗಿದೆ. ನೆರ್ನಹಳ್ಳಿ ಗ್ರಾಮದಲ್ಲಿ ಉಂಟಾಗಿರುವ ಸಮಸ್ಯೆ ಬಗೆಹರಿಸುವಂತೆ ಪಿಡಿಒ ಅವರಿಗೆ ಸೂಚಿಸಲಾಗಿದೆ. ಮಂಜುನಾಥ ಹರ್ತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ 

ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ ಅಧಿಕಾರಿಗಳು ಕೂಡಲೇ ಹಾಳಾದ ಪೈಪ್‌ಲೈನ್ ಅಳವಡಿಸಿ ನಷ್ಟ ಪರಿಹಾರ ನೀಡಬೇಕು.
–ಬಾಬು ರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT