ಸೋಮವಾರ, ಜನವರಿ 20, 2020
17 °C

ಕೋಲಾರ: ಸ್ವಾಮಿನಾಥನ್‌ ವರದಿ ಜಾರಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಸ್ವಾಮಿನಾಥನ್‌ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಬುಧವಾರ ಧರಣಿ ನಡೆಸಿದರು.

‘ಕೇಂದ್ರ ಸರ್ಕಾರವು ಸ್ವಾಮಿನಾಥನ್‌ ಆಯೋಗದ ವರದಿ ಜಾರಿಗೊಳಿಸದೆ ರೈತರಿಗೆ ಅನ್ಯಾಯ ಮಾಡಿದೆ. ಕಾರ್ಪೊರೇಟ್‌ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಪರವಾಗಿರುವ ಕೇಂದ್ರವು ರೈತರು ಮತ್ತು ಕಾರ್ಮಿಕರನ್ನು ಶೋಷಿಸುತ್ತಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ ಬಹಿರಂಗ ಸಭೆಗಳಲ್ಲಿ ರೈತರ ಹಿತರಕ್ಷಣೆ ಬಗ್ಗೆ ಭಾಷಣ ಮಾಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್‌ ಆಯೋಗದ ವರದಿ ಜಾರಿಗೊಳಿಸುವುದಾಗಿ ಘೋಷಿಸಿದ್ದರು. ಅವರ ಮಾತು ನಂಬಿ ಮತ ಹಾಕಿದ ರೈತರು ಈಗ ಪಶ್ಚಾತ್ತಾಪ ಪಡುವಂತಾಗಿದೆ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

‘ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಸ್ವಾಮಿನಾಥನ್‌ ಆಯೋಗದ ವರದಿ ಜಾರಿ ಸಾಧ್ಯವಿಲ್ಲ ಎಂದು ಹೇಳಿದೆ. ಬಿಜೆಪಿಯು ಚುನಾವಣೆಗೂ ಮುನ್ನ ನೀಡಿದ್ದ ಭರವಸೆ ಹುಸಿಯಾಗಿದೆ. ಪ್ರಧಾನಿ ಮೋದಿ ಬೂಟಾಟಿಕೆ ಮನುಷ್ಯ’ ಎಂದು ಟೀಕಿಸಿದರು.

ಪರಿಸ್ಥಿತಿ ಹದಗೆಡುತ್ತಿದೆ: ‘ಕೇಂದ್ರವು ರೈತರು, ಕೃಷಿ ಕಾರ್ಮಿಕರ ಆರ್ಥಿಕ ಬೆಳೆವಣಿಗೆಗೆ ಅನುಕೂಲವಾಗುವ ನೀತಿ ಜಾರಿ ಮಾಡಿಲ್ಲ. ಬದಲಿಗೆ ಕೆಲವೇ ಶ್ರೀಮಂತ ಕುಟುಂಬಗಳು ಇಡೀ ದೇಶದ ಆಸ್ತಿ ದೋಚಲು ಅನುಕೂಲವಾಗುವಂತಹ ನೀತಿ ಜಾರಿಗೊಳಿಸುತ್ತಿದೆ. ದುಡಿಯುವ ವರ್ಗದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ರೈತರು ಬೆಳೆ ನಷ್ಟ, ಬೆಲೆ ಕುಸಿತದಿಂದ ಬೀದಿಗೆ ಬಿದ್ದಿದ್ದಾರೆ. ಆಳುವ ವರ್ಗವು ಬಂಡವಾಳಶಾಹಿಗಳ ಕೈಗೊಂಬೆಯಾಗಿದೆ’ ಎಂದು ಧರಣಿನಿರತರು ಕಿಡಿಕಾರಿದರು.

‘ದೇಶದ ಶಿಕ್ಷಣ ವ್ಯವಸ್ಥೆ ಬಲಪಡಿಸಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ರೀತಿಯಲ್ಲಿ ಬೆಂಬಲ ಬೆಲೆ ನಿಗದಿಪಡಿಸಬೇಕು. ರೈತರು ಹಾಗೂ ಕೃಷಿಕರ ಪರವಾದ ಆರ್ಥಿಕ ನೀತಿ ರೂಪಿಸಬೇಕು. ಸ್ವಾಮಿನಾಥನ್‌ ಆಯೋಗದ ವರದಿ ಜಾರಿಯಾಗಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್‌, ಸಂಚಾಲಕ ಕೆ.ಶ್ರೀನಿವಾಸಗೌಡ, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಸದಸ್ಯರಾದ ಮಂಜುನಾಥ್, ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ನಾರಾಯಣಪ್ಪ, ರಾಮಣ್ಣ, ಗಣೇಶ್ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು