ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತಂದ ತೈವಾನ್ ಸೀಬೆ

ಬಯಲು ಸೀಮೆಗೆ ವರದಾನ: ಅನ್ನದಾತರಿಗೆ ಪ್ರೇರಣೆ
Last Updated 21 ಸೆಪ್ಟೆಂಬರ್ 2022, 5:27 IST
ಅಕ್ಷರ ಗಾತ್ರ

ಮಾಲೂರು: ಕೃಷಿ ಭೂಮಿ ರೈತರ ಪ್ರಯೋಗ ಶಾಲೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಪಟ್ಟಣದ ನಿವೃತ್ತ ಅರಣ್ಯಾಧಿಕಾರಿ ಆಂಜಿನಪ್ಪ ಅವರೇ ಸಾಕ್ಷಿ. ತಮಗೆ ಸೇರಿದ ಒಂದು ಎಕರೆ ಜಮೀನಿನಲ್ಲಿ ಅವರು ತೈವಾನ್ ಪಿಂಕ್ ತಳಿಯ ಸೀಬೆ (ಚೇಪೆ ಹಣ್ಣು) ಬೆಳೆದು ಆದಾಯ ಕಂಡುಕೊಂಡಿದ್ದಾರೆ.

ಸಮೃದ್ಧವಾಗಿ ಬೆಳೆದಿರುವ ಸೀಬೆ ಹಣ್ಣಿನ ತೋಟ ನೋಡುಗರ ಬಾಯಿಯಲ್ಲಿ ನೀರೂರಿಸುತ್ತದೆ.ಹೆಚ್ಚು ನೀರು ಬಯಸದ ಸೀಬೆ ಬಯಲು ಸೀಮೆಗೆ ಹೇಳಿ ಮಾಡಿಸಿದ ಬೆಳೆ. ಆದರೆ, ತಾಲ್ಲೂಕಿನಲ್ಲಿ ರೇಷ್ಮೆ, ಟೊಮೆಟೊ ಸೇರಿದಂತೆ ಇತರೇ ತೋಟಗಾರಿಕೆ ಬೆಳೆ ಬೆಳೆಯುವವರೇ ಹೆಚ್ಚು. ಸೀಬೆ ಬೆಳೆಯುವವರ ಸಂಖ್ಯೆ ತೀರಾ ಕಡಿಮೆ. ಈ ನಡುವೆಯೇ ಆಂಜಿನಪ್ಪ ಅವರ ಕೃಷಿಗೆ ಅಕ್ಕ‍ಪಕ್ಕದವರು ಮಾರು ಹೋಗಿದ್ದಾರೆ.

ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗಲೇ ಅವರು ಕಾಡಿನಲ್ಲಿ ಬೆಳೆಯುವ ಸೀಬೆ, ಸೀತಾಫಲ ಗಿಡಗಳ ಮೇಲೆ ಆಸಕ್ತಿ ಹೊಂದಿದ್ದರು. ನಿವೃತ್ತಿ ನಂತರ ಕೃಷಿ ಕ್ಷೇತ್ರವನ್ನು ಅಪ್ಪಿಕೊಂಡಿರುವ ಅವರು ವೈಜ್ಞಾನಿಕ ವಿಧಾನದಡಿ ಸೀಬೆ ಕೃಷಿ
ಮಾಡಿದ್ದಾರೆ.

ಒಂದು ಎಕರೆ ಭೂಮಿಯಲ್ಲಿ ತೈವಾನ್ ಪಿಂಕ್ ತಳಿಯ 800 ಸೀಬೆ ಸಸಿಗಳನ್ನು ನಾಟಿ ಮಾಡಿ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಗಿಡಗಳು ಕಾಯಿ ಬಿಟ್ಟು ತಾಳಿಕೊಳ್ಳುವ ಸಾಮರ್ಥ್ಯ ಬರುವವರೆಗೂ ಅಂದರೆ ಕಳೆದ 9 ತಿಂಗಳುಗಳಿಂದ ಪಿಂದೆಯನ್ನು ಕಿತ್ತು ಹಾಕಿದ್ದರು. 3 ತಿಂಗಳ ಹಿಂದೆಯಷ್ಟೇ ಬೆಳೆದ ಪಿಂದೆಗಳನ್ನು ಉಳಿಸಿಕೊಂಡಿದ್ದಾರೆ. ಸೀಬೆ ಹಣ್ಣನ್ನು ಉಜಿ ನೊಣ ಹಾಗೂ ಕೀಟಗಳಿಂದ ರಕ್ಷಿಸಿಕೊಳ್ಳಲು ಸ್ಪಾಂಜ್ ಅಳವಡಿಸಿದ್ದಾರೆ. ಇದರಿಂದ ಕಾಯಿ ಹಾಳಾಗುವುದು ಕಡಿಮೆ. ಪಕ್ಷಿಗಳ ಕಾಟದಿಂದಲೂ ಹಣ್ಣುಗಳನ್ನು ರಕ್ಷಿಸಿಕೊಳ್ಳಲು ಅನುಕೂಲವಾಗಿದೆ.

ಸಾಮಾನ್ಯವಾಗಿ ಸೀಬೆ ಹಣ್ಣು 100ರಿಂದ 250 ಗ್ರಾಂ ತೂಗುವುದೇ ಹೆಚ್ಚು. ಈ ತೈವಾನ್ ತಳಿಯ ಪ್ರತಿ ಹಣ್ಣು ಕನಿಷ್ಠ 800 ಗ್ರಾಂನಿಂದ 1 ಕೆ.ಜಿ 100 ಗ್ರಾಂ ತೂಕವಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ₹ 85ರಿಂದ ₹ 90 ದರವಿದೆ. ಉತ್ತಮ ಬೇಡಿಕೆ ಇರುವುದರಿಂದ ಹೆಚ್ಚಿನ ಆದಾಯ ಲಭಿಸುತ್ತಿದೆ.

ಸೀಬೆ ಬೆಳೆಯಲ್ಲಿ ವರ್ಷಕ್ಕೆ ಎರಡು ಫಸಲು ಪಡೆಯಬಹುದು. ಫಸಲು ಬಂದಾಗ ವಾರಕ್ಕೆ ಒಂದು ಬಾರಿ ಇಳುವರಿ ಕಟಾವಿಗೆ ಸಿಗುತ್ತದೆ. ಈಗಾಗಲೇ ಅವರು ಎರಡು ಬಾರಿ ಸೀಬೆ ಫಸಲನ್ನು ಸ್ಯಾಂಪಲ್ ಆಗಿ ಕಟಾವು ಮಾಡಿದ್ದಾರೆ. ಸ್ಥಳೀಯ ವ್ಯಾಪಾರಸ್ಥರು ಬಂದು ಕಡಿಮೆ ಬೆಲೆಗೆ ಫಸಲು ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ, ಅವರು ಕ್ರೇಟ್‌ಗಳಲ್ಲಿ ತುಂಬಿಸಿ ಬೆಂಗಳೂರಿನ ಮಾರುಕಟ್ಟೆಗೆ ರವಾನಿಸುತ್ತಿದ್ದಾರೆ. ತೈವಾನ್ ಪಿಂಕ್ ಸೀಬೆ ಬೆಳೆದಿರುವ ಆಂಜಿನಪ್ಪರ ಹೊಸ ಪ್ರಯತ್ನ ಹಲವು ರೈತರಿಗೆ ಪ್ರೇರಣೆಯಾಗಿದೆ.

‘ನಿವೃತ್ತನಾದ ನಂತರ ಕೃಷಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ. ಕಡಿಮೆ ಬಂಡವಾಳ ಹಾಕುವ ರೈತರು ಒಂದೇ ರೀತಿಯ ಬೆಳೆಗಳಿಗೆ ಸೀಮಿತವಾಗಬಾರದು. ಹೆಚ್ಚು ಲಾಭ ಕೊಡುವ ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು’ ಎಂಬುದು ನಿವೃತ್ತ ಅರಣ್ಯಾಧಿಕಾರಿ ಆಂಜಿನಪ್ಪ ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT