ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರು ಸಮಾಜಕ್ಕೆ ಮಾದರಿಯಾಗಿ

Last Updated 11 ಏಪ್ರಿಲ್ 2021, 8:41 IST
ಅಕ್ಷರ ಗಾತ್ರ

ಕೋಲಾರ: ‘ಗುರು- ಶಿಷ್ಯರ ಸಂಬಂಧ ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಶಿಷ್ಯರ ಬದುಕನ್ನು ಕಟ್ಟಿಕೊಡುವ ಮೂಲಕ ಶಿಕ್ಷಕರು ಸಮಾಜಕ್ಕೆ ಮಾದರಿಯಾಗಬೇಕು’ ಎಂದು ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್‌ ಕಿವಿಮಾತು ಹೇಳಿದರು.

ತಾಲ್ಲೂಕಿನ ಸೂಲೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ‘ವಿದ್ಯಾರ್ಥಿಗಳ ಸಾಧನೆಯ ಚಿಂತೆಯಲ್ಲಿರುವ ಶಿಕ್ಷಕ ವೃತ್ತಿಯ ಘನತೆ ಹೆಚ್ಚಿನದು. ಗುರುವಿನ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.

‘ಭಾರತೀಯ ಶಿಕ್ಷಣ ವ್ಯವಸ್ಥೆಗೆ ಗುರು-ಶಿಷ್ಯ ಪರಂಪರೆಯು ಭದ್ರ ಅಡಿಪಾಯವಿತ್ತು. ಆಧುನಿಕ ಶಾಲಾ ಶಿಕ್ಷಣದಲ್ಲಿ ಸಾಕಷ್ಟು ಲೋಪಗಳಿವೆ. ಶಿಕ್ಷಣದ ಉದ್ದೇಶ ಕಲಿಸುವುದು ಮಾತ್ರವಲ್ಲ. ಕಾಲಕ್ಕೆ ತಕ್ಕಂತೆ ಸಮಾಜ ಬದಲಾದಂತೆ ಶಿಕ್ಷಣ ವ್ಯವಸ್ಥೆಯೂ ಬದಲಾಗಬೇಕು’ ಎಂದು ಸಲಹೆ ನೀಡಿದರು.

‘ವ್ಯಕ್ತಿಯ ಸರ್ವತ್ತೋಮುಖ ಅಭಿವೃದ್ಧಿಗೆ ಶಿಕ್ಷಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಶಿಕ್ಷಕರು ರಾಷ್ಟ್ರ ನಿರ್ಮಾತೃಗಳು. ವಿದ್ಯಾರ್ಥಿಗಳು ರಾಷ್ಟ್ರದ ಶಕ್ತಿ. ಅವರನ್ನು ಶಿಕ್ಷಣದ ಮೂಲಕ ಸಮಾಜಮುಖಿಯಾಗಿ ಮಾಡಿ ದೇಶಕ್ಕೆ ಅರ್ಪಿಸುವುದು ಶಿಕ್ಷಕರ ಜವಾಬ್ದಾರಿ’ ಎಂದು ಸಿರಿಗನ್ನಡ ವೇದಿಕೆ ಜಿಲ್ಲಾ ಅಧ್ಯಕ್ಷ ಎಚ್.ರಾಮಚಂದ್ರಪ್ಪ ತಿಳಿಸಿದರು.

‘ಶಾಲೆಯಲ್ಲಿ ಶಿಕ್ಷಕರನ್ನು ಗೌರವಿಸುವ ಪರಂಪರೆ ರೂಢಿಸಿಕೊಂಡಿರುವುದು ಶ್ರೇಷ್ಠ. ಶಿಕ್ಷಣ ಇಲಾಖೆಯು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರ ಫಲಿತಾಂಶ ಸಾಧನೆಯ ಗುರಿ ನೀಡಿದೆ. ಈ ಗುರಿ ಸಾಧನೆ ನಿಜಕ್ಕೂ ದೊಡ್ಡ ಸವಾಲು. ಶಿಕ್ಷಕರು ನಿರಂತರ ಪಾಠ ಪ್ರವಚನಗಳ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ’ ಎಂದು ಸೂಲೂರು ಪ್ರೌಢ ಶಾಲೆ ಮುಖ್ಯ ಶಿಕ್ಷಕ ಬಿ.ಎಂ.ಚಂದ್ರಪ್ಪ ವಿವರಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುನಿರಾಜ್, ಸಿರಿಗನ್ನಡ ವೇದಿಕೆ ತಾಲ್ಲೂಕು ಅಧ್ಯಕ್ಷ ಹರೀಶ್, ಕೋಶಾಧ್ಯಕ್ಷ ಕೆ.ಎನ್.ಪರಮೇಶ್ವರ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT