ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಸಂಘದ ಚುನಾವಣೆ: ಪ್ರಣಾಳಿಕೆ ಬಿಡುಗಡೆ

Last Updated 11 ಡಿಸೆಂಬರ್ 2020, 14:35 IST
ಅಕ್ಷರ ಗಾತ್ರ

ಕೋಲಾರ: ‘ಶಿಕ್ಷಕರ ಸಂಘ ಮತ್ತು ನೌಕರರ ಸಂಘದ ನಡುವೆ ಸಮನ್ವಯ ಇದ್ದರೆ ಮಾತ್ರ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಜಿ.ಸುರೇಶ್‌ಬಾಬು ಅಭಿಪ್ರಾಯಪಟ್ಟರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ಶುಕ್ರವಾರ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ‘ಜಿಲ್ಲಾ ಸರ್ಕಾರಿ ನೌಕರರ ಸಂಘ, ಬಡ್ತಿ ಮುಖ್ಯ ಶಿಕ್ಷಕರ ಸಂಘ, ಶಿಕ್ಷಕ ಗೆಳೆಯರ ಬಳಗ, ಎನ್‌ಪಿಎಸ್‌ ನೌಕರರ ಸಂಘ ಸೇರಿದಂತೆ ಎಲ್ಲಾ ವೃಂದ ಸಂಘಗಳ ಬೆಂಬಲದೊಂದಿಗೆ ಒಮ್ಮತದ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಲಾಗಿದೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರ ಮಾಗದರ್ಶನದಲ್ಲಿ ಮುನ್ನಡೆದರೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಷಡಕ್ಷರಿ ಅವರು 2022ರೊಳಗೆ ಎನ್‌ಪಿಎಸ್‌ ರದ್ದು ಮಾಡಿಸುವ ಭರವಸೆ ನೀಡಿದ್ದಾರೆ. ಶಿಕ್ಷಕರಿಗಾಗಿ ಕುಂದು ಕೊರತೆ ಸಲಹಾ ಪೆಟ್ಟಿಗೆ ಸ್ಥಾಪನೆ, ತಿಂಗಳ 2ನೇ ತಾರೀಖಿನೊಳಗೆ ವೇತನ ಬಟವಾಡೆ ಬೇಡಿಕೆ ಈಡೇರಿಸಲು ಪ್ರಯತ್ನ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ದೈಹಿಕ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ ಮಾಡಿ ಸಹ ಶಿಕ್ಷಕರೆಂದು ಪರಿಗಣನೆ, ಮುಖ್ಯ ಶಿಕ್ಷಕರ ಬಹು ವರ್ಷಗಳ ಬೇಡಿಕೆಯಾದ ವಾರ್ಷಿಕ ಬಡ್ತಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನನೆಗುದಿಗೆ ಬಿದ್ದಿರುವ ಗುರು ಭವನ ನಿರ್ಮಾಣ, ಹೊಸ ಶಿಕ್ಷಣ ನೀತಿಯಡಿ ಏಕ ರೂಪದ ವೇತನ ಬೇಡಿಕೆ ಈಡೇರಿಕೆಗೂ ಶ್ರಮಿಸುತ್ತೇವೆ’ ಎಂದು ತಿಳಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಟ ಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್, ಪದಾಧಿಕಾರಿಗಳಾದ ರವಿಚಂದ್ರ, ಹಾಲಿ ಖಜಾಂಚಿ ವಿಜಯ್, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್, ಜಿಲ್ಲಾ ಉರ್ದು ಶಿಕ್ಷಕರ ಸಂಘದ ಸದಸ್ಯ ಯೂನಸ್ ಖಾನ್, ಶಿಕ್ಷಕ ಗೆಳೆಯರ ಬಳಗದ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT