ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆ ರೈತರ ಬೆನ್ನೆಲುಬು

Last Updated 7 ಮಾರ್ಚ್ 2020, 14:47 IST
ಅಕ್ಷರ ಗಾತ್ರ

ಕೋಲಾರ: ‘ರೈತರು ಸಕಾಲಕ್ಕೆ ರಾಸುಗಳ ಆರೋಗ್ಯ ತಪಾಸಣೆ ಮಾಡಿಸಿ ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ಕೊಡಬೇಕು’ ಎಂದು ಪಶು ವೈದ್ಯಾಧಿಕಾರಿ ಡಾ.ವಿಜಯ್‌ಪಾಟೀಲ್ ಸಲಹೆ ನೀಡಿದರು.

ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರದ ಸಹಯೋಗದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಶು ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ‘ಹೈನೋದ್ಯಮವು ಜಿಲ್ಲೆಯ ಜೀವನಾಡಿ. ಹೈನುಗಾರಿಕೆಯು ರೈತ ಕುಟುಂಬಗಳ ಬೆನ್ನೆಲುಬಾಗಿದೆ’ ಎಂದರು.

‘ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆಯು ರೈತರ ಪ್ರಮುಖ ಆದಾಯ ಮೂಲವಾಗಿದೆ. ಹೈನೋದ್ಯಮ ಮತ್ತಷ್ಟು ಅಭಿವೃದ್ಧಿಪಡಿಸಲು ಗುಣಮಟ್ಟದ ಹಾಲು ಸರಬರಾಜು ಮಾಡಬೇಕು. ಹೈನುಗಾರಿಕೆ ಜತೆಗೆ ಉಪ ಕಸುಬಾಗಿ ಕುರಿ, ಮೇಕೆ ಸಾಕಾಣಿಕೆ ಮಾಡಬೇಕು. ಇದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಗಳಿಸಬಹುದು’ ಎಂದು ಕಿವಿಮಾತು ಹೇಳಿದರು.

‘ರೈತರ ಕೃಷಿ ಭೂಮಿಯ ಫಲವತ್ತತೆಗೆ ಜಾನುವಾರುಗಳು ಅತಿ ಮುಖ್ಯ. ಚಿಕಿತ್ಸಾ ಶಿಬಿರಗಳು ರಾಸುಗಳ ಆರೋಗ್ಯ ವೃದ್ಧಿಸಲು ಸಹಕಾರಿಯಾಗಿವೆ. ಗ್ರಾಮಗಳಲ್ಲಿ ಇಂದಿಗೂ ಹಳೇ ವಿಧಾನದಲ್ಲೇ ಪಶು ಸಂಗೋಪನೆ ಮಾಡುತ್ತಿದ್ದಾರೆ. ಇದರಿಂದ ಆರ್ಥಿಕವಾಗಿ ಸಶಕ್ತರಾಗಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ಪಶು ಸಂಗೋಪನೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ರಾಸುಗಳನ್ನು ಸಾಕುವುದು ರೈತರಿಗೆ ದೊಡ್ಡ ಸವಾಲಾಗಿದೆ. ಆಧುನಿಕ ಪದ್ಧತಿಯಲ್ಲಿ ಪಶು ಸಂಗೋಪನೆ ಮಾಡಿದರೆ ರಾಸುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯವಂತ ಕರುಗಳನ್ನು ಪಡೆಯಬಹುದು. ಜತೆಗೆ ಹಾಲು ಉತ್ಪಾದನೆ ಹೆಚ್ಚುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸ್ವಾವಲಂಬನೆ: ‘ರೈತರು ಹೈನುಗಾರಿಕೆ ಮತ್ತು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು’ ಎಂದು ಕೃಷಿ ಇಲಾಖೆ ಅಧಿಕಾರಿ ಸುನಿಲ್‌ಕುಮಾರ್ ಹೇಳಿದರು.

ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪೌಷ್ಟಿಕ ಮೇವಿನ ಉತ್ಪಾದನೆ, ರಾಸುಗಳ ಸ್ವಚ್ಛತೆ, ಅಜೋಲ ಉತ್ಪಾದನೆ ಮತ್ತು ಬಳಕೆ ಬಗ್ಗೆ ರೈತರಿಗೆ ಅರಿವು ಮೂಡಿಸಿದರು. ತಾಲ್ಲೂಕಿನ ಶೆಟ್ಟಿಕೊತ್ತನೂರು, ಶೆಟ್ಟಿಗಾನಹಳ್ಳಿ, ಕೊನೆಪುರ, ಪಾರ್ಶ್ವಗಾನಹಳ್ಳಿ ಗ್ರಾಮದಲ್ಲಿ ಆರೋಗ್ಯ ಶಿಬಿರ ನಡೆಯಿತು. ಶಿಬಿರದ ಸಂಯೋಜಕಿ ಜಯಲಕ್ಷ್ಮಿ, ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಮೀನಾಕ್ಷಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT