ಸೋಮವಾರ, ಮಾರ್ಚ್ 30, 2020
19 °C
ಕೊರೊನಾ ಸೋಂಕಿನ ಭೀತಿ: ವಹಿವಾಟು– ಬಸ್‌ ಸೇವೆ ಸ್ಥಗಿತ

ಕೋಲಾರ: ಕರ್ಫ್ಯೂ ಆದೇಶಕ್ಕೆ ಜಿಲ್ಲೆ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೊರೊನಾ ಸೋಂಕು ತಡೆಗಾಗಿ ರಾಜ್ಯ ಸರ್ಕಾರ ಘೋಷಿಸಿರುವ ಕರ್ಫ್ಯೂ ಕರೆಗೆ ಮಂಗಳವಾರ ಇಡೀ ಜಿಲ್ಲೆ ಸಂಪೂರ್ಣ ಸ್ತಬ್ಧವಾಯಿತು.

ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಮನೆಗಳಲ್ಲೇ ಉಳಿದು ಕರ್ಫ್ಯೂಗೆ ಬೆಂಬಲ ಸೂಚಿಸಿದರು. ವರ್ತಕರು ಸ್ವಇಚ್ಛೆಯಿಂದ ಅಂಗಡಿಗಳನ್ನು ಮುಚ್ಚಿ ವಹಿವಾಟು ಸ್ಥಗಿತಗೊಳಿಸಿದರು.

ಜಿಲ್ಲೆಯಾದ್ಯಂತ ಬಸ್‌ ಸೇವೆ ಸಂಪೂರ್ಣ ಸ್ಥಗಿತಗೊಂಡಿತು. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು, ಆಟೊಗಳು, ಸರಕು ಸಾಗಣೆ ವಾಹನಗಳು ರಸ್ತೆಗೆ ಇಳಿಯಲೇ ಇಲ್ಲ. ಸದಾ ಜನಜಂಗುಳಿ ಹಾಗೂ ವಾಹನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆಗಳು, ವಾಣಿಜ್ಯ ಪ್ರದೇಶಗಳು ಹಾಗೂ ರಸ್ತೆಗಳು ಭಣಗುಡುತ್ತಿದ್ದವು.

ರೈಲು ನಿಲ್ದಾಣಗಳು, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು. ಯುಗಾದಿ ಹಬ್ಬ ಆಚರಣೆಗಾಗಿ ಮತ್ತು ತುರ್ತು ಕಾರ್ಯದ ನಿಮಿತ್ತ ಹೊರ ಊರುಗಳಿಗೆ ಹೋಗಲು ನಿಲ್ದಾಣಕ್ಕೆ ಬಂದಿದ್ದ ಸಾರ್ವಜನಿಕರು ಪ್ರಯಾಣ ಮೊಟಕುಗೊಳಿಸಿ ಮನೆಗೆ ಹಿಂದಿರುಗಿದರು. ಮತ್ತೆ ಕೆಲ ಪ್ರಯಾಣಿಕರು ಬೈಕ್‌, ಕಾರು ಸೇರಿದಂತೆ ಸ್ವಂತ ವಾಹನಗಳಲ್ಲಿ ಪ್ರಯಾಣಿಸಿದರು.

ಬಾರ್‌, ರೆಸ್ಟೋರೆಂಟ್‌, ಚಿತ್ರಮಂದಿರಗಳು, ಬೇಕರಿ, ತಂಪು ಪಾನೀಯ ಅಂಗಡಿಗಳು, ಐಸ್‌ಕ್ರೀಮ್‌, ಚಾಟ್ಸ್‌ ಮಾರಾಟ ಮಳಿಗೆಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂದ್‌ ಮಾಡಲಾಗಿತ್ತು. ಪೆಟ್ರೋಲ್‌ ಬಂಕ್‌ಗಳು ತೆರೆದಿದ್ದರೂ ಗ್ರಾಹಕರ ಸಂಖ್ಯೆ ತೀರಾ ಕಡಿಮೆಯಿತ್ತು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸೇವೆ ಒದಗಿಸಿದವು.

ಹಾಜರಾತಿ ಕಡಿಮೆ 

ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಹಾಗೂ ಸರ್ಕಾರಿ ಕಚೇರಿಗಳು ಸೇವೆ ಒದಗಿಸಿದವು. ಆದರೆ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಬ್ಯಾಂಕ್‌, ಸರ್ಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿ ಹಾಗೂ ಸಾರ್ವಜನಿಕರ ಸಂಖ್ಯೆ ಕಡಿಮೆಯಿತ್ತು.

ಹಾಲಿನ ಬೂತ್‌ಗಳು ಹಾಗೂ ಔಷಧ ಮಾರಾಟ ಮಳಿಗೆಗಳು ಎಂದಿನಂತೆ ತೆರೆದಿದ್ದವು. ಕರ್ಫ್ಯೂ ಕಾರಣಕ್ಕೆ ವಹಿವಾಟು ಕುಸಿಯುವ ಆತಂಕದಲ್ಲಿ ಹಾಲಿನ ಬೂತ್‌ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಹಾಲು ಮತ್ತು ಮೊಸರು ತರಿಸಲಾಗಿತ್ತು. ಆದರೆ, ಹಾಲು ಮತ್ತು ಹಾಲಿನ ಉತ್ಪನ್ನಗಳು ಕ್ಷಣ ಮಾತ್ರದಲ್ಲಿ ಮಾರಾಟವಾದವು. ಹೀಗಾಗಿ ಸಾರ್ವಜನಿಕರು ಹಾಲು ಖರೀದಿಗಾಗಿ ಬೂತ್‌ಗಳ ಬಳಿ ಗಂಟೆಗಟ್ಟಲೇ ಕಾದು ನಿಂತಿದ್ದ ದೃಶ್ಯ ಕಂಡುಬಂತು.

ಊಟಕ್ಕೆ ಅಲೆದಾಟ

ಹೋಟೆಲ್‌ಗಳನ್ನು ಸಂಪೂರ್ಣವಾಗಿ ಬಂದ್‌ ಮಾಡಿದ್ದರಿಂದ ಜನ ಜೀವನಕ್ಕೆ ತೀವ್ರ ತೊಂದರೆಯಾಯಿತು. ಹೋಟೆಲ್‌ಗಳ ಮೇಲೆ ಅವಲಂಬಿತರಾದ ಕೂಲಿ ಕಾರ್ಮಿಕರು ಹಾಗೂ ಗ್ರಾಹಕರು ಊಟ, ತಿಂಡಿಗಾಗಿ ಅಲೆದಾಡುತ್ತಿದ್ದ ದೃಶ್ಯ ಕಂಡುಬಂತು.

ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಪಾರ್ಸಲ್‌ಗೆ ಸರ್ಕಾರ ಅವಕಾಶ ನೀಡಿದೆಯಾದರೂ ಮಾಲೀಕರು ಹೋಟೆಲ್‌ಗಳ ಬಾಗಿಲು ತೆರೆಯುವ ಮನಸ್ಸು ಮಾಡಲಿಲ್ಲ. ರಸ್ತೆ ಬದಿಯ ಫಾಸ್ಟ್‌ಫುಡ್‌, ಪೆಟ್ಟಿಗೆ ಅಂಗಡಿಗಳು ಬಂದ್‌ ಆಗಿದ್ದರಿಂದ ಜನರಿಗೆ ಟೀ, ಕಾಫಿ ಸಹ ಸಿಗಲಿಲ್ಲ.

ಕೋಲಾರ: ಕರ್ಫ್ಯೂ ನಡುವೆಯೂ ಇಂದಿರಾ ಕ್ಯಾಂಟೀನ್‌ಗಳು ಎಂದಿನಂತೆ ಸೇವೆ ಒದಗಿಸಿದವು. ಹೋಟೆಲ್‌ಗಳಿಗೆ ಅಲೆದಾಡಿ ಬಸವಳಿದ ಮಂದಿ ಇಂದಿರಾ ಕ್ಯಾಂಟೀನ್‌ಗಳತ್ತ ಮುಖ ಮಾಡಿದರು. ಇಂದಿರಾ ಕ್ಯಾಂಟೀನ್‌ಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಬೆಳಿಗ್ಗೆ 600 ಮಂದಿಗೆ ಉಪಾಹಾರ, ಮಧ್ಯಾಹ್ನ 400 ಮಂದಿಗೆ ಊಟ ಹಾಗೂ ರಾತ್ರಿ 100 ಮಂದಿಗೆ ಊಟ ಸಿದ್ಧಪಡಿಸಲಾಗಿತ್ತು.

ಆದರೆ, ಗ್ರಾಹಕರ ಸಂಖ್ಯೆ ಹೆಚ್ಚಿದ್ದ ಕಾರಣಕ್ಕೆ ಕ್ಯಾಂಟೀನ್‌ ಸಿಬ್ಬಂದಿಯು ಪುನಃ ಹೆಚ್ಚುವರಿಯಾಗಿ ಉಪಾಹಾರ ಹಾಗೂ ಊಟ ಸಿದ್ಧಪಡಿಸಿ ವಿತರಣೆ ಮಾಡಿದರು. ಕೊರೊನಾ ಸೋಂಕಿನ ಭೀತಿ ಕಾರಣಕ್ಕೆ ಕೆಲವರು ಕ್ಯಾಂಟೀನ್‌ಗಳಿಂದ ಊಟ, ತಿಂಡಿ ಪಾರ್ಸಲ್‌ ತೆಗೆದುಕೊಂಡು ಹೋದರು. ಇಂದಿರಾ ಕ್ಯಾಂಟೀನ್‌ಗಳು ಗ್ರಾಹಕರಿಂದ ತುಂಬಿ ಹೋಗಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು