ಮಾಲೂರು: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕುವಂತಹ ಪರಿಸ್ಥಿತಿ ತಂದಿವೆಎಂದು ಶಾಸಕ ಕೆ.ವೈ. ನಂಜೇಗೌಡ ದೂರಿದರು.
ಪಟ್ಟಣದ ಬೆಂಗಳೂರು ರಸ್ತೆಯ ಮಾರುತಿ ಪೆಟ್ರೋಲ್ ಬಂಕ್ ಬಳಿಯಿಂದ ತಾಲ್ಲೂಕು ಕಚೇರಿವರೆಗೂ ಸೈಕಲ್ ಜಾಥಾ ಮೂಲಕ ಬೆಲೆ ಏರಿಕೆ ಮಾಡಿರುವ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟಿಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಕೋವಿಡ್–19 ಹಿಡಿತಕ್ಕೆ ಸಿಲುಕಿ ಜನರು ಹೈರಾಣಾಗಿದ್ದಾರೆ. ಸಂವೇದನಾ ರಹಿತ ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನೇ ದಿನೇ ಏರುತ್ತಿದೆ. ಬೆಲೆ ಏರಿಕೆಯಿಂದಾಗಿ ಗೃಹ ಬಳಕೆ ಹಾಗೂ ದೈನಂದಿನ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದರಿಂದ ಬಡಜನತೆ, ರೈತರು, ಕೂಲಿಕಾರ್ಮಿಕರು, ಶ್ರಮಿಕರ ಬದುಕಿಗೆ ಹೊಡೆತ ಬಿದ್ದಿದೆ ಎಂದು ದೂರಿದರು.
ಕೂಡಲೇ, ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಲೆ ಏರಿಕೆ ನೀತಿ ಹಿಂಪಡೆಯಬೇಕು. ಮುಂದಿನ ದಿನಗಳಲ್ಲಿ ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್ ಹಾಗೂ ಪಕ್ಷದ ಎಲ್ಲ ಮುಂಚೂಣಿ ಘಟಕಗಳಿಂದ ಜನಸಾಮಾನ್ಯರ ಬೆಂಬಲದೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಹಂತ ಹಂತವಾಗಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಹಶೀಲ್ದಾರ್ ಕೆ. ರಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪುರಸಭಾ ಅಧ್ಯಕ್ಷ ಎನ್.ವಿ. ಮುರಳೀಧರ್, ಸದಸ್ಯ ಮಂಜುನಾಥ್, ಕೆಪಿಸಿಸಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಅಶ್ವಥ್ ರೆಡ್ಡಿ, ಹಿಂದುಳಿದ ವರ್ಗಗಳ ಜಿಲ್ಲಾ ಸಮಿತಿ ಅಧ್ಯಕ್ಷ ತೋರಲಕ್ಕಿ ಅಶೋಕ್ ಕುಮಾರ್, ಡಿಸಿಸಿ ಉಪಾಧ್ಯಕ್ಷ ಎಂ.ಜಿ. ಮಧುಸೂದನ್, ಜಿಲ್ಲಾ ಎಸ್‌ಸಿ ಮತ್ತು ಎಸ್‌ಟಿ ಬ್ಲಾಕ್ ಉಪಾಧ್ಯಕ್ಷ ಬ್ಯಾಲಹಳ್ಳಿ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಂ. ತನ್ವೀರ್ ಅಹಮದ್, ಚೇತನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ಜಗದೀಶ್, ಮುಖಂಡರಾದ ಹನುಮಂತರೆಡ್ಡಿ, ನಾಗಾಪುರ ನವೀನ್, ಶಂಕರಪ್ಪ, ಮಾದನಹಟ್ಟಿ ರವಿಕುಮಾರ್, ಅರಳೇರಿ ನಾರಾಯಣಸ್ವಾಮಿ, ಹರೀಶ್, ಶೈಲಾ, ಸೌಭಾಗ್ಯಮ್ಮ, ಸುಧಾ, ಕೋಮಲಾ, ಅಶೋಕ್, ಚಿಕ್ಕಇಗ್ಗಲೂರು ಹರೀಶ, ಎಂ.ಜೆ. ಮನೋಜ್
ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.