ಬುಧವಾರ, ಏಪ್ರಿಲ್ 21, 2021
23 °C
ಸರಕು ಸಾಗಣೆ ವಾಹನ ಸೇವೆಯಲ್ಲಿ ವ್ಯತ್ಯಯ

ಕೋಲಾರ: ದಿಗ್ಬಂಧನದ ಬಿಸಿ, ಪಾತಾಳಕ್ಕೆ ಕುಸಿದ ಟೊಮೆಟೊ ಬೆಲೆ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯಲ್ಲಿ ಟೊಮೆಟೊ ವಹಿವಾಟಿಗೆ ಕೊರೊನಾ ಸೋಂಕಿನ ಬಿಸಿ ತಟ್ಟಿದ್ದು, ದಿಗ್ಬಂಧನದ ಕಾರಣಕ್ಕೆ ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ದಿಢೀರ್‌ ಕುಸಿತ ಕಂಡಿದೆ.

ಸತತ ಬರದಿಂದ ಕಂಗಾಲಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಟೊಮೆಟೊ ಬೆಲೆ ಕುಸಿತವು ದೊಡ್ಡ ಪೆಟ್ಟು ಕೊಟ್ಟಿದೆ. ದಿಗ್ಬಂಧನ ಆದೇಶದ ಹಿನ್ನೆಲೆಯಲ್ಲಿ ಸರಕು ಸಾಗಣೆ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ದಿನೇದಿನೇ ಇಳಿಮುಖವಾಗುತ್ತಿದೆ.

ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್‌ 24ರಂದು ಇಡೀ ದೇಶಕ್ಕೆ ಅನ್ವಯವಾಗುವಂತೆ ದಿಗ್ಬಂಧನ ಆದೇಶ ಜಾರಿ ಮಾಡಿದರು. ಈ ಆದೇಶದಿಂದ ಸರಕು ಸಾಗಣೆ ವಾಹನಗಳ ಓಡಾಟ ಬಹುತೇಕ ಸ್ಥಗಿತಗೊಂಡಿದ್ದು, ಮಾರುಕಟ್ಟೆಯಿಂದ ಹೊರ ರಾಜ್ಯ ಹಾಗೂ ಜಿಲ್ಲೆಗಳಿಗೆ ಟೊಮೆಟೊ ಸಾಗಿಸಲು ಸಮಸ್ಯೆಯಾಗಿದೆ.

ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯಲಾಗುತ್ತದೆ. ಜಿಲ್ಲೆಯ ಸುಮಾರು 9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ಬೆಳೆಯಿದೆ. ಜಿಲ್ಲಾ ಕೇಂದ್ರ ಎಪಿಎಂಸಿಯಲ್ಲಿ ವರ್ಷಕ್ಕೆ ಸುಮಾರು ₹ 350 ಕೋಟಿ ಟೊಮೆಟೊ ವಹಿವಾಟು ನಡೆಯತ್ತದೆ. ಪ್ರತಿನಿತ್ಯ ಸುಮಾರು 200 ಲಾರಿ ಲೋಡ್‌ ಟೊಮೆಟೊ ರಫ್ತಾಗುತ್ತದೆ.

ಜಿಲ್ಲೆಯಿಂದ ರಾಜಸ್ತಾನ, ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ದೆಹಲಿ, ಜಾರ್ಖಂಡ್‌, ಒಡಿಶಾ, ಬಿಹಾರ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್‌, ಮಹಾರಾಷ್ಟ್ರಕ್ಕೆ ಪ್ರತಿನಿತ್ಯ ಟೊಮೆಟೊ ಪೂರೈಕೆಯಾಗುತ್ತದೆ. ಅಲ್ಲದೇ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಚೀನಾ ದೇಶಕ್ಕೂ ರಫ್ತಾಗುತ್ತದೆ.

ಕೇಳುವವರಿಲ್ಲ: ಜಿಲ್ಲೆಯಲ್ಲಿ ಏಪ್ರಿಲ್‌ ತಿಂಗಳಿನಿಂದ ಅಕ್ಟೋಬರ್‌ ಅಂತ್ಯದ ಅವಧಿಯು ಟೊಮೆಟೊ ಋತುಮಾನವಾಗಿದೆ. ಈ ಅವಧಿಯಲ್ಲಿ ಟೊಮೆಟೊ ಫಸಲು ಮತ್ತು ಕೊಯ್ಲು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಫೆಬ್ರುವರಿಯಲ್ಲಿ ಹೊರ ರಾಜ್ಯಗಳಲ್ಲಿ ಟೊಮೆಟೊಗೆ ಬೇಡಿಕೆ ಹೆಚ್ಚಿತ್ತು. ಹೀಗಾಗಿ ಹೊರ ರಾಜ್ಯಗಳ ವರ್ತಕರು ಜಿಲ್ಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಖರೀದಿಸಿಕೊಂಡು ಹೋಗುತ್ತಿದ್ದರಿಂದ ಟೊಮೆಟೊ ಬೆಲೆ ಏರು ಗತಿಯಲ್ಲಿ ಸಾಗಿತ್ತು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದಿಗ್ಬಂಧನ ಆದೇಶ ಜಾರಿಯಾದ ನಂತರ ಹೊರ ರಾಜ್ಯದ ವರ್ತಕರು ಸ್ಥಳೀಯ ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಸದ್ಯ ಟೊಮೆಟೊ ಕೇಳುವವರಿಲ್ಲ.

ದಿಗ್ಬಂಧನ ಜಾರಿಗೂ ಮುನ್ನ ಮಾರ್ಚ್‌ 23ರಂದು ಸ್ಥಳೀಯ ಎಪಿಎಂಸಿಯಲ್ಲಿ ಟೊಮೆಟೊ ಆವಕ ಪ್ರಮಾಣ 2,619 ಕ್ವಿಂಟಾಲ್‌ ಇತ್ತು. ಕ್ವಿಂಟಾಲ್‌ ಟೊಮೆಟೊ ದರ ಗರಿಷ್ಠ ₹ 1,333ಕ್ಕೆ ತಲುಪಿತ್ತು. ದಿಗ್ಬಂಧನ ಜಾರಿಯಾದ ನಂತರ ಬೆಲೆ ಇಳಿಯುತ್ತಲೇ ಸಾಗಿದೆ. ಕಳೆದೊಂದು ವಾರದಲ್ಲಿ ದರ ಪಾತಾಳಕ್ಕೆ ಕುಸಿದಿದ್ದು, ಮಂಗಳವಾರ (ಏ.7) ₹ 133ಕ್ಕೆ ಬಂದು ನಿಂತಿದೆ. ಮಾರುಕಟ್ಟೆಗೆ ಮಂಗಳವಾರ 4,230 ಕ್ವಿಂಟಾಲ್‌ ಟೊಮೆಟೊ ಆವಕವಾಗಿದ್ದು, ಸಗಟು ಬೆಲೆಗೆ ಅನುಗುಣವಾಗಿ ಚಿಲ್ಲರೆ ಮಾರಾಟ ದರವು ಕೆ.ಜಿಗೆ ₹ 10ಕ್ಕೆ ಕುಸಿದಿದೆ.

ರಫ್ತು ಸ್ಥಗಿತ: ರೈತರಿಗೆ ಜಮೀನಿನಿಂದ ಮಾರುಕಟ್ಟೆಗೆ ಟೊಮೆಟೊ ತರಲು ಹಾಗೂ ಮಂಡಿ ಮಾಲೀಕರಿಗೆ ಮಾರುಕಟ್ಟೆಯಿಂದ ಹೊರ ರಾಜ್ಯ, ಜಿಲ್ಲೆಗಳಿಗೆ ಟೊಮೊಟೊ ಸಾಗಿಸಲು ವಾಹನಗಳು ಸಿಗುತ್ತಿಲ್ಲ. ಹೀಗಾಗಿ ಹೊರ ರಾಜ್ಯಗಳಿಗೆ ಟೊಮೆಟೊ ರಫ್ತು ಸ್ಥಗಿತಗೊಂಡಿದೆ. ಬೆರಳೆಣಿಕೆ ಸರಕು ಸಾಗಣೆ ವಾಹನಗಳು ಸಂಚರಿಸುತ್ತಿದ್ದು, ಏಕಾಏಕಿ ಸಾಗಣೆ ವೆಚ್ಚ ಹೆಚ್ಚಿಸಲಾಗಿದೆ.

ಬೆಲೆ ಕುಸಿತ ಹಾಗೂ ವಾಹನ ಸಮಸ್ಯೆ ಕಾರಣಕ್ಕೆ ರೈತರು ಟೊಮೆಟೊ ಕೊಯ್ಲು ಮಾಡುವುದನ್ನೇ ನಿಲ್ಲಿಸಿದ್ದು, ಜಮೀನುಗಳಲ್ಲಿ ಟೊಮೆಟೊ ಗಿಡದಲ್ಲೇ ಹಣ್ಣಾಗಿ ಕೊಳೆಯಲಾರಂಭಿಸಿದೆ.

ಸಂಪಾದನೆ ಖೋತಾ: ಮಂಡಿ ಮಾಲೀಕರು, ಲಾರಿ ಚಾಲಕರು ಹಾಗೂ ಹಮಾಲಿಗಳಿಗೂ ದಿಗ್ಬಂಧನದ ಬಿಸಿ ತಟ್ಟಿದೆ. ಕೋಲಾರ ಎಪಿಎಂಸಿಯಲ್ಲಿ 150 ಮಂದಿ ಮಂಡಿ ಮಾಲೀಕರು ಹಾಗೂ 500ಕ್ಕೂ ಹೆಚ್ಚು ಹಮಾಲಿಗಳು ಇದ್ದಾರೆ. ಮಂಡಿ ಮಾಲೀಕರಿಗೆ ಬೇರೆ ರಾಜ್ಯಗಳಿಗೆ ಟೊಮೆಟೊ ಕಳುಹಿಸಲು ಸಾಧ್ಯವಾಗುತ್ತಿಲ್ಲ. ವಾಹನ ಚಾಲನಾ ವೃತ್ತಿಯನ್ನೇ ನಂಬಿರುವ ಚಾಲಕರು ಹಾಗೂ ಟೊಮೆಟೊ ಸರಕನ್ನು ಲಾರಿಗೆ ತುಂಬಿಸುವ ಕೆಲಸವನ್ನೇ ನೆಚ್ಚಿಕೊಂಡಿರುವ ಹಮಾಲಿಗಳಿಗೆ ಸಂಪಾದನೆ ಖೋತಾ ಆಗಿದೆ.

ಅಂಕಿ ಅಂಶ.....
* 9 ಸಾವಿರ ಹೆಕ್ಟೇರ್‌ ಟೊಮೆಟೊ ಬೆಳೆ
* ₹ 350 ಕೋಟಿ ವಾರ್ಷಿಕ ವಹಿವಾಟು
* 200 ಲಾರಿ ಲೋಡ್‌ ಟೊಮೆಟೊ ರಫ್ತು
* 150 ಮಂದಿ ಮಂಡಿ ಮಾಲೀಕರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.