ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಾ ನ್ಯಾಯಾಲಯದ ತೀರ್ಪು ಅಂತಿಮ: ಕೆ.ಆರ್.ನಾಗರಾಜ್

Last Updated 30 ಜುಲೈ 2021, 12:53 IST
ಅಕ್ಷರ ಗಾತ್ರ

ಕೋಲಾರ: ‘ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳು ಶೀಘ್ರವಾಗಿ ವಿಲೇವಾರಿಯಾಗುತ್ತಿದ್ದು, ಈ ನ್ಯಾಯಾಲಯದಲ್ಲಿ ನೀಡುವ ತೀರ್ಪು ಅಂತಿಮ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್.ನಾಗರಾಜ್ ತಿಳಿಸಿದರು.

ಇಲ್ಲಿ ಶುಕ್ರವಾರ ನಡೆದ ಜನತಾ ನ್ಯಾಯಾಲಯದ ಪೂರ್ವಭಾವಿ ಸಂಧಾನ ಕಾರ್ಯಕ್ರಮದಲ್ಲಿ ಮಾತನಾಡಿ, ‘ಜನತಾ ನ್ಯಾಯಾಲಯ ನೀಡುವ ತೀರ್ಪನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವಿಲ್ಲ’ ಎಂದು ಹೇಳಿದರು.

‘ಆ.14ರಂದು ಮೆಗಾ ಲೋಕ ಅದಾಲತ್‌ ಹಮ್ಮಿಕೊಂಡಿದ್ದು, ಆ.13ರವರೆಗೂ ಪ್ರತಿನಿತ್ಯ ಪೂರ್ವಭಾವಿ ಸಮ ಸಂಧಾನ ಕಾರ್ಯಕ್ರಮ ನಡೆಸಲಾಗುತ್ತದೆ. ಜನತಾ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಮತ್ತು ವಕೀಲರು ಸಂಧಾನಕಾರರಾಗಿರುತ್ತಾರೆ. ಕಕ್ಷಿದಾರರ ನಡುವೆ ಮಾತುಕತೆ ನಡೆಸಿ ಅವರ ಮನವೊಲಿಸಿ ಯಾವುದೇ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಸಂದರ್ಭ ಸೃಷ್ಟಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘350ಕ್ಕೂ ಹೆಚ್ಚು ಪ್ರಕರಣಗಳನ್ನು ಪೂರ್ವಭಾವಿ ಸಮ ಸಂಧಾನದಲ್ಲಿ ತೀರ್ಮಾನ ಮಾಡಿ ಯಶಸ್ಸು ಕಾಣಲಾಗಿದೆ. ಕಕ್ಷಿದಾರರು ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನತೆ ಹಕ್ಕಿದೆ. ವಿವಾದಗಳು ಬೇಗನೆ ಇತ್ಯರ್ಥಗೊಂಡು ಹಕ್ಕು ಬೇಗ ಪಡೆದುಕೊಂಡರೆ ಸರ್ವರಿಗೂ ಸಮಬಾಳು ಎಂಬ ಪ್ರಜಾಪ್ರಭುತ್ವದ ಬುನಾದಿಯ ಉದ್ದೇಶ ಈಡೇರುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಪವನೇಶ್, ಜಿಲ್ಲಾ ನ್ಯಾಯಾಧೀಶ ಸಂತೋಷ್ ಗಜಾನನಭಟ್, ಮುಖ್ಯ ನ್ಯಾಯಿಕ ದಂಡಾಧಿಕಾರಿ ಅನಿತಾ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರಘುಪತಿಗೌಡ ಹಾಗೂ ವಕೀಲರು ಸೇರಿ ಪೂರ್ವ ಜನತಾ ನ್ಯಾಯಾಲಯದ ಸಂಧಾನ ನಡೆಸುತ್ತಿದ್ದಾರೆ’ ಎಂದು ವಿವರಿಸಿದರು.

8 ಸಾವಿರ ಪ್ರಕರಣ: ‘ಈವರೆಗೆ ಸುಮಾರು 8 ಸಾವಿರ ಪ್ರಕರಣ ಗುರುತಿಸಿದ್ದು, ಈ ಪೈಕಿ 1,700 ಪ್ರಕರಣಗಳು ಪೂರ್ವಭಾವಿ ಜನತಾ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದೆ. ಮುಖ್ಯವಾಗಿ ಚೆಕ್ ಅಮಾನ್ಯ ಪ್ರಕರಣ, ಕ್ರಿಮಿನಲ್, ವಿಭಾಗ ಪ್ರಕರಣಗಳು, ಮರಳು ಕಳ್ಳತನ, ಸಿವಿಲ್ ಹಾಗೂ ಮೋಟಾರು ಬೈಕ್ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಂಗಾಧರ ಚನ್ನಬಸಪ್ಪ ಹಡಪದ ವಿವರಿಸಿದರು.

‘ಕಕ್ಷಿದಾರರ ನಡುವಿನ ದ್ವೇಷ ಹೋಗಲಾಡಿಸಿ ಸಾಮರಸ್ಯದಿಂದ ಜೀವನ ನಡೆಸಲು ಈ ಅವಕಾಶದ ಸದುಪಯೋಗ ಪಡೆಯಬೇಕು’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ.ಶ್ರೀಧರ್ ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT