ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು | ಆಸ್ಪತ್ರೆ ತ್ಯಾಜ್ಯ: ಅವೈಜ್ಞಾನಿಕ ನಿರ್ವಹಣೆ

ಸಾಂಕ್ರಾಮಿಕ ರೋಗ ಹರಡುವ ಭೀತಿ, ಪೌರ ಕಾರ್ಮಿಕರಿಂದ ತ್ಯಾಜ್ಯ ವಿಲೇವಾರಿ ಆರೋಪ
ವಿ. ರಾಜಗೋಪಾಲ್
Published 27 ನವೆಂಬರ್ 2023, 7:00 IST
Last Updated 27 ನವೆಂಬರ್ 2023, 7:00 IST
ಅಕ್ಷರ ಗಾತ್ರ

ಮಾಲೂರು: ಇಲ್ಲಿನ ಕೆಲ ಆಸ್ಪತ್ರೆ, ನರ್ಸಿಂಗ್ ಹೋಂಗಳಲ್ಲಿನ ತ್ಯಾಜ್ಯಗಳ ಅವೈಜ್ಞಾನಿಕ ನಿರ್ವಹಣೆಯಿಂದಾಗಿ ಸೋಂಕು ಮತ್ತು ರೋಗಗಳ ಭೀತಿ ಉಂಟಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಅನಾರೋಗ್ಯದ ಕಾರಣ ಆಸ್ಪತ್ರೆ, ನರ್ಸಿಂಗ್ ಹೋಂ, ಕ್ಲಿನಿಕ್‌ಗಳಿಗೆ ಚಿಕಿತ್ಸೆ ಪಡೆಯಲು ತೆರಳುತ್ತೇವೆ. ಆದರೆ, ಚಿಕಿತ್ಸಾ ತಾಣಗಳೇ ರೋಗ ಹರಡುವ ಸ್ಥಳಗಳಾದರೆ ಜನರು ಹೋಗುವುದು ಎಲ್ಲಿಗೆ  ಎಂಬ ಪ್ರಶ್ನೆ ಸಾರ್ವಜನಿಕರದ್ದು.

ಮಾಲೂರು ಪಟ್ಟಣದಲ್ಲಿ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನಲ್ಲಿ 9 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದು, 6 ಖಾಸಗಿ ನರ್ಸಿಂಗ್‌ ಹೋಂಗಳಿವೆ. ಅಂತೆಯೇ ಪಟ್ಟಣದಲ್ಲಿ 20 ಕ್ಲಿನಿಕ್‌ಗಳು ಹಾಗೂ 11 ರಕ್ತ ಪರೀಕ್ಷಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಅದೇ ರೀತಿ ತಾಲ್ಲೂಕಿನಲ್ಲಿ 21 ಪಶು ವೈದ್ಯಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಕೆಲವು ಖಾಸಗಿ ನರ್ಸಿಂಗ್‌ ಹೋಂಗಳು ತಮ್ಮಲ್ಲಿನ ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ಇವು ಪೌರಕಾರ್ಮಿಕರಿಗೆ ಅಸ್ಪಸ್ವಲ್ಪ ಹಣ ನೀಡಿ ಅವರ ಮುಖಾಂತರ ವೈದ್ಯಕೀಯ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿವೆ ಎಂಬ ಆರೋಪ ಕೂಡಾ ಸಾರ್ವಜನಿಕ ವಲಯದಲ್ಲಿದೆ.

‌ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿಯನ್ನು ಕೋಲಾರ- ಚಿಂತಾಮಣಿ ಮುಖ್ಯ ರಸ್ತೆಯಲ್ಲಿರುವ ಮೀರಾ ಎನ್ವಾರ್ನಮೆಂಟ್‌ ಟೆಕ್ ಸಂಸ್ಥೆಗೆ ಟೆಂಡರ್ ನೀಡಲಾಗಿದೆ.  100 ಹಾಸಿಗೆ ಸಾಮರ್ಥ್ಯವಿರುವ ಆಸ್ಪತ್ರೆಯ ತ್ಯಾಜ್ಯ ವಿಲೇವಾರಿಗಾಗಿ ಸಂಸ್ಥೆಗೆ ಪ್ರತಿ ತಿಂಗಳು ₹ 15 ಸಾವಿರ ನೀಡಲಾಗುತ್ತಿದೆ. ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿ ಕೇಂದ್ರ ಸ್ಥಾನಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡಲು ಪ್ರತಿ ತಿಂಗಳು ₹7.5 ಸಾವಿರ ನೀಡಲಾಗುತ್ತಿದೆ.

ಮೀರಾ ಎನ್ವಾರ್ನಮೆಂಟ್‌ ಟೆಕ್ ಸಂಸ್ಥೆಯು  ಆಸ್ಪತ್ರೆ, ನರ್ಸಿಂಗ್ ಹೋಂ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನ ಬಿಟ್ಟು ದಿನ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ  ಮಾಡುತ್ತಿದೆ.  ಸರ್ಕಾರಿ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಂದ ನಿತ್ಯವೂ ಸುಮಾರು 200 ಕೆ.ಜಿ. ವೈದ್ಯಕೀಯ ತ್ಯಾಜ್ಯ ಹೊರಬರುತ್ತಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಿಂದ ನಿತ್ಯವೂ ಸುಮಾರು 100 ಕೆ.ಜಿ ವೈದ್ಯಕೀಯ ತ್ಯಾಜ್ಯ  ಬಿಟ್ಟು ದಿನ ಹೊರಬೀಳಲಿದೆ. ಮೀರಾ ಎನ್ವಾರ್ನಮೆಂಟ್‌ ಟೆಕ್ ಸಂಸ್ಥೆ ಪ್ರಕಾರ, ಪಟ್ಟಣದ ಕೆಲವು ಖಾಸಗಿ ಕ್ಲಿನಿಕ್‌ಗಳು ಹಾಗೂ ನರ್ಸಿಂಗ್‌ ಹೋಂಗಳು ಸಮರ್ಪಕವಾಗಿ ಹಣ ನೀಡುತ್ತಿಲ್ಲ. ಹಾಗಾಗಿ, ಈ ಆಸ್ಪತ್ರೆಗಳಿಂದ ವೈದ್ಯಕೀಯ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದನ್ನು ಕಡಿತಗೊಳಿಸಲಾಗಿದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಮಂಡಳಿಯು  ಜೀವ ವೈದ್ಯಕೀಯ (ಬಯೊಮೆಡಿಕಲ್‌) ತ್ಯಾಜ್ಯವನ್ನು ವಿಲೇವಾರಿ ಮಾಡಲು ವಿಶೇಷ ಗಮನ ವಹಿಸಿದೆ. ಈ ತ್ಯಾಜ್ಯವನ್ನು ವಿಲೇವಾರಿ ಮಾಡುವ ಮುನ್ನ ಒಂದು ಕಡೆ ಒಟ್ಟುಗೂಡಿಸಲಾಗುತ್ತದೆ.. ಇದಕ್ಕಾಗಿ ಪ್ರತ್ಯೇಕ ಸ್ಥಳಗಳನ್ನು ಮೀಸಲಿಟ್ಟಿದ್ದು, ಪ್ರತಿ ತ್ಯಾಜ್ಯಕ್ಕೂ ಡಬ್ಬ ಅಥವಾ ಚೀಲಗಳು ಪ್ರತ್ಯೇಕವಾಗಿ ಇರಿಸಲಾಗಿದೆ. ಇದಕ್ಕೆ ಕಲರ್ ಕೋಡಿಂಗ್ ಮಾಡಲಾಗಿದೆ. ಹಳದಿ ಬಣ್ಣದ ಬಕೆಟ್‌ನಲ್ಲಿ ಸೋಂಕಿತ ತ್ಯಾಜ್ಯ, ನೀಲಿ ಹಾಗೂ ಅರೆಪಾರರ್ದಕ ಬಿಳಿ ಡಬ್ಬಗಳಲ್ಲಿ ಪುನರ್ ಸಂಸ್ಕರಣೆಯಾಗುವಂಥ ತ್ಯಾಜ್ಯ, ಕೆಂಪು ಬಕೆಟ್‌ನಲ್ಲಿ ಮಾನವ ಅಂಗಾಂಗಗಳು ಮತ್ತು ಕಪ್ಪು ಬಕೆಟ್‌ನಲ್ಲಿ ಮುನ್ಸಿಪಲ್‌ ಕಸ ಸಂಗ್ರಹಕ್ಕೆ ಸಾಗಿಸುವ ತ್ಯಾಜ್ಯವನ್ನು ಶೇಖರಿಸಲಾಗಿದೆ. ತ್ಯಾಜ್ಯ ಸಂಗ್ರಹಿಸಿರುವ ಪ್ರತಿ ಬಕೆಟ್‌ನ ಮುಚ್ಚಳದ ಮೇಲೆ ವಿವರಗಳನ್ನು ಬರೆದಿರುವ ಚೀಟಿಯನ್ನು ಅಂಟಿಸಲಾಗಿದೆ. ಅನಧಿಕೃತ ವ್ಯಕ್ತಿಗಳು ತ್ಯಾಜ್ಯದ ಹತ್ತಿರ ಸುಳಿಯದಂತೆ ಕ್ರಮ ಕೈಗೊಳ್ಳಲಾಗಿದೆ. ಶೇಖರಣಾ ಕೊಠಡಿಗಳಲ್ಲಿ ಕೆಲಸ ಮಾಡುವವರು ಸೂಕ್ತ ಉಡುಪು, ಗ್ಲೋಸ್, ಬೂಟು ಇತ್ಯಾದಿಗಳನ್ನು ಧರಿಸಲು ಸೂಚಿಸಲಾಗಿದೆ.

ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಒಂದು ವೇಳೆ ಯಾವುದೇ ಕಾಯಿಲೆ/ಗಾಯವಾದರೆ ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಆಸ್ಪತ್ರೆಯ ತ್ಯಾಜ್ಯ ವಿಲೇವಾರಿ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ವೈಧ್ಯಾಧಿಕಾರಿ ಡಾ.ವಸಂತ್ ಮಾಹಿತಿ ನೀಡಿದರು.

ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ 21 ಪಶು ಆಸ್ಪತ್ರೆಗಳು ಇದ್ದು, ಪ್ರತಿ ಆಸ್ಪತ್ರೆಯಲ್ಲಿ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡಲು ಡೀಪ್ ಪಿಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಈ ಪಿಟ್ ಗಳಲ್ಲಿ ವೈದ್ಯಕೀಯ ತ್ಯಾಜ್ಯಗಳನ್ನು ಹಾಕಲಾಗುವುದು. ಈ ವ್ಯವಸ್ಥೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲಾ ಆಸ್ಪತ್ರೆಗಳಲ್ಲಿ ಮಾಡಲಾಗಿದೆ. ಮಾಮೂಲಿ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸ ಎಂದು ವಿಂಗಡಣೆ ಮಾಡಲಾಗಿದೆ. ಇಲಾಖೆ ವತಿಯಿಂದ ಮುಂದಿನ ದಿನಗಳಲ್ಲಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡಲು ಏಜೆನ್ಸಿಗೆ ನೀಡಲು ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂಬುದು ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.

ಡಾ. ವಸಂತ್
ಡಾ. ವಸಂತ್
ಅಶ್ವತ್ಥ್‌
ಅಶ್ವತ್ಥ್‌
ಮುನಿರಾಜು
ಮುನಿರಾಜು

ತ್ಯಾಜ್ಯ ವಿಲೇವಾರಿಗೆ ಹಣ ಪಾವತಿ

ವೈದ್ಯಕೀಯ ತ್ಯಾಜ್ಯ ವಿಲೇವಾರಿಯನ್ನು ಮೀರಾ ಬೈಯೊಟೆಕ್‌ ಸಂಸ್ಥೆಗೆ ಟೆಂಡರ್ ನೀಡಲಾಗಿದ್ದು, ಪಟ್ಟಣದ 100 ಹಾಸಿಗೆ ಆಸ್ಪತ್ರೆಗೆ ಪ್ರತಿ ತಿಂಗಳು ₹ 15 ಸಾವಿರ ಹಾಗೂ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಿಂಗಳಿಗೆ ₹ 7.5 ಸಾವಿರ ನೀಡಲಾಗುತ್ತಿದೆ.

–ಡಾ.ವಸಂತ್, ಆಡಳಿತಾಧಿಕಾರಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ

ಎಚ್ಚರಿಕೆ ನೀಡಲಾಗಿದೆ

ಪಟ್ಟಣದ ಕೆಲವು ಖಾಸಗಿ ಆಸ್ಪತ್ರೆಗಳ ವೈದ್ಯಕಿಯ ತ್ಯಾಜ್ಯಗಳನ್ನು ಪುರಸಭೆಯ ಕಸದ ಆಟೋಗಳಿಗೆ ಹಾಕುತ್ತಿರುವುದು ಕಂಡು ಬಂದಿತ್ತು. ನಂತರ ಪೌರ ಕಾರ್ಮಿಕರಿಗೆ ಎಚ್ಚರಿಕೆ ನಿಡಲಾಯಿತು. ಆ ನಂತರ ವೈದ್ಯಕಿಯ ತ್ಯಾಜ್ಯ ನಮ್ಮ ಕಸ ವಿಲೇವಾರಿ ಘಟಕದಲ್ಲಿ ಕಂಡು ಬಂದಿಲ್ಲ

–ಶಾಲಿನಿ, ಪರಿಸರ ಎಂಜನಿಯರ್, ಪುರಸಭೆ

ಕೆರೆ ನೀರು ಕಲುಷಿತ

ಆಸ್ಪತ್ರೆಗಳಲ್ಲಿ ಬಳಸಿದ ಸಿರಂಜುಗಳು ಮತ್ತು ಬ್ಯಾಂಡೇಜ್ ಬಟ್ಟೆಗಳು ಸೇರಿದಂತೆ ತ್ಯಾಜ್ಯಗಳನ್ನು ಪಟ್ಟಣದ ಹೊರ ವಲಯದಲ್ಲಿರುವ ನೀರು ಹರಿಯುವ ಮುಖ್ಯ ಕಾಲುವೆಗಳಲ್ಲಿ ಸುರಿದು ಹೋಗಿರುತ್ತಾರೆ. ಮಳೆಯ ನೀರು ಕೆರೆಗೆ ಹರಿಯುವುದರಿಂದ ತ್ಯಾಜ್ಯಗಳು ಕೆರೆಗೆ ಸೇರುತ್ತವೆ. ಇದರಿಂದ ಕೆರೆ ನೀರು ಕಲುಷಿತವಾಗುತ್ತಿದೆ.

–ಮುನಿರಾಜು, ನಿವಾಸಿ, ಮಾಲೂರು

ಕಪ್ಪು ಕವರ್‌ಗಳಲ್ಲಿ ತ್ಯಾಜ್ಯ

ತಾಲ್ಲೂಕಿನ ಹಾರೋಹಳ್ಳಿ ಗ್ರಾಮದ ಹೊರವಲಯದಲ್ಲಿ ಪುರಸಭೆಯ ಗಾರ್ಬೇಜ್ ಹಾಕುವ ಸ್ಥಳದಲ್ಲಿ ಆಸ್ಪತ್ರೆಯಲ್ಲಿ ಬಳಸಿರುವ ಸಿರಿಂಜ್‌ಗಳು ಹಾಗೂ ಗ್ಲೂಕೋಸ್ ಡಬ್ಬಗಳು ಸೇರಿದಂತೆ ತ್ಯಾಜ್ಯಗಳನ್ನು ಕಪ್ಪು ಕವರ್‌ಗಳಲ್ಲಿ ಕಟ್ಟಿ ಪುರಸಭೆಯ ಕಸ ತುಂಬುವ ಆಟೋಗಳಲ್ಲಿ ತಂದು ಗಾರ್ಬೇಜ್ ರಾಶಿಯಲ್ಲಿ ಹಾಕಲಾಗುತ್ತಿದೆ. ನಾಯಿಗಳು ತ್ಯಾಜ್ಯ ಕವರ್‌ಗಳನ್ನು ಮನೆಗಳ ಬಳಿ ಹಾಕುತ್ತಿವೆ.

–ಅಶ್ವತ್ಥ್, ನಿವಾಸಿ

ನೀಡದ ಹಣ, ತ್ಯಾಜ್ಯ ವಿಲೇವಾರಿ ಸ್ಥಗಿತ

ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹತೇಕ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯಕೀಯ ತ್ಯಾಜ್ಯವನ್ನು ಮೀರಾ ಎನ್ವಾರ್ನಮೆಂಟ್‌ ಟೆಕ್ ಸಂಸ್ಥೆಯಿಂದ ವಿಲೇವಾರಿ ಮಾಡಲಾಗುತ್ತಿದೆ. ಪಟ್ಟಣದ ಕೆಲವು ಖಾಸಗಿ ನರಸಿಂಗ್ ಹೋಂಗಳು ಮತ್ತು ಕ್ಲಿನಿಕ್‌ಗಳು ಸಮರ್ಪಕವಾಗಿ ಹಣ ನೀಡದ ಕಾರಣ ಈ ಆಸ್ಪತ್ರೆಗಳಿಂದ ವೈದ್ಯಕೀಯ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದನ್ನು ಕಡಿತಗೊಳಿಸಲಾಗಿದೆ.

– ಹನುಮಂತಪ್ಪ, ಮೀರಾ ಎನ್ವಾರ್ನಮೆಂಟ್‌ ಟೆಕ್ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT