ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಉತ್ಪನ್ನ ಸೇವನೆ ಸ್ವಯಂಪ್ರೇರಿತ ಅಪರಾಧ

ಕೋಟ್ಪಾ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ ಅಭಿಪ್ರಾಯ
Last Updated 27 ಜುಲೈ 2019, 8:50 IST
ಅಕ್ಷರ ಗಾತ್ರ

ಕೋಲಾರ: ‘ತಂಬಾಕು ಉತ್ಪನ್ನಗಳ ಸೇವನೆಯು ಸ್ವಯಂಪ್ರೇರಿತ ಅಪರಾಧ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಪುಷ್ಪಲತಾ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ (ಕೋಟ್ಪಾ) ಅನುಷ್ಠಾನ ಸಂಬಂಧ ಇಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿ, ‘ತಂಬಾಕು ಉತ್ಪನ್ನ ಸೇವಿಸುವವರ ಆರೋಗ್ಯ ಹಾಳಾಗುವುದರ ಜತೆಗೆ ಅಕ್ಕಪಕ್ಕದವರ ಆರೋಗ್ಯವೂ ಕೆಡುತ್ತದೆ’ ಎಂದರು.

‘ತಂಬಾಕು ಬೆಳೆಯುವ ಮತ್ತು ತಂಬಾಕು ಉತ್ಪನ್ನಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. ತಂಬಾಕು ಉತ್ಪನ್ನ ಸೇವನೆಯಲ್ಲಿ ತೊಡಗಿರುವವರನ್ನು ಅದರಿಂದ ಮುಕ್ತಗೊಳಿಸಬೇಕು. ತಂಬಾಕು ಉತ್ಪನ್ನಗಳ ಸೇವನೆಯಲ್ಲಿ ಹೊಸಬರು ಸೇರ್ಪಡೆಯಾಗದಂತೆ ಅರಿವು ಮೂಡಿಸಬೇಕು’ ಎಂದು ಕಿವಿಮಾತು ಹೇಳಿದರು.

‘ತಂಬಾಕು ಉತ್ಪನ್ನಗಳ ಸೇವನೆಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗುವ ವ್ಯಕ್ತಿಗಳ ಆರೋಗ್ಯ ಸುಧಾರಣೆಗಾಗಿ ಸರ್ಕಾರ ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತಿದೆ. ಜನ ದುಶ್ಚಟಗಳಿಂದ ದೂರ ಉಳಿದಿದ್ದರೆ ಈ ಹಣ ಸಮಾಜದ ಅಭಿವೃದ್ಧಿಗೆ ಬಳಕೆಯಾಗಿ ಸಾಕಷ್ಟು ಉಪಯೋಗವಾಗುತ್ತಿತ್ತು. ತಂಬಾಕು ಉತ್ಪನ್ನ ಸೇವಿಸುವವರನ್ನು ಜಾಗೃತಗೊಳಿಸಲು ಕಂಪನಿಯವರೇ ಉತ್ಪನ್ನಗಳ ಮೇಲೆ ಎಚ್ಚರಿಕೆ ಸಂದೇಶ ಹಾಕಿರುತ್ತಾರೆ. ಆದರೂ ತಂಬಾಕು ಉತ್ಪನ್ನ ಸೇವಿಸುವವರ ಸಂಖ್ಯೆ ಕಡಿಮೆಯಾಗಿಲ್ಲ’ ಎಂದು ಕಳವಳ ವ್ಯಕ್ತಪಡಸಿದರು.

‘ಧೂಮಪಾನಿಗಳು ಬೇರೆಯವರ ಆರೋಗ್ಯದ ಬಗ್ಗೆ ಆಲೋಚಿಸಬೇಕು. ತಂಬಾಕು ಉತ್ಪನ್ನ ಸೇವನೆಯ ದುಷ್ಪರಿಣಾಮ ಕುರಿತು ಶಾಲಾ ಕಾಲೇಜು ಮಕ್ಕಳಿಗೆ ಅರಿವು ಮೂಡಿಸಬೇಕು. ಇದರಿಂದ ಮಕ್ಕಳು ಮನೆಯ ಸದಸ್ಯರನ್ನು ಜಾಗೃತಗೊಳಿಸುತ್ತಾರೆ. ಜತೆಗೆ ಅವರು ಭವಿಷ್ಯದಲ್ಲಿ ಈ ದುಶ್ಚಟಕ್ಕೆ ಬಲಿಯಾಗುವುದಿಲ್ಲ’ ಎಂದು ಸಲಹೆ ನೀಡಿದರು.

ಪ್ರಕರಣ ದಾಖಲಿಸಿ: ‘ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವವರು ನಿಯಮ ಪಾಲನೆ ಮಾಡಬೇಕು ಮತ್ತು ಆ ಉತ್ಪನ್ನಗಳಿಂದ ಆರೋಗ್ಯ ಹಾಳಾಗುತ್ತದೆ ಎಂಬ ಸಂದೇಶವುಳ್ಳ ಸೂಚನಾ ಫಲಕ ಅಳವಡಿಸಬೇಕು. ಶಾಲಾ ಕಾಲೇಜುಗಳ ಬಳಿ ತಂಬಾಕು ಉತ್ಪನ್ನ ಮಾರುವವರ ವಿರುದ್ಧ ಹಾಗೂ ಎಚ್ಚರಿಕೆಯ ಸಂದೇಶ ಫಲಕ ಅಳವಡಿಸದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಶಿಸ್ತುಕ್ರಮ ಜರುಗಿಸಬೇಕು’ ಎಂದು ಸೂಚಿಸಿದರು.

‘ತಂಬಾಕು ಉತ್ಪನ್ನಗಳ ಸೇವನೆಯಿಂದ 60 ರೀತಿಯ ಮಾರಕ ಕಾಯಿಲೆಗಳು ಮತ್ತು ಭಯಾನಕ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಂಭವವಿದೆ. ವಿಶ್ವದಲ್ಲಿ ಅತಿ ಹೆಚ್ಚು ಜನ ಅಕಾಲಿಕವಾಗಿ ಮೃತಪಡುತ್ತಿರುವುದಕ್ಕೆ ತಂಬಾಕು ಉತ್ಪನ್ನಗಳ ಸೇವನೆ ಪ್ರಮುಖ ಕಾರಣ. 18 ವರ್ಷದಿಂದ 25 ವರ್ಷದೊಳಗಿನ ಯುವಕರು ತಂಬಾಕು ಉತ್ಪನ್ನಗಳಿಗೆ ಆಕರ್ಷಿತರಾಗಿ ತಪ್ಪು ದಾರಿ ಹಿಡಿಯುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ವಿಷಾದಿಸದರು.

ತಂಬಾಕು ಮುಕ್ತ ಶಾಲೆ: ‘ಈ ವರ್ಷ ಜಿಲ್ಲೆಯ 100 ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳಾಗಿ ಮಾಡುವ ಗುರಿಯಿದೆ. ಈ ನಿಟ್ಟಿನಲ್ಲಿ ಈಗಾಗಲೇ 35 ಶಾಲೆಗಳಲ್ಲಿ ಚಟುವಟಿಕೆ ನಡೆಸಲಾಗಿದೆ. ಶಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ನಿರ್ಬಂಧಿಸಲಾಗಿದೆ. ತಂಬಾಕು ಮುಕ್ತ ಶಾಲೆಗಳಿಗೆ ಪ್ರಮಾಣಪತ್ರ ನೀಡಲಾಗುವುದು’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ ವಿವರಿಸಿದರು.

‘ಕೊಟ್ಪಾ ಕಾಯ್ದೆ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಸೇವನೆ ಮಾಡುವವರಿಗೆ ದಂಡ ವಿಧಿಸಲಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ಆರೋಗ್ಯ ಇಲಾಖೆಯಿಂದ 66 ಪ್ರಕರಣ ದಾಖಲಿಸಿ ₹ 5,540 ಹಾಗೂ ಪೊಲೀಸ್ ಇಲಾಖೆಯಿಂದ 913 ಪ್ರಕರಣ ದಾಖಲಿಸಿ ₹ 57,810 ದಂಡ ವಿಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ತಂಬಾಕು ಉತ್ಪನ್ನ ಸೇವನೆಗೆ ಒಳಗಾಗಿರುವ 643 ರೋಗಿಗಳಿಗೆ ಚಿಕಿತ್ಸೆ ನೀಡಿ ಅರಿವು ಮೂಡಿಸಲಾಗಿದೆ. ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಬಗ್ಗೆ ಜನರನ್ನು ಜಾಗೃತಗೊಳಿಸಲು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿಶೇಷ ದಳ ರಚಿಸಲಾಗಿದೆ’ ಎಂದು ತಿಳಿಸಿದರು.

ಆರೋಗ್ಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಅಂಕಿ ಅಂಶ.....
* 937 ಪ್ರಕರಣ ದಾಖಲು
* ₹ 63,350 ದಂಡ ಸಂಗ್ರಹ
* 643 ರೋಗಿಗಳಿಗೆ ಚಿಕಿತ್ಸೆ
* 60 ರೀತಿಯ ಮಾರಕ ಕಾಯಿಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT