ಮಂಗಳವಾರ, ಏಪ್ರಿಲ್ 20, 2021
29 °C
ಕೆಂಡದಂಥ ಹೂ ಮುಡಿಗೇರಿಸಿಕೊಂಡು ಕಂಗೊಳಿಸುತ್ತಿವೆ ಮರಗಳು

ಶ್ರೀನಿವಾಸಪುರ: ಕಾಡು ಮುತ್ತುವ ಮುತ್ತುಗ...

ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ತಾಲ್ಲೂಕಿನ ಕಾಡು ಮೇಡಲ್ಲಿ ಬೆಳೆದಿರುವ ಮುತ್ತುಗದ ಮರಗಳು ಕೆಂಡದಂಥ ಹೂವನ್ನು ಮುಡಿಗೇರಿಸಿಕೊಂಡು ಕಂಗೊಳಿಸುತ್ತಿವೆ. ಈ ಅಪರೂಪದ ದೃಶ್ಯ ಪರಿಸರ ಪ್ರೇಮಿಗಳ ಮನಸ್ಸಿಗೆ ಮುದ ನೀಡಿದೆ.

ಮುತ್ತುಗ ನೈಸರ್ಗಿಕವಾಗಿ ಬೆಳೆಯುವ ಮರ. ತಾಲ್ಲೂಕಿನ ಕಾಡು, ಕಟವೆಗಳಲ್ಲಿ, ಮಾವಿನ ತೋಟಗಳ ಬೇಲಿಗಳಲ್ಲಿ ಹಾಗೂ ರಸ್ತೆಬದಿಗಳಲ್ಲಿ ಈ ಮರಗಳು ಬೆಳೆಯುತ್ತವೆ. ಹಿಂದೆ ಎಲ್ಲೆಲ್ಲೂ ಕಂಡುಬರುತ್ತಿದ್ದ ಈ ಮರಗಳು ಇಂದು ಅಲ್ಲಲ್ಲಿ ಮಾತ್ರ ಕಂಡುಬರುತ್ತಿವೆ.

ಕೆಂಬಣ್ಣದಿಂದ ಕಂಗೊಳಿಸುವ ಮುತ್ತುಗದ ಹೂ ದೂರದಿಂದಲೇ ತನ್ನ ಇರುವನ್ನು ಸಾರುತ್ತದೆ. ‘ಕಾಡಿನ ಹಕ್ಕಿಗಳು ಮುತ್ತುಗದ ಹೂವನ್ನು ಕೆಂಡವೆಂದು ಬಗೆದು ಚಳಿಗೆ ಮೈ ಕಾಯಿಸಿಕೊಳ್ಳಲು ಮರದ ಬಳಿ ಹಾರುತ್ತವೆ’ ಎಂದು ಕಾಳಿದಾಸ ತನ್ನ ಕೃತಿಯೊಂದರಲ್ಲಿ ಬರೆದಿರುವುದಾಗಿ ಸಾಹಿತಿ ಸ. ರಘುನಾಥ ಹೇಳುತ್ತಾರೆ.

ವಿವಿಧ ಜಾತಿಯ ಹಕ್ಕಿಗಳು, ದುಂಬಿ, ಜೇನ್ನೊಣಗಳು ಹೂವಿನ ಮೇಲೆ ಕುಳಿತು ಮಧು ಹೀರುವ ಸುಂದರ ದೃಶ್ಯವನ್ನು ನೋಡಿಯೇ ಸವಿಯಬೇಕು. ಈ ಬಾರಿ ಗಿಳಿ, ಕೋಗಿಲೆ, ಗೊರವಂಕ ಹಕ್ಕಿಗಳ ಜತೆಗೆ ಹಲವು ಹಕ್ಕಿಗಳು ಕಾಣಿಸಿಕೊಂಡಿವೆ. ಅವು ಬೇರೆ ಕಡೆಯಿಂದ ವಲಸೆ ಬಂದಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.

ಮುತ್ತುಗ ಒಂದು ಬಹುಪಯೋಗಿ ಮರ. ಜತೆಗೆ ಔಷಧೀಯ ಸಸ್ಯವೂ ಹೌದು. ಗ್ರಾಮೀಣ ಪ್ರದೇಶದ ಜನ ಮುತ್ತುಗದ ಎಲೆಯನ್ನು ಬಿಡಿಸಿ ತಂದು, ಬಿಡುವಿನ ವೇಳೆಯಲ್ಲಿ ಊಟದ ಎಲೆ ಹೊಲೆಯುತ್ತಾರೆ. ಮನೆಗೆ ಬೇಕಾದಷ್ಟನ್ನು ಉಳಿಸಿಕೊಂಡು ಉಳಿದ ಎಲೆಯನ್ನು ಮಾರಾಟ ಮಾಡಿ ನಾಲ್ಕು ಕಾಸು ಸಂಪಾದಿಸುತ್ತಾರೆ.

ಕೊಂಬೆಯ ತೊಗಟೆ ನಾರಾಗಿರುವುದರಿಂದ ರೈತರು ತೊಗಟೆಯನ್ನು ತೆಗೆದು ನೇಗಿಲು ಕಟ್ಟಲು ಅಗತ್ಯವಾದ ಹಗ್ಗ ಹೆಣೆಯುತ್ತಾರೆ. ಅದು ದೀರ್ಘಕಾಲ ಬಾಳಿಕೆ ಬರುತ್ತದೆ ಎಂಬುದು ಅವರ ಅನುಭವದ ಮಾತು. ಇದರ ಬೀಜವನ್ನು ಸಂಗ್ರಹಿಸಿ ನಾಯಿ ಹಾಗೂ ಜಾನುವಾರುಗಳಿಗೆ ಬರುವ ಅಜೀರ್ಣ ಮತ್ತಿತರ ಕೆಲವು ರೋಗಗಳಿಗೆ ಔಷಧಿಯಾಗಿ ಬಳಸುವುದುಂಟು.

ಇಷ್ಟು ಮಾತ್ರವಲ್ಲದೆ ಮುತ್ತುಗ ದೈವಿ ವೃಕ್ಷವೂ ಹೌದು. ಕೆಲವು ಸಮುದಾಯದ ಜನರು ಮದುವೆ ಸಂದರ್ಭದಲ್ಲಿ ಮುತ್ತುಗದ ಕೊಂಬೆಯನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ. ಮುತ್ತುಗದ ಕೊಂಬೆ ಇಲ್ಲದೆ ಮದುವೆ ಶಾಸ್ತ್ರ ಮುಗಿಸುವಂತಿಲ್ಲ. ಹಾಗಾಗಿ ಅದನ್ನು ಪೂಜಿಸುವ ಸಂಪ್ರದಾಯ ಹೊಂದಿರುವ ಜನರು ಮದುವೆ ಸಂದರ್ಭದಲ್ಲಿ ಮುತ್ತುಗದ ಮರವನ್ನು ಹುಡುಕಿಕೊಂಡು ಹೋಗುವುದು ಸರ್ವೇ ಸಾಮಾನ್ಯ.

ಕೆಲವು ಕುಟುಂಬಗಳು ಈ ಮರವನ್ನು ಗೋತ್ರವನ್ನಾಗಿ ಹೊಂದಿವೆ. ಅಂಥ ಕುಟುಂಬದ ಸದಸ್ಯರು ಈ ಮರವನ್ನು ಕಡಿಯುವುದಿಲ್ಲ. ಹಾಗೂ ಅದರ ಉತ್ಪನ್ನವನ್ನು ಬಳಸುವುದಿಲ್ಲ. ಆದರೆ, ಬದಲಾದ ಸಂದರ್ಭದಲ್ಲಿ ಇತರರು ಎಸಗಿದ ದೌರ್ಜನ್ಯದಿಂದಾಗಿ ಮುತ್ತುಗದ ಮರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. ಉರುವಲಿಗಾಗಿ ಮತ್ತು ಇದ್ದಿಲು ತಯಾ ರಿಕೆಗಾಗಿ ಮರಗಳಿಗೆ ಕೊಡಲಿ ಬೀಸಿದ ಪರಿಣಾಮವಾಗಿ ಅವು ಅಳಿವಿನ ಹಾದಿಹಿಡಿದವು. ಆದರೂ ತಾಲ್ಲೂಕಿ ನಾದ್ಯಂತ ಅಲ್ಲಲ್ಲಿ ಸರ್ಕಾರಿ ಭೂಮಿಯಲ್ಲಿ ಕಂಡುಬರುತ್ತಿವೆ. ಹೂ ಬಿಡುವ ಕಾಲದಲ್ಲಿ ಆಕರ್ಷಕ ಹೂಗಳ ಪರಿಣಾಮವಾಗಿ ತಾವೇ ತಾವಾಗಿ ಕಾಣಿಸಿಕೊಳ್ಳುತ್ತವೆ. ಈಗ ನಿಸರ್ಗದ ಮಡಿಲಲ್ಲಿ ಸುತ್ತಾಡುವ ವರಿಗೆ ಮುತ್ತುಗದ ಹೂವಿನ ದರ್ಶನವಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.