ಸೋಮವಾರ, ಜುಲೈ 4, 2022
23 °C
ಯುಗಾದಿ ಹೊಸ್ತಿಲಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ

ಕೋಲಾರ: ಹಾಲು ಖರೀದಿ ದರ ಹೆಚ್ಚಳ, ಇಂದಿನಿಂದ ಜಾರಿ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

ಕೋಲಾರ: ಹೈನುಗಾರಿಕೆಯೇ ಜೀವನಾಡಿಯಾಗಿರುವ ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ಕೋಚಿಮುಲ್‌) ಯುಗಾದಿ ಹಬ್ಬಕ್ಕೆ ಸಿಹಿ ಸುದ್ದಿ ನೀಡಿದ್ದು, ಹಾಲು ಖರೀದಿ ದರವನ್ನು ಲೀಟರ್‌ಗೆ ₹ 3 ಹೆಚ್ಚಿಸಿದೆ.

ಸದ್ಯ ಹಾಲು ಖರೀದಿ ದರ ಲೀಟರ್‌ಗೆ ₹ 24 ಇದೆ. ದರ ಹೆಚ್ಚಳದ ನಂತರ ಪರಿಷ್ಕೃತ ದರ ಲೀಟರ್‌ಗೆ ₹ 27ಕ್ಕೆ ಏರಿಕೆಯಾಗಿದೆ. ಹೊಸ ದರ ಶುಕ್ರವಾರದಿಂದ (ಏ.1) ಜಾರಿಗೆ ಬರಲಿದೆ. ಇದರ ಜತೆಗೆ ಪ್ರೋತ್ಸಾಹಧನವಾಗಿ ಸರ್ಕಾರ ಲೀಟರ್‌ಗೆ ₹ 5 ಕೊಡುತ್ತದೆ.

ಕೋವಿಡ್‌ ಮತ್ತು ಲಾಕ್‌ಡೌನ್‌ ಕಾರಣಕ್ಕೆ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟ ಪ್ರಮಾಣ ಕಳೆದ ವರ್ಷ ಗಣನೀಯವಾಗಿ ಕುಸಿದಿತ್ತು. ಲಾಕ್‌ಡೌನ್‌ನಿಂದ ಸರಕು ಸಾಗಣೆ ಸೇವೆಯಲ್ಲಿ ವ್ಯತ್ಯಯವಾಗಿ ಹೊರ ರಾಜ್ಯ ಮತ್ತು ಜಿಲ್ಲೆಗಳಿಗೆ ಹಾಲು ಪೂರೈಕೆ ಸ್ಥಗಿತಗೊಂಡಿತ್ತು.

ಜಾಗತಿಕವಾಗಿ ಹಾಲಿನ ಪುಡಿ, ಬೆಣ್ಣೆ ಬೆಲೆಯು ದಾಖಲೆ ಪ್ರಮಾಣದಲ್ಲಿ ಕುಸಿದು ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲವಾಗಿತ್ತು. ಹಾಲಿನ ಪುಡಿ ಮತ್ತು ಬೆಣ್ಣೆಯು ಗೋದಾಮುಗಳಲ್ಲೇ ಉಳಿದು ಒಕ್ಕೂಟಕ್ಕೆ ನಷ್ಟದ ಭೀತಿ ಎದುರಾಗಿತ್ತು. ನಷ್ಟದಿಂದ ಪಾರಾಗಲು ಕೋಚಿಮುಲ್‌ ಆಡಳಿತ ಮಂಡಳಿಯು ಅನಿವಾರ್ಯವಾಗಿ 2021ರ ಜುಲೈನಲ್ಲಿ ಹಾಲು ಉತ್ಪಾದಕರ ಮೇಲೆ ದರ ಇಳಿಕೆಯ ಅಸ್ತ್ರ ಪ್ರಯೋಗಿಸಿತ್ತು.

ಬೇಡಿಕೆಗೆ ಸ್ಪಂದನೆ: ಲಾಕ್‌ಡೌನ್‌ ಸಡಿಲಿಕೆ ಬಳಿಕ ಕೊರೊನಾ ಆತಂಕ ದೂರವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಚೇತರಿಸಿಕೊಂಡಿದೆ. ಹೀಗಾಗಿ ಹಾಲು ಖರೀದಿ ದರ ಹೆಚ್ಚಿಸಬೇಕೆಂಬ ಕೂಗು ರೈತರಿಂದ ಬಲವಾಗಿ ಕೇಳಿಬಂದಿತ್ತು. ಮತ್ತೊಂದೆಡೆ ಅವಳಿ ಜಿಲ್ಲೆಯಲ್ಲಿ ರೈತರು ಹಾಗೂ ರೈತಪರ ಸಂಘಟನೆಗಳ ಸದಸ್ಯರು ಹಾಲು ಖರೀದಿ ದರ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರು.

ಇದೀಗ ರೈತರ ಬೇಡಿಕೆಗೆ ಸ್ಪಂದಿಸಿರುವ ಒಕ್ಕೂಟವು ಹಾಲು ಖರೀದಿ ದರ ಹೆಚ್ಚಳ ಮಾಡಿದೆ. ಸಂಕಷ್ಟದಲ್ಲಿರುವ ಹೈನೋದ್ಯಮಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಕೋಚಿಮುಲ್‌ ಆಡಳಿತ ಮಂಡಳಿಯು ಈ ನಿರ್ಧಾರ ಕೈಗೊಂಡಿದೆ.

ಸರ್ಕಾರಕ್ಕೆ ಮನವಿ: ‘ಹಾಲು ಉತ್ಪಾದನಾ ವೆಚ್ಚ ಹೆಚ್ಚಳ, ಹಾಲು ಉತ್ಪಾದಕರು ಮತ್ತು ಸಂಘಗಳ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಉತ್ತಮಪಡಿಸುವ ಬಗ್ಗೆ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಿ ಹಾಲು ಖರೀದಿ ದರ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಯಿತು’ ಎಂದು ಮಾಲೂರು ಶಾಸಕ ಹಾಗೂ ಕೋಚಿಮುಲ್‌ ಅಧ್ಯಕ್ಷರಾದ ಕೆ.ವೈ.ನಂಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಾಲು ಮಾರಾಟ ದರ ಹೆಚ್ಚಿಸುವ ಬಗ್ಗೆ ಹಾಲು ಉತ್ಪಾದಕರ ಪರವಾಗಿ ಗಮನ ಹರಿಸಿದ್ದೇವೆ. ಈ ವಿಚಾರವಾಗಿ ವಿಧಾನಮಂಡಲ ಅಧಿವೇಶನದಲ್ಲಿ ಪ್ರಶ್ನೆ ಮಾಡಿದ್ದೇನೆ. ಇತರೆ ರಾಜ್ಯಗಳಲ್ಲಿನ ಹಾಲು ಮಾರಾಟ ದರಕ್ಕೆ ಮತ್ತು ರಾಜ್ಯದ ನಂದಿನಿ ಹಾಲಿನ ಮಾರಾಟ ದರಕ್ಕೆ ಲೀಟರ್‌ಗೆ ₹ 8ರಿಂದ ₹ 10 ವ್ಯತ್ಯಾಸವಿದ್ದು, ಇದನ್ನು ಸರಿದೂಗಿಸಲು ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಅಧಿವೇಶನದಲ್ಲಿ ಮನವಿ ಮಾಡಿದ್ದೇನೆ’ ಎಂದು ಹೇಳಿದರು.

‘ಪ್ರಸ್ತುತ ಹಾಲು ಉತ್ಪಾದನಾ ವೆಚ್ಚ ಹೆಚ್ಚಾಗಿ ಉತ್ಪಾದಕರಿಗೆ ಲಾಭಾಂಶವಿಲ್ಲದೆ ಹೈನೋದ್ಯಮದ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಿರುವುದರಿಂದ ಸರ್ಕಾರ ರೈತಾಪಿ ವರ್ಗದ ಹಿತ ಕಾಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಹಾಲು ಖರೀದಿ ದರ ಹೆಚ್ಚಿಸಿ ಪರಿಷ್ಕರಣೆ ಮಾಡಿದರೆ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಮತ್ತೊಮ್ಮೆ ದರ ಪರಿಷ್ಕರಿಸುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು