ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಪೃಶ್ಯತೆ ಸಮಾಜಕ್ಕೆ ಅಂಟಿರುವ ಕಳಂಕ

ದಲಿತರ ಮನೆಯಲ್ಲಿ ಪಂಕ್ತಿ ಭೋಜನ ಸವಿದ ಶಾಸಕ ಕೆ.ಶ್ರೀನಿವಾಸಗೌಡ
Last Updated 10 ಮಾರ್ಚ್ 2020, 11:54 IST
ಅಕ್ಷರ ಗಾತ್ರ

ಕೋಲಾರ: ‘ಅಸ್ಪೃಶ್ಯತೆ ಸಮಾಜಕ್ಕೆ ಅಂಟಿದ ಕಳಂಕವಾಗಿದ್ದು, ಇದನ್ನು ಬೇರು ಸಮೇತ ಕಿತ್ತೊಗೆಯುವ ಕೆಲಸ ಗ್ರಾಮಮಟ್ಟದಿಂದ ಅಗಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ತಾಲ್ಲೂಕಿನ ಮತ್ತಿಕುಂಟೆಯಲ್ಲಿ ದಲಿತ ಮುನಿವೆಂಕಟಪ್ಪ ಮತ್ತು ಹನುಮಂತಪ್ಪ ಅವರ ನಿವಾಸದಲ್ಲಿ ಇತ್ತೀಚಿಗೆ ಊಟ ಮಾಡಿ ಮಾತನಾಡಿ, ‘ಪ್ರತಿ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಮಾತ್ರ ಸಾರ್ವಜನಿಕ ಜೀವನದಲ್ಲಿ ಗೌರವ ಸಂಪಾದಿಸಲು ಸಾಧ್ಯ’ ಎಂದರು.

‘ಸಮಾಜದಲ್ಲಿನ ಅಸಮಾನತೆ ತೊಲಗಿಸಲು ಅಂಬೇಡ್ಕರ್ ನೀಡಿದ ಸಂವಿಧಾನ ದಾರಿದೀಪವಾಗಿದೆ. ಅವರು ತಮ್ಮ ಜೀವನದಲ್ಲಿ ಎದುರಿಸಿದ ನೋವು ಯಾರಿಗೂ ಆಗದಿರಲಿ. ಅಸ್ಪೃಶ್ಯತೆ, ಜಾತಿ ಪದ್ದತಿ ಆಚರಣೆ ಮಾಡುವುದನ್ನು ನಿಲ್ಲಿಸುವ ಮೂಲಕ ಅವರ ಆಶಯಗಳನ್ನು ಈಡೇರಿಸಲು ಯುವಕರು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಜಾತಿ ಎನ್ನುವುದು ನಾವೇ ಹುಟ್ಟುಹಾಕಿರುವುದಾಗಿದೆ. ಅದನ್ನು ಹೋಗಲಾಡಿಸಲು ಮನಸ್ಸುಗಳು ಬದಲಾಗಬೇಕು. ನಾವೆಲ್ಲಾ ಒಂದೇ ಎಂಬ ಭಾವನೆ ಬಲಗೊಳ್ಳಬೇಕು. ಮನಸ್ಸಿನಲ್ಲಿ ಬೇರೂರಿರುವ ಅಸ್ಪೃಶ್ಯತೆಯೆಂಬ ಕಳಂಕ ದೂರಮಾಡಬೇಕು’ ಎಂದು ಎಚ್ಚರಿಸಿದರು.

‘ನಾನು ಚಿಕ್ಕವನಾಗಿರುವಾಗಲೇ ದಲಿತರ ಮನೆಯಲ್ಲಿ ಊಟ ಸೇವನೆ ಮಾಡಿದ್ದೆ, ಆಗ ನನ್ನ ತಂದೆ ಬೈಯುತ್ತಾರೆಂಬ ಭಯವಿತ್ತು, ಆದರೆ ನನ್ನ ತಂದೆ ಏನೂ ಅನ್ನಲಿಲ್ಲ, ದಲಿತರ ಮನೆಯಲ್ಲಿ ಊಟ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಧೈರ್ಯ ತುಂಬಿದರು, ಎಂದು ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

‘ಎಲ್ಲರಲ್ಲೂ ಹರಿಯುವ ರಕ್ತದ ಬಣ್ಣ ಒಂದೇ. ಕುಡಿಯುವ ನೀರು, ಉಸಿರಾಡುವ ಗಾಳಿ ನೈಸರ್ಗಿ ನಿರ್ಮಿತವಾದದು, ಅದಕ್ಕೆ ಯಾವುದೇ ಜಾತಿ, ಧರ್ಮವಿಲ್ಲ. ಪ್ರತಿಯೊಬ್ಬರು ಸಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು, ಅಸ್ಪೃಶ್ಯತೆಗೆ ಬೆಂಬಲ ನೀಡುವವರಿಗೆ ಬುದ್ದಿ ಹೇಳಬೇಕು’ ಎಂದರು.

‘ಸಾಮಾಜಿಕ ನ್ಯಾಯ ಇಂದು ಅಗತ್ಯವಾಗಿದೆ. ಅದಕ್ಕಾಗಿಯೇ ಸಂವಿಧಾನ ಅನೇಕ ಹಕ್ಕುಗಳನ್ನು ನೀಡಿದೆ, ಅದನ್ನು ಸದುಪಯೋಗಪಡಿಸಿಕೊಂಡು ಮುಖ್ಯವಾಹಿನಿಗೆ ಬರಬೇಕು. ಅಸ್ಪೃಶ್ಯತೆ ವಿರುದ್ಧ ಸಮಾಜದ ಪ್ರತಿಯೊಬ್ಬರು ಧ್ವನಿಯೆತ್ತುವಂತಾಗಬೇಕು. ಇತ್ತೀಚಿನ ದಿನಗಳಲ್ಲಿ ಅಂತಹ ಬೇಧ ಸಾಕಷ್ಟು ಕಡಿಮೆಯಾಗಿದ್ದು, ಜನನ್ನು ಜಾಗೃತಗೊಳಿಸಬೇಕು’ ಎಂದು ಹೇಳಿದರು.

ಅಣ್ಣಿಹಳ್ಳಿ ಸೊಸೈಟಿ ಅಧ್ಯಕ್ಷ ಅಣ್ಣಿಹಳ್ಳಿ ನಾಗರಾಜ್, ಬ್ಯಾಲಹಳ್ಳಿ ಶಂಕರೇಗೌಡ, ಕಾಮಧೇನುಹಳ್ಳಿ ಧರ್ಮೇಗೌಡ ಊಟ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT