ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಜಪೇಯಿ ವ್ಯಕ್ತಿತ್ವ ವಿಶ್ವಕ್ಕೆ ಮಾದರಿ: ವೆಂಕಟಮುನಿಯಪ್ಪ

Last Updated 25 ಡಿಸೆಂಬರ್ 2019, 16:54 IST
ಅಕ್ಷರ ಗಾತ್ರ

ಕೋಲಾರ: ‘ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ ಅವರ ಪ್ರಾಮಾಣಿಕತೆ, ದೇಶಪ್ರೇಮವು ಯುವಕರಿಗೆ ಆದರ್ಶವಾಗಿದೆ. ನೇರ ನಡೆ ನುಡಿಗೆ ಹೆಸರಾಗಿದ್ದ ವಾಜಪೇಯಿ ಮಹಾನ್‌ ರಾಜಕೀಯ ಮುತ್ಸದಿ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಬಣ್ಣಿಸಿದರು.

ವಾಜಪೇಯಿ ಅವರ 95ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕವು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಾಜಪೇಯಿ ಅವರ ದೂರದೃಷ್ಟಿ, ಸಾಮಾಜಿಕ ಕಾಳಜಿ, ದೇಶಪ್ರೇಮ ಇಂದಿನ ರಾಜಕಾರಣಿಗಳಿಗೆ ಆದರ್ಶವಾಗಿದೆ’ ಎಂದರು.

‘ಸ್ವಂತಕ್ಕೆ ಏನೂ ಮಾಡಿಕೊಳ್ಳದ ವಾಜಪೇಯಿ ಹೃದಯವು ಜೀವನವಿಡೀ ದೇಶಕ್ಕಾಗಿ ಮಿಡಿಯುತ್ತಿತ್ತು. ಆರ್ಥಿಕವಾಗಿ ದುರ್ಬಲವಾಗಿದ್ದ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದ ಶ್ರೇಯ ಅವರಿಗೆ ಸಲ್ಲಬೇಕು. ಶತ್ರು ರಾಷ್ಟ್ರ ಪಾಕಿಸ್ತಾನದ ಜತೆ ಬಾಂಧವ್ಯ ಸುಧಾರಣೆಗೆ ಶ್ರಮಿಸಿದ ಅವರ ಸ್ನೇಹಪರತೆ ಅನುಕರಣೀಯ. ಜನಾನುರಾಗಿಯಾಗಿದ್ದ ಅವರು ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದರು’ ಎಂದು ಹೇಳಿದರು.

‘ವಾಜಪೇಯಿ ಪ್ರಧಾನಿಯಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು ಆದರ್ಶವಾಗಿವೆ. ತಮ್ಮ ಅಧಿಕಾರಾವಧಿಯಲ್ಲಿ ನೀಡಿದ ಸ್ವಚ್ಛ ಆಡಳಿತವು ಭಾರತವನ್ನು ಜಾಗತಿಕವಾಗಿ ಗುರುವಿನ ಸ್ಥಾನದಲ್ಲಿ ನಿಲ್ಲಿಸುವಂತಿತ್ತು. ಅವರು ದೇಶದ ಅಭಿವೃದ್ಧಿಯ ಹರಿಕಾರರು. ಅವರ ವ್ಯಕ್ತಿತ್ವ ಇಡೀ ವಿಶ್ವಕ್ಕೆ ಮಾದರಿ’ ಎಂದು ತಿಳಿಸಿದರು.

ಮುಸ್ಲಿಮರ ಓಲೈಕೆ: ‘ದೇಶದಲ್ಲಿ ಕಾಂಗ್ರೆಸ್ ಮತ ಗಳಿಕೆಗಾಗಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಓಲೈಸುತ್ತಿದೆ. ವಾಜಪೇಯಿ ಅವರು ದೇಶದ ಆಸ್ತಿಯಾಗಿದ್ದ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯಾಗಿ ಮಾಡುವ ಮೂಲಕ ಉನ್ನತ ಸ್ಥಾನ ಕಲ್ಪಿಸಿಕೊಟ್ಟರು’ ಎಂದು ವಿವರಿಸಿದರು.

‘ಕಾರ್ಗಿಲ್ ಯುದ್ಧ ಭೂಮಿಗೆ ಭೇಟಿ ನೀಡಿ ಸೈನಿಕರನ್ನು ಹುರಿದುಂಬಿಸಿದ ವಾಜಪೇಯಿ ದೇಶದ ಭದ್ರತೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ರಾಷ್ಟ್ರೀಯ ಹೆದ್ದಾರಿಗಳನ್ನು ಚತುಷ್ಪಥ ರಸ್ತೆಗಳಾಗಿಸಿದ ಅವರ ದೂರದೃಷ್ಟಿ ಈಗಿನ ರಾಜಕಾರಣಿಗಳಿಗೆ ಇಲ್ಲ. ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಹೆಸರಾದ ಅವರ ನಡೆಯಿಂದ ಜಾಗತಿಕವಾಗಿ ಭಾರತಕ್ಕೆ ಗೌರವ ಸಿಗುವಂತಾಯಿತು’ ಎಂದರು.

‘ದೇಶದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ರಚನೆಯಲ್ಲಿ ವಾಜಪೇಯಿ ನಿರ್ಣಾಯಕ ಪಾತ್ರ ವಹಿಸಿದರು. ಅವರ ಪರಿಶ್ರಮದ ಫಲವಾಗಿ ದೇಶದಲ್ಲಿ ರಾಜಕೀಯವಾಗಿ ಹೊಸ ಗಾಳಿ ಬೀಸಿತು. ಅವರಂತಹ ಅಪರೂಪದ ರಾಜಕಾರಣಿ ಮತ್ತೊಬ್ಬರಿಲ್ಲ. ಸರ್ಕಾರ ಪತನವಾದ ಸಂದರ್ಭದಲ್ಲಿ ಅವರು ಮಾಡಿದ ಭಾಷಣ ದಾಖಲಾರ್ಹ ಹಾಗೂ ಭಾರತೀಯರು ಹೆಮ್ಮೆ ಪಡುವಂತಹದ್ದು’ ಎಂದು ಹೇಳಿದರು.

ವಿಶೇಷ ಪೂಜೆ: ವಾಜಪೇಯಿ ಹುಟ್ಟುಹಬ್ಬದ ಅಂಗವಾಗಿ ಕೆಇಬಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ದೇವಾಲಯದ ಮುಂದೆ ವಾಜಪೇಯಿ ಭಾವಚಿತ್ರವಿರಿಸಿ ಪುಷ್ಪನಮನ ಸಲ್ಲಿಸಿದರು.ಬಳಿಕ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ವಿವಿಧ ಬಡಾವಣೆಗಳಲ್ಲೂ ಪಕ್ಷದ ಕಾರ್ಯಕರ್ತರು ವಾಜಪೇಯಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ ಹಂಚಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ನಾರಾಯಣಸ್ವಾಮಿ, ಉಪಾಧ್ಯಕ್ಷ ವಿಜಯ್‌ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಬೈಚಪ್ಪ, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ವೆಂಕಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT