ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ರೋಗಗ್ರಸ್ಥವಾದ ಪಶು ಇಲಾಖೆ, ಚಿಕಿತ್ಸೆಗೆ ಅಲೆದಾಟ

ಅರ್ಧದಷ್ಟು ಹುದ್ದೆ ಖಾಲಿ: ನೇಮಕಾತಿಗೆ ಸರ್ಕಾರದ ಮೀನಮೇಷ
Last Updated 11 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಕೋಲಾರ: ಹೈನುಗಾರಿಕೆಯೇ ಜೀವಾಳವಾಗಿರುವ ಜಿಲ್ಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯು ಸಿಬ್ಬಂದಿ ಕೊರತೆಯಿಂದ ರೋಗಗ್ರಸ್ಥವಾಗಿದೆ. ಬಹುಪಾಲು ಪಶು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಇಲ್ಲದೆ ರೈತರು ಬವಣೆ ಪಡುವಂತಾಗಿದೆ.

ಬರಪೀಡಿತ ಜಿಲ್ಲೆಯಲ್ಲಿ ಕೃಷಿ ನಿರ್ವಹಣೆಯು ರೈತರಿಗೆ ಕಷ್ಟವಾಗಿದೆ. ಹೀಗಾಗಿ ಬಹುಪಾಲು ರೈತರು ಹೈನುಗಾರಿಕೆಯತ್ತ ಮುಖ ಮಾಡಿದ್ದಾರೆ. ಹಾಲು ಸಂಗ್ರಹಣೆಯಲ್ಲಿ ಜಿಲ್ಲೆಯ ಹಾಲು ಒಕ್ಕೂಟವು (ಕೋಚಿಮುಲ್‌) ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ದಿನಕ್ಕೆ ಸುಮಾರು 10 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ.

ಜಿಲ್ಲೆಯಲ್ಲಿ ಸುಮಾರು 8.19 ಲಕ್ಷ ಜಾನುವಾರುಗಳಿದ್ದು, ರೈತ ಕುಟುಂಬಗಳಿಗೆ ಹೈನುಗಾರಿಕೆಯೇ ಪ್ರಮುಖ ಆದಾಯ ಮೂಲವಾಗಿದೆ. ಜಾನುವಾರುಗಳನ್ನು ನಂಬಿ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಆದರೆ, ಹೈನುಗಾರಿಕೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕಾದ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯು ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ.

ಜಿಲ್ಲೆಯಲ್ಲಿ ಸದ್ಯ 27 ಪಶು ಆಸ್ಪತ್ರೆ, 59 ಪಶು ಚಿಕಿತ್ಸಾಲಯ, 22 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಹಾಗೂ 5 ಸಂಚಾರ ಪಶು ಚಿಕಿತ್ಸಾಲಯ, ಜಿಲ್ಲಾ ಕೇಂದ್ರದಲ್ಲಿ 1 ಪಾಲಿ ಕ್ಲಿನಿಕ್‌, ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ಬಂಗಾರಪೇಟೆಯಲ್ಲಿ ಹಂದಿ ತಳಿ ಸಂವರ್ಧನಾ ಕೇಂದ್ರವಿದೆ.

ಒಟ್ಟಾರೆ ಇಲಾಖೆಗೆ ಮಂಜೂರಾಗಿರುವ 490 ಹುದ್ದೆಗಳ ಪೈಕಿ ಸುಮಾರು ಅರ್ಧದಷ್ಟು ಹುದ್ದೆಗಳು ಹಲವು ವರ್ಷಗಳಿಂದ ಖಾಲಿಯಿದ್ದು, ಹುದ್ದೆ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿಲ್ಲ. ಪೂರ್ಣ ಪ್ರಮಾಣದಲ್ಲಿ ಹುದ್ದೆಗಳು ಭರ್ತಿಯಾಗದ ಕಾರಣ ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ರೈತರು ರಾಸುಗಳ, ಕುರಿ, ಮೇಕೆಗಳ ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

ಕಸ ಹೊಡೆಯಲು ಸಿಬ್ಬಂದಿಯಿಲ್ಲ: ಆಸ್ಪತ್ರೆಗೆ ‘ಡಿ’ ದರ್ಜೆ ನೌಕರರು ಮತ್ತು ಪಶು ವೈದ್ಯರು ಅತ್ಯಗತ್ಯ. ರೈತರು ರಾಸುಗಳನ್ನು ಆಸ್ಪತ್ರೆಗೆ ಕರೆತಂದಾಗ ಅವುಗಳ ಆರೈಕೆ, ಚಿಕಿತ್ಸೆ ನೀಡುವಾಗ ಸಹಾಯ ಮಾಡುವುದು, ಆಸ್ಪತ್ರೆಗಳ ನಿರ್ವಹಣೆ ಹೀಗೆ ನಾನಾ ರೀತಿಯಲ್ಲಿ ‘ಡಿ’ ದರ್ಜೆ ನೌಕರರು ಕೆಲಸ ಮಾಡುತ್ತಾರೆ. ಇಲಾಖೆಯಲ್ಲಿನ ಡಿ ದರ್ಜೆಯ 192 ಹುದ್ದೆಗಳಲ್ಲಿ 138 ಹುದ್ದೆ ಖಾಲಿಯಿವೆ. ಸಾಕಷ್ಟು ಕಡೆ ಆಸ್ಪತ್ರೆಗಳ ಬಾಗಿಲು ತೆಗೆದು ಕಸ ಹೊಡೆಯಲು ಅಗತ್ಯ ಸಿಬ್ಬಂದಿಯಿಲ್ಲ.

ಸಿಬ್ಬಂದಿ ವಿವರಣಾ ಪಟ್ಟಿಯನ್ನು ಅಧಿಕಾರಿಗಳು ಪ್ರತಿ ತಿಂಗಳು ಕೇಂದ್ರ ಕಚೇರಿಗೆ ಸಲ್ಲಿಸುತ್ತಾರೆ. ಡಿ ದರ್ಜೆಯ ಖಾಲಿ ಹುದ್ದೆಗಳಿಗೆ ಹೊರ ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳಲು ಅಧಿಕಾರಿಗಳು ಹಲವು ಬಾರಿ ಅನುಮತಿ ಕೋರಿದ್ದಾರೆ. ಆದರೆ, ನೇಮಕಾತಿಗೆ ಇಲಾಖೆಯು ಹಸಿರು ನಿಶಾನೆ ತೋರಿಲ್ಲ.

ಕಾರ್ಯ ಒತ್ತಡ: ಸಿಬ್ಬಂದಿ ಸಮಸ್ಯೆಯು ಇಲಾಖೆಯ ದೈನಂದಿನ ಕಾರ್ಯ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸಿಬ್ಬಂದಿ ಕೊರತೆ ಸಮಸ್ಯೆಯು ಹಾಲಿ ಸಿಬ್ಬಂದಿಯ ಕಾರ್ಯ ಒತ್ತಡ ಹೆಚ್ಚಿಸಿದೆ. ಹಾಲಿ ಸಿಬ್ಬಂದಿಯು ಮೂರ್ನಾಲ್ಕು ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಕ್ಕಪಕ್ಕದ ಗ್ರಾಮಗಳ ಪಶು ಆಸ್ಪತ್ರೆಗಳಿಗೆ ಪಶು ವೈದ್ಯಾಧಿಕಾರಿಗಳನ್ನು ನಿಯೋಜನೆ ಮೇಲೆ ಕಳುಹಿಸಿ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ.

‘ಹಿರಿಯ ಅಧಿಕಾರಿಗಳು ಪಶು ವೈದ್ಯಾಧಿಕಾರಿ ಹುದ್ದೆ ಖಾಲಿಯಿರುವ ಆಸ್ಪತ್ರೆಯಲ್ಲೂ ಹೆಚ್ಚುವರಿಯಾಗಿ ಕೆಲಸ ಮಾಡುವಂತೆ ಆದೇಶಿಸುತ್ತಾರೆ. ವಾರದಲ್ಲಿ ತಲಾ 3 ದಿನ ಒಂದೊಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಇದರಿಂದ ದೈಹಿಕವಾಗಿ ತುಂಬಾ ಶ್ರಮವಾಗುತ್ತಿದೆ. ಹಿರಿಯ ಅಧಿಕಾರಿಗಳ ಆದೇಶ ಪಾಲಿಸಲೇಬೇಕಾದ ಅನಿವಾರ್ಯತೆಯಿಂದ ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದೇವೆ’ ಎಂದು ಹಲವು ಪಶು ವೈದ್ಯಾಧಿಕಾರಿಗಳು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಕೆಲ ಗ್ರಾಮಗಳ ಪಶು ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳು ಇಲ್ಲದ ಕಾರಣ ಸ್ಥಳೀಯ ರೈತರು ತಮ್ಮ ಕೃಷಿ ಕೆಲಸ ಬಿಟ್ಟು ದೂರದ ಪಶು ಆಸ್ಪತ್ರೆಗಳಿಗೆ ತೆರಳಿ ಜಾನುವಾರುಗಳ ತಪಾಸಣೆ ಮಾಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಲಸಿಕೆ ಅಭಿಯಾನ: ಜಿಲ್ಲೆಯಲ್ಲಿ ಈಗಾಗಲೇ 17ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕೆ ಅಭಿಯಾನ ಆರಂಭವಾಗಿದ್ದು, ಕಾಲುಗಳಲ್ಲಿ ಗೊರಸಲು ಹೊಂದಿರುವ ದನ, ಎಮ್ಮೆ, ಹಂದಿಗಳಿಗೆ ನ.15ರೊಳಗೆ ಲಸಿಕೆ ಹಾಕಬೇಕಿದೆ. ಲಸಿಕೆ ಹಾಕುವ ಜವಾಬ್ದಾರಿಯೂ ಇಲಾಖೆಯ ಹೆಗಲೇರಿದ್ದು, ಅಭಿಯಾನಕ್ಕೆ ಸಿಬ್ಬಂದಿ ಕೊರತೆಯ ಬಿಸಿ ತಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT