ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗೆ ನೀರಿನ ಘಟಕ

ವಿಧಾನ ಪರಿಷತ್‌ ಸದಸ್ಯ ನಾರಾಯಣಸ್ವಾಮಿ ಭರವಸೆ
Last Updated 19 ಜನವರಿ 2021, 13:27 IST
ಅಕ್ಷರ ಗಾತ್ರ

ಕೋಲಾರ: ‘ವಿಧಾನ ಪರಿಷತ್ ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿ ಮತ್ತು ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ನೆರವು ಬಳಸಿಕೊಂಡು ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ 5 ಜಿಲ್ಲೆಗಳ 1 ಸಾವಿರ ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಶುದ್ಧ ನೀರು ರೋಗದ ಮೂಲ. ಉತ್ತಮ ಆರೋಗ್ಯಕ್ಕಾಗಿ ಶುದ್ಧ ನೀರು ಅತಿ ಮುಖ್ಯ. ಈಗಾಗಲೇ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಶಾಲೆಗಳಲ್ಲಿ 200 ಲೀಟರ್‌ ಸಾಮರ್ಥ್ಯದ 100 ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ’ ಎಂದು ವಿವರಿಸಿದರು.

‘ರಾಜ್ಯ ಸರ್ಕಾರವು ಶಿಕ್ಷಣ ಸಚಿವರ ನೇತೃತ್ವದಲ್ಲಿ ತಜ್ಞರೊಂದಿಗೆ ಸಮಾಲೋಚಿಸಿ ಶಿಕ್ಷಕಸ್ನೇಹಿ ಸರಳ ಮತ್ತು ವೈಜ್ಞಾನಿಕ ವರ್ಗಾವಣೆ ನೀತಿ ಜಾರಿ ಮಾಡಿತ್ತು. ಆದರೆ, ಕೆಲವರು ಈ ಸಂಬಂಧ ನ್ಯಾಯಾಲಯದ ಮೆಟ್ಟಿಲೇರಿ ತಡೆ ತಂದಿರುವುದರಿಂದ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ನೋವಾಗಿದೆ’ ಎಂದು ವಿಷಾದಿಸಿದರು.

‘ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ, ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಬಡ್ತಿ ಹೊಂದಿದ ಶಿಕ್ಷಕರಿಗೆ 15, 20 ಹಾಗೂ 25 ವರ್ಷದ ಟೈಬಾಂಡ್ ನೀಡಿಕೆ ಜತೆಗೆ ಪದೋನ್ನತಿ ಹೊಂದಿದ ಈ ಶಿಕ್ಷಕರಿಗೆ ಇತರೆ ಬೇರೆ ಶಿಕ್ಷಕರಿಗಿಂತ ₹ 4 ಸಾವಿರದಿಂದ ₹ 8 ಸಾವಿರ ವೇತನ ತಾರತಮ್ಯವಿದೆ. ಇದನ್ನು ಸರಿಪಡಿಸಲು ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದು ಭರವಸೆ ನೀಡಿದರು.

ಶಿಕ್ಷಕರಿಗೂ ಲಸಿಕೆ: ‘ಕೋವಿಡ್ ಸಂಕಷ್ಟದಲ್ಲಿ ಕೆಲಸ ಮಾಡಿದ ಶಿಕ್ಷಕರೂ ಸಹ ಕೊರೊನಾ ವಾರಿಯರ್ಸ್ ಆಗಿದ್ದಾರೆ. ಹೀಗಾಗಿ ಅವರಿಗೂ ಆದ್ಯತೆಯಡಿ ಮೊದಲು ಕೋವಿಡ್‌ ಲಸಿಕೆ ನೀಡಬೇಕು. ಕೋವಿಡ್‌ನಿಂದ ಮೃತಪಟ್ಟ ಶಿಕ್ಷಕರಿಗೂ ಕೊರೊನಾ ವಾರಿಯರ್ಸ್‌ಗೆ ನೀಡುವಷ್ಟೇ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯ ಅಂತರ್ಜಲ ವೃದ್ಧಿಗೆ ಜೀವಾಳವಾಗಿರುವ ಕೆ.ಸಿ ವ್ಯಾಲಿ ಯೋಜನೆ 2ನೇ ಹಂತದಲ್ಲಿ 174 ಕೆರೆ ನೀರು ತುಂಬಿಸುವ ₹ 400 ಕೋಟಿ ಅಂದಾಜು ವೆಚ್ಚದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಟೆಂಡರ್ ಕರೆಯಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೆ.ಸಿ ವ್ಯಾಲಿ ಮೊದಲ ಹಂತದ ಯೋಜನೆಯ ನೀರಿನಿಂದ ಈಗಾಗಲೇ ಕೆರೆಗಳು ಭರ್ತಿಯಾಗಿರುವ ಕಡೆ ಕೊಳವೆ ಬಾವಿಗಳು ಜಲ ಮರುಪೂರಣಗೊಂಡಿರುವ. 2ನೇ ಹಂತದ ಯೋಜನೆ ಕಾಮಗಾರಿ ಬೇಗನೆ ಮುಗಿದರೆ ಜಿಲ್ಲೆಯ ಪರಿಸ್ಥಿತಿ ಮತ್ತಷ್ಟು ಸುಧಾರಣೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT