ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರದಲ್ಲೇ ಮಾಜಿ ಯೋಧರಿಗೆ ನಿವೇಶನ

ಮಿಲಿಟರಿ ಆಸ್ಪತ್ರೆಗೂ ಜಾಗ; ಸಭೆಯಲ್ಲಿ ತಹಶೀಲ್ದಾರ್‌ ನಾಗರಾಜ್‌ ಭರವಸೆ
Last Updated 29 ಡಿಸೆಂಬರ್ 2022, 3:21 IST
ಅಕ್ಷರ ಗಾತ್ರ

ಕೋಲಾರ: ‘ಮಾಜಿ ಸೈನಿಕರಿಗೆ ಮಿಲಿಟರಿ ಆಸ್ಪತ್ರೆ ನಿರ್ಮಿಸಿ ಕೊಡಲು ಹಾಗೂ ನಿವೇಶನ ಸೌಲಭ್ಯ ಒದಗಿಸಲು ಶೀಘ್ರದಲ್ಲೇ ಜಾಗ ಗುರುತಿಸಿ ಮಂಜೂರು ಮಾಡಲು ಅಗತ್ಯ ಕ್ರಮ ವಹಿಸಲಾಗುವುದು’ ಎಂದು ತಹಶೀಲ್ದಾರ್ ವಿ.ನಾಗರಾಜ್ ತಿಳಿಸಿದರು.

ನಗರದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಮಾಜಿ ಸೈನಿಕರ ಕುಂದು ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.

‘ಯೋಧರು ಗಡಿ ಪ್ರದೇಶ, ಜಮ್ಮುಕಾಶ್ಮೀರ ಸೇರಿದಂತೆ ವಿವಿಧೆಡೆ ದೇಶಕ್ಕಾಗಿ ತಮ್ಮ ಜೀವ ಮುಡಿಪಾಗಿಟ್ಟು ಹೋರಾಡಿದ್ದಾರೆ. ನಿವೃತ್ತರಾದ ಯೋಧರು ಮತ್ತು ಹುತಾತ್ಮ ಸೈನಿಕರ ಕುಟುಂಬದವರ ಅಹವಾಲು ಸ್ವೀಕರಿಸಿದ್ದೇನೆ, ಸಮಸ್ಯೆ ಆಲಿಸಿದ್ದೇನೆ. ಅವರ ನೆಮ್ಮದಿ ಜೀವನಕ್ಕಾಗಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು’
ಎಂದರು.

‘ಯೋಧರ ಆಸ್ಪತ್ರೆಗಾಗಿ ಅಗತ್ಯವಾದ 150x150 ಅಳತೆಯ ನಿವೇಶವನ್ನು ಈಗಾಗಲೇ ಮೂರು ಕಡೆ ಗುರುತಿಸಲಾಗಿದೆ. ವಾರದಲ್ಲಿ ಪರಿಶೀಲಿಸಿ ಸೂಕ್ತ ಜಾಗವನ್ನು ಮಂಜೂರು ಮಾಡಲು ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ವಸತಿ ಸೌಲಭ್ಯಕ್ಕಾಗಿ ಅರ್ಜಿ ಹಾಕಿರುವವರಿಗೆ ಈಗಾಗಲೇ ಖಾದ್ರಿಪುರದಲ್ಲಿನ 4.20 ಎಕರೆ ಸರ್ಕಾರಿ ಜಾಗ ಗುರುತಿಸಲಾಗಿದೆ. ಸುಮಾರು 120 ಕ್ಕೂ ಹೆಚ್ಚು ನಿವೇಶನಗಳನ್ನು ವಿಂಗಡಿಸಬಹುದಾಗಿದೆ. ಇದರ ಜೊತೆಗೆ ನಗರಸಭೆ ವ್ಯಾಪ್ತಿಗೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಖಾಸಗಿ ಬಡಾವಣೆಗಳಲ್ಲಿ ಯೋಧರಿಗೆ ಸಿಎ ನಿವೇಶನ ಮೀಸಲಾಗಿಡಬೇಕೆಂದು ಆದೇಶವನ್ನು ಜಾರಿ ಮಾಡಲಾಗುವುದು’ ಎಂದು ಹೇಳಿದರು.

‘ಕೋಲಾರ ತಾಲ್ಲೂಕಿನಲ್ಲಿ 350 ಮಾಜಿ ಸೈನಿಕರು ಇದ್ದಾರೆ. ಈ ಪೈಕಿ ಕೆಲವರಿಗೆ ಕೃಷಿ ಜಮೀನುಗಳನ್ನು ಸರ್ಕಾರದಿಂದ ಮಂಜೂರು ಮಾಡಲಾಗಿದ್ದು, ಅವರಿಗೆ ಜಾಗವನ್ನು ಗುರುತಿಸಿ ಕೊಡಬೇಕಾಗಿದೆ. ಸುಮಾರು 200 ಅರ್ಜಿಗಳು ನಿವೇಶನಕ್ಕೆ ಸಲ್ಲಿಕೆಯಾಗಿದೆ. ಕೆಲವರು ಜಮೀನು ಕೋರಿಯೂ ಅರ್ಜಿ ಸಲ್ಲಿಸಿದ್ದಾರೆ. ಕೆಲವು ಕಡತಗಳು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ವಿಲೇವಾರಿಯಾಗದೆ ಉಳಿದಿವೆ. ಎಲ್ಲವನ್ನೂ ಹಂತ, ಹಂತವಾಗಿ ಕ್ರಮಕೈಗೊಳ್ಳಲಾಗುವುದು. ಗೋಮಾಳ ಜಮೀನಿನಲ್ಲಿ ದಾರಿ ಇದ್ದರೂ ಅಡ್ಡಿ ಪಡಿಸುತ್ತಿರುವ ದೂರಿಗೆ ಕ್ರಮಗೊಳ್ಳಲು ಸೂಚಿಸಿದ್ದೇನೆ’ ಎಂದು ತಿಳಿಸಿದರು.

ಜಿಲ್ಲಾ ಮಾಜಿ ಸೈನಿಕರ ಟ್ರಸ್ಟ್‌ ಅಧ್ಯಕ್ಷ ಜಗನ್ನಾಥ್‌ ಮಾತನಾಡಿ, ‘ಆಸ್ಪತ್ರೆ ಮಂಜೂರಾತಿಗೆ ಮತ್ತು ಮನೆಗಳ ನಿವೇಶನಗಳಿಗೆ ಹಲವಾರು ಬಾರಿ ಅರ್ಜಿ ನೀಡಿದ್ದೇವೆ. ನಿವೃತ್ತ ಯೋಧರಿಗೆ ಸರ್ಕಾರವು ಜಮೀನು ಮಂಜೂರಾತಿಗೆ ಆದೇಶ ಮಾಡಿದ್ದರೂ ಕಂದಾಯ ಇಲಾಖೆಯಲ್ಲಿ ಜಮೀನು ಗುರುತಿಸಿ ಮಂಜೂರು ಮಾಡುವಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ, ಜೀವನೋಪಾಯಕ್ಕಾಗಿ ಭದ್ರತಾ ಕೆಲಸ ಮಾಡುವಂತಾಗಿದೆ’
ಎಂದರು.

‘ಕೋಲಾರಕ್ಕೆ ಮಿಲಿಟರಿ ಕ್ಯಾಂಟೀನ್‌ ಮಂಜೂರು ಮಾಡಲು ಸೇನಾಧಿಕಾರಿಗಳು ಸಿದ್ಧವಿದ್ದರೂ ನಿವೇಶನ ಮಂಜೂರು ಮಾಡದ ಕಾರಣ ಅದು ಸಾಧ್ಯವಾಗುತ್ತಿಲ್ಲ. ಅಗತ್ಯ ವಸ್ತುಗಳನ್ನು ಪಡೆಯಲು ಬೆಂಗಳೂರಿಗೆ ತಿರುಗಾಡಬೇಕಾಗಿದೆ’ ಎಂದು ಹೇಳಿದರು.

ಅಹವಾಲು ಆಲಿಸಿದ ತಹಶೀಲ್ದಾರ್‌, ಈ ವಿಚಾರವಾಗಿ ಒಂದು ವಾರದಲ್ಲಿ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ಶಿರಸ್ತೇದಾರ್ ಶ್ರೀನಿವಾಸ್ ಮತ್ತು ಕಂದಾಯ ನಿರೀಕ್ಷಕ ರಾಜು ಅವರಿಗೆ ಸೂಚನೆ ನೀಡಿದರು.

ವಿವಿಧ ಗ್ರಾಮಗಳಿಂದ ಬಂದಿದ್ದ 80ಕ್ಕೂ ಅಧಿಕ ಮಾಜಿ ಯೋಧರು ಹಾಗೂ ಹುತಾತ್ಮ ಯೋಧರ ಕುಟುಂಬದವರು ನಿವೇಶನ ಮತ್ತು ಜಮೀನು ಮಂಜೂರಾತಿ ದಾಖಲೆಗಳನ್ನು ತಹಶೀಲ್ದಾರ್‌ರಿಗೆ ನೀಡಿ ಬೇಗನೇ ಒದಗಿಸಿಕೊಡಲು ಮನವಿ ಮಾಡಿಕೊಂಡರು.

ಟ್ರಸ್ಟ್‌ನ ಜಂಟಿ ಕಾರ್ಯದರ್ಶಿ ಕುಮಾರ್‌, ಉಪಾಧ್ಯಕ್ಷ ನಾರಾಯಣಪ್ಪ, ನಿರ್ದೇಶಕ ಜಯಪಾಲ್‌ ಹಾಗೂ ಪದಾಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT