ಶನಿವಾರ, ಆಗಸ್ಟ್ 13, 2022
23 °C
ಗೃಹರಕ್ಷಕ ದಳ ಸಿಬ್ಬಂದಿಗೆ ಕೆಜಿಎಫ್‌ ಎಸ್ಪಿ ಇಲಕ್ಕಿಯಾ ಕರುಣಾಗರನ್‌ ಕಿವಿಮಾತು

ಕೋಲಾರ: ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿ

ಪ್ರಜಾವಾಣಿ ವಾರ್ತ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಗೃಹರಕ್ಷಕ ದಳ ಸಿಬ್ಬಂದಿಯನ್ನು ಸಾರ್ವಜನಿಕರು ಪೊಲೀಸರೆಂದೇ ಭಾವಿಸಿದ್ದಾರೆ. ಇಂತಹ ಸಮಯದಲ್ಲಿ ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡಬೇಕು’ ಎಂದು ಕೆಜಿಎಫ್‌ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್‌ ಕಿವಿಮಾತು ಹೇಳಿದರು.

ಇಲ್ಲಿ ಭಾನುವಾರ ನಡೆದ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆಯಲ್ಲಿ ಮಾತನಾಡಿ, ‘ಪೊಲೀಸ್ ಇಲಾಖೆಗೆ ಪೂರಕವಾಗಿ ನಿಂತಿರುವ ಗೃಹರಕ್ಷಕರು ಎಂದಿಗೂ ಸಮವಸ್ತ್ರಕ್ಕೆ ಅವಮಾನವಾಗದಂತೆ ನಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರಿ ಕೆಲಸವು ದೇವರ ಕೆಲಸವೆಂದು ಭಾವಿಸಿ ಕಾಳಜಿಯಿಂದ ಮತ್ತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಗೃಹರಕ್ಷಕ ದಳವು ಪೊಲೀಸ್‌ ಇಲಾಖೆ ಜತೆ ಕೈಜೋಡಿಸಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಶಾಂತಿ -ಸುವ್ಯವಸ್ಥೆ ಕಾಪಾಡುವಲ್ಲಿ ಸಾಧ್ಯವಾಗುತ್ತಿದೆ’ ಎಂದು ಸ್ಮರಿಸಿದರು.

‘ಗೃಹರಕ್ಷಕ ದಳ ದಿನಾಚರಣೆಯನ್ನು ರಕ್ತದಾನದ ಮೂಲಕ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ರಕ್ತದಾನದ ಮೂಲಕ ಜನರ ಜೀವ ಉಳಿಸಬೇಕು. ಗೃಹರಕ್ಷಕ ದಳ ಸಿಬ್ಬಂದಿ ರಕ್ತದಾನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅವಿಭಾಜ್ಯ ಅಂಗ: ‘ಗೃಹರಕ್ಷಕ ದಳವು ಪೊಲೀಸ್‌ ಇಲಾಖೆಯ ಅವಿಭಾಜ್ಯ ಅಂಗವಾಗಿದೆ. ಗೃಹರಕ್ಷಕ ದಳವು 1946ರಲ್ಲಿ ಬಾಂಬೆ ಪ್ರಾಂತ್ಯದಲ್ಲಿ ಆರಂಭಗೊಂಡಿತು. 1963ರಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಅಧಿನಿಯಮದಡಿ ರಾಜ್ಯದಲ್ಲಿ ಸೇವೆ ಆರಂಭಿಸಿತು. ಅಂದಿನಿಂದ ಪೊಲೀಸ್ ಇಲಾಖೆ ಜತೆಗೆ ಎಲ್ಲಾ ಸಂದರ್ಭದಲ್ಲೂ ಸಹಾಯಕ್ಕೆ ನಿಂತಿರುವುದು ಶ್ಲಾಘನೀಯ’ ಎಂದು ಗೃಹರಕ್ಷಕ ದಳದ ನಿಕಟಪೂರ್ವ ಕಮಾಂಡೆಂಟ್‌ ಬಿ.ಮರಿಸ್ವಾಮಿ ಹೇಳಿದರು.

ರಕ್ತದಾನ ಶಿಬಿರ ನಡೆಯಿತು. ಗೃಹರಕ್ಷಕ ದಳ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಲಾಯಿತು. ಗೃಹರಕ್ಷಕ ದಳ ಜಿಲ್ಲಾ ಕಮಾಂಡೆಂಟ್‌ ಕೆ.ಆರ್‌.ಕಿರಣ್‌ಕುಮಾರ್, ಅಧಿಕಾರಿಗಳಾದ ಎಸ್.ಮಾರುತಿ, ರವಿಕುಮಾರ್, ಮುರಳಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.