ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದಾತರ ಮಿತ್ರರಾಗಿ ಕೆಲಸ ಮಾಡಿ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ

ಗ್ರಾಮೋದ್ಧಾರ ಕೇಂದ್ರಗಳ ಸಿಬ್ಬಂದಿಗೆ ಸಲಹೆ
Last Updated 14 ಮೇ 2019, 15:18 IST
ಅಕ್ಷರ ಗಾತ್ರ

ಕೋಲಾರ: ‘ರೈತರಿಗೆ ಗ್ರಾಮೀಣ ಭಾಗದಲ್ಲಿ ಮಾರುಕಟ್ಟೆ, ದಲ್ಲಾಳಿ, ಹಣಕಾಸು ವಿಷಯದಲ್ಲಾಗುವ ವಂಚನೆ ತಪ್ಪಿಸಿ ಅನ್ನದಾತರ ಮಿತ್ರನಾಗಿ ದೇಶಿ ಸ್ಕಿಲ್ಸ್ ಸಂಸ್ಥೆಯ ಗ್ರಾಮೋದ್ಧಾರ ಕೇಂದ್ರಗಳು ಕೆಲಸ ಮಾಡಬೇಕು’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಆಶಿಸಿದರು.

ಇಲ್ಲಿ ಮಂಗಳವಾರ ನಡೆದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮೋದ್ಧಾರ ಕೇಂದ್ರಗಳ ಸಮನ್ವಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಡಿಸಿಸಿ ಬ್ಯಾಂಕ್ ಗ್ರಾಮೋದ್ಧಾರ ಕೇಂದ್ರಗಳ ಆರ್ಥಿಕ ಚಟುವಟಿಕೆಗಳಿಗೆ ಸಾಲ ನೀಡಲು ಸಿದ್ಧವಿದೆ. ಗ್ರಾಮ ಪಂಚಾಯಿತಿ ಜತೆ ಸಮನ್ವಯ ಕಾಯ್ದುಕೊಂಡು ರೈತರ ಅಗತ್ಯಗಳನ್ನು ಸ್ಥಳೀಯವಾಗಿ ಪೂರೈಸಬೇಕು’ ಎಂದರು.

‘ಬೆಳೆ ವಿಮೆ, ಮಾರುಕಟ್ಟೆ ಸೌಲಭ್ಯ, ದಲ್ಲಾಳಿ ಹಾವಳಿ, ನಕಲಿ ಹಣಕಾಸು ಸಂಸ್ಥೆಗಳಿಂದಾಗುವ ವಂಚನೆ ಕುರಿತು ರೈತರಿಗೆ ಅರಿವು ಮೂಡಿಸಬೇಕು. ರೈತರೊಂದಿಗೆ ಉತ್ತಮ ಬಾಂಧವ್ಯ ಸಾಧಿಸಿ ಕೃಷಿಗೆ ಪೂರಕವಾದ ಚಟುವಟಿಕೆ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಗ್ರಾಮೋದ್ಧಾರ ಕೇಂದ್ರಗಳಿಗೆ ಕೇಂದ್ರ ಸರ್ಕಾರದ ಮಾನ್ಯತೆ ಇದೆ. ಹೀಗಾಗಿ ಈ ಕೇಂದ್ರಗಳ ಸಿಬ್ಬಂದಿ ಬೇಗನೆ ಜನರ ಬಳಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಜನರ ನಂಬಿಕೆ ಗಳಿಸಿ ಸೇವಕರಾದಾಗ ಮಾತ್ರ ಕೇಂದ್ರ ಉಳಿಯಲು ಬೆಳೆಯಲು ಸಾಧ್ಯ’ ಎಂದು ಕಿವಿಮಾತು ಹೇಳಿದರು.

‘ಡಿಸಿಸಿ ಬ್ಯಾಂಕ್‌ನಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುವ ಸಾಲ ಸೌಲಭ್ಯ ವಿತರಣೆಗೆ ಗ್ರಾಮೋದ್ಧಾರ ಕೇಂದ್ರಗಳು ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು. ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸವಲತ್ತುಗಳನ್ನು ಕೇಂದ್ರಗಳ ಮೂಲಕ ಗ್ರಾಮೀಣ ಜನ ಅತ್ಯಂತ ಸುಲಭವಾಗಿ ಪಡೆದುಕೊಳ್ಳಲು ಮನವರಿಕೆ ಮಾಡಿಕೊಡಿ. ಕೇಂದ್ರಗಳ ಅಭಿವೃದ್ಧಿಗೆ ಬ್ಯಾಂಕ್ ಎಲ್ಲಾ ನೆರವು ನೀಡುತ್ತದೆ’ ಎಂದರು.

ಬದ್ಧತೆಯಿಂದ ಕೆಲಸ ಮಾಡಿ: ‘ಗ್ರಾಮೋದ್ಧಾರ ಕೇಂದ್ರಗಳ ಮೂಲಕ ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ಅನುಮತಿ ಸಿಕ್ಕಿದರೆ ಮತ್ತಷ್ಟು ಉಪಯೋಗವಾಗುತ್ತದೆ. ಕೇಂದ್ರಗಳ ಪ್ರತಿನಿಧಿಗಳು ಜನಪರವಾಗಿ ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದು ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕ ರುದ್ರಸ್ವಾಮಿ ಸಲಹೆ ನೀಡಿದರು.

‘ಮುದ್ರಾ ಯೋಜನೆಯಡಿ ಸಾಲ ಸಿಗುತ್ತಿದೆ. ಸಾರ್ವಜನಿಕರು ದಿನನಿತ್ಯದ ಹಣಕಾಸು ವ್ಯವಹಾರ ಸೇವೆಯನ್ನು ಗ್ರಾಮೋದ್ಧಾರ ಕೇಂದ್ರಗಳಿಂದ ಪಡೆಯಬಹುದು’ ಎಂದು ದೇಶಿ ಸ್ಕಿಲ್ಸ್ ಸಂಸ್ಥೆ ಪ್ರತಿನಿಧಿ ರಾಮಣ್ಣ ವಿವರಿಸಿದರು.

ಸೇವೆ ಒದಗಿಸುತ್ತಿದೆ: ಗ್ರಾಮೋದ್ಧಾರ ಕೇಂದ್ರಗಳಲ್ಲಿ ಸೌರಶಕ್ತಿ ಉತ್ಪನ್ನಗಳು ರಿಯಾಯಿತಿ ದರದಲ್ಲಿ ದೊರೆಯುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಸಂಸ್ಥೆಯು ರಾಜ್ಯದಲ್ಲಿ ಒಂದು ವರ್ಷದಿಂದ ಗ್ರಾಮೀಣ ಭಾಗದ ಜನರಿಗೆ ವಿನೂತನವಾಗಿ ತನ್ನದೇ ಶೈಲಿಯಲ್ಲಿ ನಾಗರೀಕ, ಆರೋಗ್ಯ, ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ಸೇವೆ ಒದಗಿಸುತ್ತಿದೆ’ ಎಂದು ದೇಶಿ ಸ್ಕಿಲ್ಸ್ ಸಂಸ್ಥೆ ಜಿಲ್ಲಾ ಸಮನ್ವಯಾಧಿಕಾರಿ ಅಶ್ವತ್ಥ್‌ಗೌಡ ಮಾಹಿತಿ ನೀಡಿದರು.

ಸಂಸ್ಥೆಯ ಚಿಕ್ಕಬಳ್ಳಾಪುರ ಜಿಲ್ಲಾ ಸಮನ್ವಯಾಧಿಕಾರಿ ಭರತ್‌ಕುಮಾರ್, ಎಂಜಿನಿಯರ್ ಸುರೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT