ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಲ್ಲೆಯ ರೈತರ ಅಭಿವೃದ್ಧಿಗೆ ಶ್ರಮಿಸುತ್ತೇನೆ‘

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬೀಜ ನಿಗಮ ನಿರ್ದೇಶಕ ನಾಗರಾಜ್‌ ಭರವಸೆ
Last Updated 18 ಡಿಸೆಂಬರ್ 2020, 14:56 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯ ಬೀಜ ನಿಗಮದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಮತದಾರರು ಪಕ್ಷಾತೀತವಾಗಿ ನನ್ನ ಕೈಹಿಡಿದಿದ್ದರಿಂದ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದ್ದೇನೆ. ಉತ್ತಮ ಕೆಲಸ ಮಾಡಿ ಜಿಲ್ಲೆಯ ರೈತರ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ನಿಗಮದ ನಿರ್ದೇಶಕ ಡಿ.ಎಲ್.ನಾಗರಾಜ್ ಭರವಸೆ ನೀಡಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಿಗಮದ ವಲಯ 1ರಲ್ಲಿನ 12 ಜಿಲ್ಲೆಗಳ 63 ತಾಲ್ಲೂಕು ವ್ಯಾಪ್ತಿಯ ಸಂಸದರು, ಶಾಸಕರು ಹಾಗೂ ಷೇರುದಾರರು ಚುನಾವಣೆಯಲ್ಲಿ ಪಕ್ಷಾತೀತವಾಗಿ ನನ್ನನ್ನು ಬೆಂಬಲಿಸಿದ್ದಾರೆ’ ಎಂದರು.

‘ಚುನಾವಣಾ ಪೈಪೋಟಿ ನೋಡಿದರೆ ಗೆಲುವಿನ ಅಂತರ ಕಡಿಮೆ ಆಗಬಹುದೆಂದು ಊಹಿಸಿದ್ದೆ. ಎದುರಾಳಿಗಳು ಮತದಾರರಿಗೆ ಹಣ, ಬೆಳ್ಳಿ ಲೋಟ, ದೀಪ ಹಂಚಿದ್ದರು. ಎದುರಾಳಿಗಳು ನೀಡಿದ ಹಣವನ್ನು ಮತದಾರರು ವಾಪಸ್ ನೀಡಿ ನನಗೆ ಮತ ಚಲಾಯಿಸಿದರು’ ಎಂದು ಹೇಳಿದರು.

‘ಶ್ರೀನಿವಾಸಗೌಡರು 1978ರಲ್ಲಿ ತಾಲ್ಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧೆ ಮಾಡಿದ್ದಾಗ ಅವರ ಪರ ಕೆಲಸ ಮಾಡಿ ಗೆಲ್ಲಿಸಿದ್ದೆ. 1984ರಲ್ಲಿ ಜಿಲ್ಲಾ ಪರಿಷತ್ ಚುನಾವಣೆ, 1994ರಿಂದ 2018ರವರೆಗೂ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀನಿವಾಸಗೌಡರ ಬೆಂಬಲಕ್ಕೆ ನಿಂತಿದ್ದೆ. ಬೀಜ ನಿಗಮದ ಚುನಾವಣೆಯಲ್ಲಿ ಅವರು ನನ್ನನ್ನು ಬೆಂಬಲಿಸಲಿಲ್ಲ. ಆದರೆ, ಷೇರುದಾರರು ನನ್ನನ್ನು ಗೆಲ್ಲಿಸಿದರು’ ಎಂದು ತಿಳಿಸಿದರು.

‘ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ರಾಮು ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದರು. ಜೆಡಿಎಸ್‌ ಮುಖಂಡರೆಲ್ಲಾ ವರಿಷ್ಠರ ಕೈ ಕಾಲು ಹಿಡಿದು ಶ್ರೀನಿವಾಸಗೌಡರಿಗೆ ಟಿಕೆಟ್ ನೀಡುವಂತೆ ಮನವೊಲಿಸಿದ್ದೆವು. ನಂತರ ಚುನಾವಣೆಯಲ್ಲೂ ಗೆಲ್ಲಿಸಿದೆವು. ಶ್ರೀನಿವಾಸಗೌಡರು ಇದಕ್ಕೆ ಪ್ರತೀಕಾರ ತೀರಿಸಿಕೊಂಡಿದ್ದಾರೆ’ ಎಂದು ಕುಟುಕಿದರು.

30ಕ್ಕೆ ಸಭೆ: ಬೆಂಗಳೂರಿನಲ್ಲಿ ಡಿ.30ಕ್ಕೆ ರಾಜ್ಯ ಬೀಜ ನಿಗಮದ ಮಹಾಸಭೆ ನಡೆಯಲಿದೆ. ಕೃಷಿ ಸಚಿವರನ್ನೇ ನಿಗಮದ ಅಧ್ಯಕ್ಷರನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು ಅಂಗೀಕರಿಸಿದೆ. ಮಹಾಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗುತ್ತದೆ. ಭವಿಷ್ಯದಲ್ಲಿ ನಿಗಮವು ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದು ಬಲಿಷ್ಠವಾಗಿ ಬೆಳೆಯುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ನಿಗಮದಿಂದ ಮೆಕ್ಕೆ ಜೋಳ, ರಾಗಿ, ನೆಲಗಡಲೆ, ಭತ್ತ ಸೇರಿದಂತೆ ಇತರೆ ಬಿತ್ತನೆ ಬೀಜದ ವಹಿವಾಟಿನಲ್ಲಿ ಹೆಚ್ಚು ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ನಿಗಮದ ಮೂಲಕ ರೈತರಿಗೆ ತೋಟಗಾರಿಕೆ ಬೆಳೆಗಳ ಬಿತ್ತನೆ ಬೀಜ ವಿತರಿಸುವ ಚಿಂತನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಬೀಜ ಸಂಸ್ಕರಣಾ ಘಟಕ ಆರಂಭಕ್ಕೆ ಕೃಷಿ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಮುರಳೀಧರರೆಡ್ಡಿ, ಎಪಿಎಂಸಿ ಸದಸ್ಯ ಅಪ್ಪಯ್ಯಪ್ಪ, ನಗರಸಭೆ ನಾಮನಿರ್ದೇಶಿತ ಸದಸ್ಯ ಶ್ರೀನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT