ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ವರ್ಷಾಂತ್ಯಕ್ಕೆ ಯರಗೋಳ್‌ ಯೋಜನೆ ಲೋಕಾರ್ಪಣೆ

ವಿಧಾನ ಮಂಡಲ ಅಧಿವೇಶನದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಭರವಸೆ
Last Updated 14 ಸೆಪ್ಟೆಂಬರ್ 2021, 13:09 IST
ಅಕ್ಷರ ಗಾತ್ರ

ಕೋಲಾರ: ‘ಯರಗೋಳ್ ಯೋಜನೆಯ ಸಿವಿಲ್ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಈ ವರ್ಷಾಂತ್ಯದೊಳಗೆ ಯೋಜನೆ ಲೋಕಾರ್ಪಣೆ ಮಾಡುತ್ತೇವೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರು ಯರಗೋಳ್‌ ಯೋಜನೆ ಸಂಬಂಧ ಮಂಗಳವಾರ ವಿಧಾನ ಮಂಡಲ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ನೀರಿನ ಪಂಪ್ಪಿಂಗ್‌ ಯಂತ್ರೋಪಕರಣ ಅಳವಡಿಕೆ ಮತ್ತು 11 ಕೆ.ವಿ ವಿದ್ಯುತ್ ಮಾರ್ಗದ ಕೆಲಸ ಪ್ರಗತಿಯಲ್ಲಿದೆ. ಅಧಿವೇಶನದ ಬಳಿಕ ನಂತರ ಯರಗೋಳ್ ಅಣೆಕಟ್ಟೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸುತ್ತೇವೆ’ ಎಂದರು.

‘ಕೋಲಾರ, ಮಾಲೂರು, ಬಂಗಾರಪೇಟೆ ಮತ್ತು ಮಾರ್ಗ ಮಧ್ಯದ 45 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವುದು ಯರಗೋಳ್‌ ಯೋಜನೆಯ ಉದ್ದೇಶ. ಮೊದಲ ಹಂತದ ಕಾಮಗಾರಿಯು 500 ಎಂಸಿಎಫ್‌ಟಿ ಸಾರ್ಮರ್ಥ್ಯದ ಅಣೆಕಟ್ಟು ನಿರ್ಮಾಣ, ಪೂರಕ ಕಾಮಗಾರಿ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಒಳಗೊಂಡಿದೆ. ಈವರೆಗೆ ಕಾಮಗಾರಿಗೆ ₹ 159.98 ಕೋಟಿ ವೆಚ್ಚವಾಗಿದೆ’ ಎಂದು ವಿವರಿಸಿದರು.

‘ಯೋಜನೆಯ 2ನೇ ಹಂತದ ಕಾಮಗಾರಿಯು ಏರು ಕೊಳವೆ ಮಾರ್ಗ, ವಿತರಣಾ ಕೊಳವೆ ಮಾರ್ಗ, ಮೇಲ್ಮಟ್ಟದ ಜಲಸಂಗ್ರಹಗಾರ, ನೀರು ಶುದ್ಧೀಕರಣ ಘಟಕ ಹಾಗೂ ಪೂರಕ ಕೆಲಸಗಳನ್ನು ಒಳಗೊಂಡಿದೆ. 2ನೇ ಹಂತದ ಕಾಮಗಾರಿಗೆ ಈವರೆಗೆ ₹ 85.92 ಕೋಟಿ ವೆಚ್ಚ ಮಾಡಲಾಗಿದೆ.500 ಎಂಸಿಎಫ್‌ಟಿ ಸಾಮರ್ಥ್ಯದ ಅಣೆಕಟ್ಟು, ಪಂಪ್‌ಹೌಸ್‌, ಸಂಪರ್ಕ ರಸ್ತೆ, 10 ಕಿ.ಮೀ ಕೊಳವೆ ಮಾರ್ಗ ಹಾಗೂ ಇತರೆ ಕಾಮಗಾರಿಗಳನ್ನು ಹೈದರಾಬಾದ್‌ನ ರಾಮ್ಕಿ ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಸಂಸ್ಥೆಗೆ ವಹಿಸಲಾಗಿದೆ’ ಎಂದುಮಾಹಿತಿ ನೀಡಿದರು.

ವಿಳಂಬಕ್ಕೆ ಕಾರಣ: ‘ಯೋಜನೆಗೆ 127.10 ಎಕರೆ ಖಾಸಗಿ ಜಮೀನು, 153.15 ಎಕರೆ ಅರಣ್ಯ ಭೂಮಿ, 95.12 ಎಕರೆ ಸರ್ಕಾರಿ ಗೋಮಾಳದ ಜಮೀನು ಸೇರಿದಂತೆ ಒಟ್ಟಾರೆ 375 ಎಕರೆ 37 ಗುಂಟೆ ಜಮೀನು ಅಗತ್ಯವಿದೆ. ಮೊದಲು ಸರ್ಕಾರದ ಜಮೀನು ಎಂದು ಗುರುತಿಸಿದ್ದ ಜಾಗವನ್ನು ನಂತರ 2011ರಲ್ಲಿ ಅರಣ್ಯ ಪ್ರದೇಶವೆಂದು ಗುರುತಿಸಲಾಯಿತು. ಆ ಜಮೀನು ಅರಣ್ಯ ಪ್ರದೇಶವಾದ ಕಾರಣ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲು ಸುಮಾರು ಎರಡೂವರೆ ವರ್ಷ ವಿಳಂಬವಾಯಿತು’ ಎಂದರು.

‘ಅಣೆಕಟ್ಟು, ಪಂಪ್‌ಹೌಸ್‌, ಸಂಪರ್ಕ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯು 2013ರಲ್ಲಿ ಜಮೀನು ಹಸ್ತಾಂತರಿಸಿತು. ಇವುಗಳ ನಿರ್ಮಿಸುವ ಸ್ಥಳವು ಅರಣ್ಯ ಪ್ರದೇಶವಾಗಿದ್ದರಿಂದ ಅಲ್ಲಿ ಮೂಲಸೌಕರ್ಯ ಕೊರತೆಯಿದ್ದ ಕಾರಣ ಕಾರ್ಮಿಕರು ಪದೇ ಪದೇ ಕೆಲಸ ಬಿಟ್ಟು ಹೋಗುತ್ತಿದ್ದರು. ಇದರಿಂದ ಕಾಮಗಾರಿ ಪುನಃ ಆರಂಭಿಸಲು ಸಾಕಷ್ಟು ಕಾಲ ಹಿಡಿಯಿತು’ ಎಂದು ಹೇಳಿದರು.

ಅನುಮತಿ ಸಿಕ್ಕಿದೆ: ‘ಕಾಮಗಾರಿಗೆ ಅಗತ್ಯವಿದ್ದ ಸ್ಫೋಟಕ ವಸ್ತುಗಳನ್ನು ಸಾಗಿಸಲು 2014ರಲ್ಲಿ ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಿಂದ ತೊಡಕಾಯಿತು. ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ. ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕಾನಿಕ್ಸ್ (ಎನ್‌ಐಆರ್‌ಎಂ) 2017ರ ಅಕ್ಟೋಬರ್‌ನಲ್ಲಿ ನೀಡಿದ ಶಿಫಾರಸ್ಸುಗಳಂತೆ ಹೆಚ್ಚುವರಿ ಕಾಮಗಾರಿ ಕೈಗೊಳ್ಳಬೇಕಾದ ಕಾರಣ ವಿಳಂಬವಾಗಿದೆ’ ಎಂದು ಹೇಳಿದರು.

‘ಮೂಲ ಯೋಜನೆಯ ಅಂದಾಜಿಗಿಂತ ವೆಚ್ಚ ಹೆಚ್ಚು ಆಗಿರುವುದರಿಂದ ಸರ್ಕಾರವು ₹ 127.76 ಕೋಟಿ ಮೊತ್ತಕ್ಕೆ 2021ರಲ್ಲಿ ಅನುಮೋದನೆ ನೀಡಿ ಪರಿಷ್ಕೃತ ಅಂದಾಜು ಪಟ್ಟಿ ಸಿದ್ಧಪಡಿಸಿದೆ. ಇದರ ಅನುಸಾರ ಸದ್ಯದಲ್ಲೇ ಟೆಂಡರ್‌ ಕರೆಯಲಾಗುತ್ತದೆ. ಬಂಗಾರಪೇಟೆ, -ಕೋಲಾರ, ಮಾಲೂರು ನಡುವೆ ಕೊಳವೆ ಮಾರ್ಗದ ಕಾಮಗಾರಿಗೆ ರೈಲ್ವೆ ಇಲಾಖೆಯಿಂದ ಅನುಮತಿ ಸಿಕ್ಕಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT