ಕೋಲಾರ: ಎತ್ತಿನಹೊಳೆ ಯೋಜನೆಗಾಗಿ ಭೂಸ್ವಾಧೀನ ಕಾಯ್ದೆಗೆ ಮಾಡಿರುವ ತಿದ್ದುಪಡಿಗೆ ರಾಷ್ಟ್ರಪತಿಯವರ ಅಂಕಿತ ದೊರೆತಿದ್ದು, ಯೋಜನೆ ಕಾಮಗಾರಿ ಶೀಘ್ರವೇ ಪೂರ್ಣಗೊಂಡು ಅವಿಭಜಿತ ಕೋಲಾರ ಜಿಲ್ಲೆಗೆ ನೀರು ಬರಲಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದ ರಾಜ್ಯಪಾಲರು ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ಈ ಹಿಂದೆ ಅಂಗೀಕಾರ ನೀಡಿದ್ದರು. ಇದೀಗ ರಾಷ್ಟ್ರಪತಿಯವರು ತಿದ್ದುಪಡಿ ಅಂಗೀಕರಿಸಿದ್ದಾರೆ. ಹೀಗಾಗಿ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಎದುರಾಗಿದ್ದ ಅಡೆತಡೆ ನಿವಾರಣೆಯಾಗಿವೆ ಎಂದು ರಮೇಶ್‌ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎತ್ತಿನಹೊಳೆ ಯೋಜನೆಯು ಕುಡಿಯುವ ನೀರಿನ ಯೋಜನೆಯಾಗಿರುವ ಕಾರಣ ಭೂಸ್ವಾಧೀನ ಕಾಯ್ದೆ ಕಲಂ 23 ಮತ್ತು 24ಕ್ಕೆ ತಿದ್ದುಪಡಿ ಮಾಡಿ ಜಿಲ್ಲಾಧಿಕಾರಿ, ಭೂಮಿ ಮಾಲೀಕರು ಮತ್ತು ಸರ್ಕಾರದ ಮಧ್ಯೆ ನೇರ ಮಾತುಕತೆ ನಡೆಸಿ ಜಮೀನಿಗೆ ಸಮಾಧಾನಕರ ಬೆಲೆ ನಿಗದಿಪಡಿಸಲಾಗಿತ್ತು. ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಲು ರಾಜ್ಯ ವಿಧಾನಸಭೆಯು ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ಮಸೂದೆ ಅಂಗೀಕರಿಸಿತ್ತು ಎಂದು ಹೇಳಿದ್ದಾರೆ.
ತಿದ್ದುಪಡಿ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ ನಂತರ ರಾಷ್ಟ್ರಪತಿಯವರ ಒಪ್ಪಿಗೆಗೆ ಕಳುಹಿಸಲಾಗಿತ್ತು. ಇದೀಗ ರಾಷ್ಟ್ರಪತಿಯವರ ಅಂಗೀಕಾರ ಪಡೆದು ರಾಜ್ಯ ಪತ್ರದಲ್ಲಿ (ಗೆಜೆಟ್) ಪ್ರಕಟಿಸಲಾಗಿದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಅಗತ್ಯವಿರುವ ನೀರಿನ ಸಂಗ್ರಹಣೆಗಾಗಿ ನಿರ್ಮಿಸಲಾಗುತ್ತಿರುವ ಬೈಲಗೊಂಡ್ಲು ಜಲಾಶಯಕ್ಕೆ ಸುಮಾರು 2,500 ಎಕರೆ ಭೂಸ್ವಾಧೀನ ಪ್ರಕ್ರಿಯೆ ಸದ್ಯದಲ್ಲೇ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ನೀಡುವ ಪರಿಹಾರ ಮೊತ್ತದಲ್ಲಿ ಭೂಮಿಯ ಮೌಲ್ಯದಲ್ಲಿ ಇದ್ದ ವ್ಯತ್ಯಾಸ ಮೌಲ್ಯವನ್ನು ಸರಿಪಡಿಸಿ ಎಲ್ಲಾ ರೈತರಿಗೂ ಏಕ ರೀತಿಯ ಪರಿಹಾರ ಕೊಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ರೈತರು ಸಹಕರಿಸಿ: ಕೆ.ಸಿ ವ್ಯಾಲಿ ಯೋಜನೆಯಡಿ ಈವರೆಗೆ 240 ಎಂಎಲ್‌ಡಿ ಒಳ ಹರಿವು ಇತ್ತು. ಕಳೆದ 10 ದಿನಗಳಿಂದ 280 ಎಂಎಲ್‌ಡಿ ನೀರು ಹರಿಸಲಾಗುತ್ತದೆ. ಮಾಲೂರು–ಶಿವಾರಪಟ್ಟಣ ಮಾರ್ಗ, ಕೋಲಾರ–ಹೊಳಲಿ ಮಾರ್ಗ ಮತ್ತು ನರಸಾಪುರ ಮಾರ್ಗದಲ್ಲಿ ಏಕಕಾಲದಲ್ಲಿ ನೀರು ಹರಿಬಿಡುತ್ತಿರುವುದರಿಂದ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಎಸ್.ಅಗ್ರಹಾರ ಕೆರೆಯ ನೀರಿನ ಸಂಗ್ರಹಣಾ ಸಾಮರ್ಥ್ಯ 390 ಎಂಸಿಎಫ್‌ಟಿ ಇದೆ. ಈ ಹಿಂದೆ ಮರಳು ಹಾಗೂ ಮಣ್ಣು ತೆಗೆದಿರುವುದರಿಂದ ಕೆರೆಯಲ್ಲಿ ಹಲವೆಡೆ ದೊಡ್ಡ ಗುಂಡಿಗಳಾಗಿದ್ದವು. ಕೆರೆಗೆ ಕಳೆದ 20 ದಿನಗಳಿಂದ ನೀರು ಬಂದಿದ್ದು, ಸುಮಾರು 100 ಎಂಸಿಎಫ್‌ಟಿಯಷ್ಟು ನೀರು ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ 200 ಎಂಸಿಎಫ್‌ಟಿ ನೀರು ಬರಬೇಕಿರುವ ಕಾರಣ ಕೆರೆ ಸಂಪೂರ್ಣ ಭರ್ತಿಯಾಗಲು ಸುಮಾರು ಒಂದೂವರೆ ತಿಂಗಳಿಗೂ ಹೆಚ್ಚು ಕಾಲಾವಕಾಶ ಬೇಕು. ಈ ಕೆರೆಯಿಂದ ಕೆಳ ಭಾಗದ ರೈತರು ಅಂದರೆ ಮುದುವಾಡಿ, ಜನ್ನಘಟ್ಟ, ಶಿಲ್ಲಪ್ಪನಹಳ್ಳಿ ಮತ್ತು ಆಲವಟ್ಟ ಮಾರ್ಗದವರು ತಾಳ್ಮೆಯಿಂದ ಇರಬೇಕು ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.