ಭಾನುವಾರ, ಸೆಪ್ಟೆಂಬರ್ 26, 2021
28 °C
ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ನಾರಾಯಣಸ್ವಾಮಿ ಕಿವಿಮಾತು

ಒತ್ತಡ ಮುಕ್ತ ಬದುಕಿಗೆ ಯೋಗ ದಾರಿದೀಪ: ಡಾ.ಎನ್.ಸಿ.ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕಾರ್ಯ ಒತ್ತಡದಿಂದಾಗಿ ಇತ್ತೀಚಿನ ದಿನಗಳಲ್ಲಿ ಶಿಕ್ಷಕರ, ಸರ್ಕಾರಿ ನೌಕರರ ಆರೋಗ್ಯ ಹಾಳಾಗುತ್ತಿದೆ. ಶಿಕ್ಷಕರಲ್ಲಿ ರಕ್ತದೊತ್ತಡ, ಮಧುಮೇಹದ ಜತೆಗೆ ಮಾನಸಿಕ ಒತ್ತಡ ಹೆಚ್ಚುತ್ತಿದೆ’ ಎಂದು ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇಲ್ಲಿ ಗುರುವಾರ ಪ್ರೌಢ ಶಾಲಾ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ‘ಕಾರ್ಯ ಒತ್ತಡದ ನಡುವೆ ಶಿಕ್ಷಕರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಅನವಶ್ಯಕ ವಿಷಯ ಮುಂದಿಟ್ಟುಕೊಂಡು, ಅನಗತ್ಯ ಆಸೆಗಳು ಕೈಗೆಟುಕದ ಸಂದರ್ಭದಲ್ಲಿ ಮಾನಸಿಕವಾಗಿ ಹಿಂಸೆ ಅನುಭವಿಸುವ ಒತ್ತಡದಲ್ಲಿ ನೌಕರರು ಜೀವನ ಸಾಗಿಸುವಂತಾಗಿದೆ. ಇದರಿಂದ ಖಿನ್ನತೆ ಉಲ್ಬಣಗೊಳ್ಳುತ್ತಿದೆ. ನೆಮ್ಮದಿಯ ಜೀವನಕ್ಕಾಗಿ ಪ್ರೀತಿ ವಿಶ್ವಾಸ ಬಿಟ್ಟು ಸಂಶಯದ ಹುತ್ತದಲ್ಲಿ ಇರುವಷ್ಟು ದಿನವೂ ಖಿನ್ನರಾಗಿ ಬದುಕುತ್ತೇವೆ. ಇದು ಸರಿಯಲ್ಲ’ ಎಂದರು.

‘ಜೀವನ ಮಟ್ಟ ಉತ್ತಮ ಸ್ಥಿತಿಗೆ ಮರಳುವಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿ ಇರಬೇಕು. ಒತ್ತಡ ಮುಕ್ತ ಬದುಕು ರೂಪಿಸಿಕೊಳ್ಳಲು ಯೋಗಾಭ್ಯಾಸ ದಾರಿದೀಪ. ಯೋಗ ಎಂಬುದು ಕೇವಲ ಭೌತಿಕ ಕ್ರಿಯೆಯಲ್ಲ. ಅದು ಜೀವನದ ಪರಿಪೂರ್ಣತೆಯ ದಾರಿ. ಯೋಗದಲ್ಲಿ ಮಾನವನನ್ನು ನಿರೋಗಿಯಾಗಿಸುವ ಶಕ್ತಿ ಅಡಗಿದೆ’ ಎಂದು ಸಲಹೆ ನೀಡಿದರು.

ಮಾನಸಿಕ ಒತ್ತಡ: ‘ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಕಷ್ಟು ಮಂದಿ ರೋಗ-ಗಳಿಂದ ನರಳುತ್ತಿದ್ದು, ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕೆಲವರು ಆರ್ಥಿಕವಾಗಿ, ಸಾಮಾಜಿಕವಾಗಿ, ದೈಹಿಕವಾಗಿ ಆಕಸ್ಮಿಕ ಅಪಘಾತಗಳಿಂದ ಜೀವನಶೈಲಿ ಬದಲಿಸಿಕೊಳ್ಳುವ ಮೂಲಕ ಹುಟ್ಟು ಕಾಯಿಲೆಗಳಿಗೆ ಒಳಗಾಗಿ ಅಸ್ವಸ್ಥರಾಗುತ್ತಿದ್ದಾರೆ’ ಎಂದು ಮನೋವೈದ್ಯ ಡಾ.ವಿಜೇತ ದಾಸ್‌ ವಿವರಿಸಿದರು.

‘ಮದ್ಯವ್ಯಸನ, ಮಾದಕ ವ್ಯಸನ, ಜೂಜಾಟದ ದಾಸರಾಗಿ ಬಲಿಯಾಗುತ್ತಿದ್ದಾರೆ. ಸಾಮಾನ್ಯವಾಗಿ ಇವರ ಜ್ಞಾಪಕ ಶಕ್ತಿ ಕುಂದುತ್ತದೆ, ಕಣ್ಣು ಕಾಣಿಸುವುದಿಲ್ಲ ಮತ್ತು ಕಿವಿ ಕೇಳಿಸುವುದಿಲ್ಲ. ಜತೆಗೆ ಅವರಲ್ಲಿ ಹೆಚ್ಚು ಭಯ, ಆತಂಕ, ವರ್ತನೆಯಲ್ಲಿ ಬದಲಾವಣೆ ಕಾಣಬಹುದು. ಯಾವುದೇ ಒತ್ತಡದಿಂದ ಪಾರಾಗಲು ಸಮಸ್ಯೆಗಳನ್ನು ಕುಟುಂಬ ಸದಸ್ಯರಲ್ಲಿ, ಸ್ನೇಹಿತರಲ್ಲಿ, ಮನೋವೈದ್ಯರಲ್ಲಿ ಹೇಳಿಕೊಂಡು ಪರಿಹರಿಸಿಕೊಳ್ಳಬಹುದು’ ಎಂದರು.

ಸಮಾಜಮುಖಿಯಾಗಿ: ‘ಮಾನಸಿಕ ಅನಾರೋಗ್ಯಕ್ಕೆ ತುತ್ತಾಗುವವರು ದ್ವೇಷ, ಸ್ವಾರ್ಥ, ದುರಾಸೆ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಇವರಿಗೆ ಸಮಾಜದಲ್ಲಿ ಯಾವುದೇ ಬೆಲೆ ಇರುವುದಿಲ್ಲ. ವ್ಯಸನದಿಂದ ಮುಕ್ತರಾಗಲು ಪ್ರೀತಿ, ವಿಶ್ವಾಸ, ಸಹನೆ ನೆಮ್ಮದಿ ಕಂಡುಕೊಂಡು ಸಮಾಜಮುಖಿಯಾಗಿ ಬದುಕಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ರಾಮಕೃಷ್ಣಪ್ಪ ತಿಳಿಸಿದರು.

ಕಾರ್ಯಕ್ರಮದ ಸಂಘಟಕ ಶ್ರೀನಾಥ್, ಶಿಕ್ಷಣ ಸಂಯೋಜಕರಾದ ಆರ್‌.ಶ್ರೀನಿವಾಸನ್, ಮುನಿರತ್ನಯ್ಯಶೆಟ್ಟಿ, ರಾಘವೇಂದ್ರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಮುರಳಿಮೋಹನ್, ಜಿಲ್ಲಾ ಆಶಾ ಸಂಯೋಜಕಿ ಗಿರಿಜಾ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.