ಶುಕ್ರವಾರ, ಅಕ್ಟೋಬರ್ 7, 2022
28 °C
ನಿಟ್ಟಾಲಿ ಕ್ರಾಸ್‌ನಿಂದ ವೀರಾಪುರ ಕ್ರಾಸ್‌ ತನಕ ನಡೆಯುತ್ತಲೇ ಇವೆ ಅವಘಡ

‘ಅಪಾಯಕಾರಿ’ ರಸ್ತೆಯಲ್ಲಿ 12 ಅಪಘಾತ, 13 ಸಾವು

ಮಂಜುನಾಥ ಅಂಗಡಿ Updated:

ಅಕ್ಷರ ಗಾತ್ರ : | |

ಕುಕನೂರು: ತಾಲ್ಲೂಕಿನ ಭಾನಾಪುರ ಬಳಿ ಶನಿವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐದು ಜನ ಸದಸ್ಯರು ಮೃತಪಟ್ಟ ಬಳಿಕ ಆ ರಸ್ತೆಯ ಸುರಕ್ಷತೆ, ಚಾಲಕರ ಅಜಾಗರೂಕತೆ ಮತ್ತು ಅತಿಯಾದ ವೇಗದ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿವೆ.   

ತಾಲ್ಲೂಕಿನ ನಿಟ್ಟಾಲಿ ಕ್ರಾಸ್‌ನಿಂದ ವೀರಾಪುರ ಕ್ರಾಸ್‌ ತನಕದ ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಅಪಘಾತಗಳು ನಡೆಯುತ್ತಲೇ ಇವೆ. ಶನಿವಾರ ನಡೆದ ದುರಂತ ಕೂಡ ಇದೇ ವ್ಯಾಪ್ತಿಯಲ್ಲಿದೆ.

ಈ ವ್ಯಾಪ್ತಿಯ ರಸ್ತೆಯಲ್ಲಿ ಹಿಂದಿನ ಎರಡೂವರೆ ವರ್ಷಗಳ ಅವಧಿಯಲ್ಲಿ (2020ರಿಂದ 2022ರ ಇದುವರೆಗೆ) 12 ಅಪಘಾತಗಳು ಸಂಭವಿಸಿದ್ದು 13 ಜನ ಮೃತಪಟ್ಟಿದ್ದಾರೆ. 15 ಜನ ಗಾಯಗೊಂಡಿದ್ದಾರೆ. ಅಪಘಾತಕ್ಕೀಡಾದ ಬಹಳಷ್ಟು ಜನರ ಪೈಕಿ ಬಹುತೇಕರು ಈಗಲೂ ಅಂಗವಿಕಲರಾಗಿಯೇ ಜೀವನ ಸಾಗಿಸುತ್ತಿದ್ದಾರೆ.

2020ರ ಅಕ್ಟೋಬರ್‌ನಲ್ಲಿ ನಿಟ್ಟಾಲಿ ಕ್ರಾಸ್ ಬಳಿ ಟೆಂಪೊ ಮರಕ್ಕೆ ಡಿಕ್ಕಿ ಹೊಡೆದು ಐದು ಜನ ಮೃತಪಟ್ಟಿದ್ದರು. ಆ ಘಟನೆ ಜನರ ಮನದಿಂದ ಮಾಸುವ ಮೊದಲೇ ಮತ್ತೊಂದು ದುರ್ಘಟನೆ ಈಗ ನಡೆದಿದ್ದು ರಸ್ತೆ ಸುರಕ್ಷತೆಯ ವಿಷಯ ಮುನ್ನೆಲೆಗೆ ಬರಲು ಕಾರಣವಾಗಿದೆ. ಇಷ್ಟೆಲ್ಲಾ ಆದರೂ ಹೆದ್ದಾರಿ ಪ್ರಾಧಿಕಾರ ಏನೂ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಈ ಮಾರ್ಗದಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಓಡಾಟ ಹೆಚ್ಚಾಗುತ್ತಿದೆ. ಅಪಘಾತ ತಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ಮಾರ್ಪಾಡು ಆಗಬೇಕು. ‘ಅಪಘಾತ ವಲಯ’ ಎಂದು ನಿರ್ಮಾಣ ಮಾಡಿ ಎಚ್ಚರಿಕಾ ಫಲಕಗಳನ್ನು ಅಳವಡಿಸಿಕೊಳ್ಳಬೇಕು. ಚಾಲಕರು ಕೂಡ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು ಎನ್ನುತ್ತಾರೆ’ ಕುಕನೂರು ಪಟ್ಟಣದ ನಿವಾಸಿ ಮಂಜುನಾಥ ನಾಡಗೌಡರ.

ಪೊಲೀಸರ ಶ್ರಮ: ಅಪಘಾತಗಳ ಸಂಖ್ಯೆ ತಗ್ಗಿಸಲು ಪೊಲೀಸ್‌ ಇಲಾಖೆ ಶ್ರಮಿಸುತ್ತಿದ್ದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಂಬಂಧಿಸಿದ ಅಧಿಕಾರಿಗಳಿಗೆ ’ಬ್ಲ್ಯಾಕ್‌ ಸ್ಪಾಟ್‌‘ ಗುರುತಿಸುವಂತೆ ಹೇಳಿ ಎರಡು ವರ್ಷಗಳೇ ಕಳೆದಿವೆ.

‘ಅಪಘಾತ ಸಂಭವಿಸುವ ಮಾರ್ಗದಲ್ಲಿ ಪ್ರತಿಫಲಕ, ಸೂಚನಾ ಫಲಕ, ಹಂಪ್ಸ್‌ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಇಲಾಖೆಗೆ ತಿಳಿಸಲಾಗಿದೆ.’ ಎಂದು ಕುಕನೂರು ಪಿಎಸ್‌ಐ ಡಾಕೇಶ್‌ ತಿಳಿಸಿದರು.

ಒಂದೂವರೆ ವರ್ಷದ ಹಿಂದೆಯೂ ನಡೆದಿತ್ತು ಅಪಘಾತ

ಅಪಘಾತ ವಲಯವೆಂದು ಗುರುತಿಸಲು ಆಗ್ರಹ

ಚಾಲಕರ ಅತಿಯಾದ ವೇಗದ ಬಗ್ಗೆ ಜನರ ಬೇಸರ

ರಾಷ್ಟ್ರೀಯ ಹೆದ್ದಾರಿ ಮಾರ್ಗಸೂಚಿಯಂತೆ ರಸ್ತೆ ನಿರ್ಮಿಸಲಾಗಿದೆ. ನಿಟ್ಟಾಲಿ ಕ್ರಾಸ್ ಹಾಗೂ ವೀರಾಪುರ ಕ್ರಾಸ್ ನಡುವೆ ಬ್ಲಾಕ್ ಸ್ಪಾಟ್ ನಿರ್ಮಿಸಲು ಬರುವುದಿಲ್ಲ.
ಗಿರೀಶ್ ಮುಂಡಾದ
ಎಂಜಿನಿಯರ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು