ಶುಕ್ರವಾರ, ಏಪ್ರಿಲ್ 10, 2020
19 °C
ಅಕ್ರಮ ಪಡಿತರದಾರರ ವಿರುದ್ಧ ಕಠಿಣ ಕ್ರಮ

ಕೊಪ್ಪಳ: 1435 ಪಡಿತರ ಚೀಟಿ ರದ್ದು...!

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಅಕ್ರಮವಾಗಿ ಪಡಿತರ ಚೀಟಿ ಪಡೆದ ಫಲಾನುಭವಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಿಲ್ಲೆಯಾದ್ಯಂತ ಪತ್ತೆಗೆ ತಂಡ ನಿಯೋಜಿಸಿದೆ.

ಪಡಿತರ ಚೀಟಿ ಪಡೆಯುವ ಮಾನದಂಡ ಕುರಿತು ಜಿಲ್ಲಾಡಳಿತ ಸ್ಪಷ್ಟವಾದ ನಿರ್ದೇಶನ ನೀಡಿದ್ದರೂ ಅಕ್ರಮ ಚೀಟಿ ಹೊಂದಿರುವವರ ಸಂಖ್ಯೆ ಹೆಚ್ಚಾಗಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಈ ಕುರಿತು ಗಂಭೀರ ಕ್ರಮಗಳನ್ನು ಕೈಗೊಂಡು ಪತ್ತೆ ಹಚ್ಚುವಂತೆ ನಿರ್ದೇಶನ ನೀಡಲಾಗಿದೆ. ಈ ಅಕ್ರಮಕ್ಕೆ ಕೈಜೋಡಿಸಿದಲ್ಲಿ ಅಂಗಡಿ ಮಾನ್ಯತೆಯನ್ನು ರದ್ದು ಮಾಡುವುದಾಗಿ ಸೂಚನೆ ನೀಡಿದೆ.

ಜಿಲ್ಲೆಯಲ್ಲಿ ಅಕ್ಟೋಬರ್ ಅಂತ್ಯಕ್ಕೆ 36,688 ಅಂತ್ಯೋದಯ, 2,90,512 ಎಪಿಎಲ್ ಆದ್ಯತಾ ಪಡಿತರ ಚೀಟಿದಾರರು ಸೇರಿ 3,27,200 ಕುಟುಂಬಗಳು ಇವೆ. ಜೊತೆಗೆ 11,787 ಎಪಿಎಲ್ ಚೀಟಿ ನೀಡಲಾಗಿದೆ. ಉದ್ಯೋಗಸ್ಥರು, ಆರ್ಥಿಕವಾಗಿ ಸದೃಢರಾಗಿರುವವರು, ಜಂಟಿ ಕುಟುಂಬಗಳನ್ನು ಕೃತಕವಾಗಿ ವಿಭಾಗಿಸಿಕೊಂಡು ಏಕ ವ್ಯಕ್ತಿ ಹೆಸರಿನಲ್ಲಿ ಚೀಟಿ ಪಡೆದಿರುವ ಕಾರಣದಿಂದ ಕಾರ್ಡ್‌ಗಳ ಸಂಖ್ಯೆ ಹೆಚ್ಚಾಗಿದ್ದು, ಆಹಾರ ವಿತರಣೆ ಸಂಬಂಧಿಸಿದ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಪಡಿತರ ಚೀಟಿ ರದ್ದು: ಆಗಸ್ಟ್ ತಿಂಗಳಿಂದ ಡಿಸೆಂಬರ್‌ ಅಂತ್ಯದವರೆಗೆ 1435 ಪಡಿತರ ಚೀಟಿ ರದ್ದು ಮಾಡಲಾಗಿದೆ. 766 ಚೀಟಿ ರದ್ದಾಗುವ ಮೂಲಕ ಗಂಗಾವತಿ ಮೊದಲ ಸ್ಥಾನದಲ್ಲಿ ಇದ್ದರೆ, ಕುಷ್ಟಗಿ 124 ಕೊನೆಯ ಸ್ಥಾನದಲ್ಲಿದೆ. ಒಟ್ಟಾರೆ ಆಹಾರ ವಿತರಣೆ ಸೇರಿದಂತೆ ಜಿಲ್ಲೆ ರಾಜ್ಯದಲ್ಲಿ 8ನೇ ಸ್ಥಾನದಲ್ಲಿದೆ.

ಈ ಅಕ್ರಮಕ್ಕೆ ಕಾರಣವೇನು?: ಪಡಿತರ ಚೀಟಿ ಪಡೆಯಲು ಇಲಾಖೆ ಕೇಳುವ ದಾಖಲೆಗಳನ್ನು ಮರೆಮಾಚಿ ಖಾಸಗಿ ಅವರ ಮೂಲಕ ಕಂಪ್ಯೂಟರ್‌ನಲ್ಲಿ ಆನ್‌ಲೈನ್ ದಾಖಲೆ ರೂಪಿಸಿ ಇಲಾಖೆಗೆ ಸಲ್ಲಿಸಿ ಕಾರ್ಡ್ ಪಡೆದುಕೊಳ್ಳುತ್ತಾರೆ. ಇದರಲ್ಲಿ ಮಧ್ಯವರ್ತಿಗಳ ಹಾವಳಿಯೂ ಕಾರಣವಾಗಿದ್ದು, ಅರ್ಹ ಬಡವರು ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬಂತೆ ರೇಶನ್ ಪಡೆದವರು, ನಂತರ ಬರುವವರಿಗೆ ದಾಸ್ತಾನು ಬಂದಿಲ್ಲ ಎನ್ನುತ್ತಾರೆ.

ಇನ್ನೂ ಒಂದು ಅಕ್ರಮ ನಿಜಕ್ಕೂ ಸರ್ಕಾರಕ್ಕೆ ಸವಾಲಾಗಿದೆ. ಅರ್ಹರು ಚೀಟಿ ಮೂಲಕ ಪಡೆದ ಪಡಿತರವನ್ನು ವಿಶೇಷವಾಗಿ ಅಕ್ಕಿಯನ್ನು ಕಡಿಮೆ ಬೆಲೆಗೆ ಬೇರೆಯವರಿಗೆ ಮಾರಾಟ ಮಾಡಿ ಯೋಜನೆಯ ಉದ್ದೇಶವನ್ನು ಹಾಳು ಮಾಡುತ್ತಿದ್ದಾರೆ. ಹಸಿವಿನಿಂದ ಯಾರೂ ಸಾಯಬಾರದು ಎಂದು ನೀಡಿದರೆ ಅದನ್ನು ಮಾರಿಕೊಂಡು ಇತರೆ ಕೆಲಸಕ್ಕೆ ಬಳಸಿಕೊಳ್ಳುವುದು ಅಕ್ಷ್ಯಮ್ಯ ಎನ್ನುತ್ತಾರೆ ಕೆಲವರು.

ಎಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ವ್ಯಕ್ತಿಗೆ 7 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತದೆ. ಬಿಪಿಎಲ್‌ ಕಾರ್ಡ್‌ದಾರರಿಗೆ ಕೆಜಿಗೆ 15 ರಂತೆ ಮಾರಾಟ ಮಾಡಲಾಗುತ್ತದೆ. ಪಡಿತರದಲ್ಲಿ ಅಕ್ಕಿ ಜೊತೆಗೆ ಜೋಳ, ರಾಗಿ, ತೊಗರಿ ಬೇಳೆ, ಅಡುಗೆ ಎಣ್ಣೆ ವಿತರಿಸಬೇಕು ಎಂಬ ಬೇಡಿಕೆ ಇದ್ದರೂ ಅದನ್ನು ಪೂರೈಸಲು ಸರ್ಕಾರಕ್ಕೆ ಆಗುತ್ತಿಲ್ಲ. ಅಲ್ಲದೆ ಜೋಳವನ್ನು ಇಲಾಖೆ ಮಾನದಂಡ ಅನುಸಾರವಾಗಿ ರೈತರು ಮಾರಾಟಕ್ಕೆ ಉತ್ಸಾಹ ತೋರಿಸುತ್ತಿಲ್ಲ. ಇದರ ಪರಿಣಾಮ ಅಕ್ಕಿಯನ್ನು ಮಾತ್ರ ನೀಡಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು