ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅವಿಭಜಿತ ಗಂಗಾವತಿ: 857 ಶಿಕ್ಷಕರ ಹುದ್ದೆಗಳು ಖಾಲಿ

ಗುಣಮಟ್ಟದ ಶಿಕ್ಷಣಕ್ಕೆ ಪೆಟ್ಟು; ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲೂ ಹಿನ್ನಡೆ
Published : 7 ಜೂನ್ 2024, 0:53 IST
Last Updated : 9 ಜೂನ್ 2024, 6:09 IST
ಫಾಲೋ ಮಾಡಿ
Comments

ಗಂಗಾವತಿ: ಅವಿಭಜಿತ ಗಂಗಾವತಿ ತಾಲ್ಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪಾರುಪತ್ಯ ಮೆರೆಯುತ್ತಿದ್ದರೆ, ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರುಸುತ್ತಿವೆ.

ಅವಿಭಜಿತ ಗಂಗಾವತಿ ತಾಲ್ಲೂಕಿನ (ಗಂಗಾವತಿ, ಕನಕಗಿರಿ, ಕಾರಟಗಿ) ಸದ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 171, ಪ್ರೌಢಶಾಲೆಗಳಲ್ಲಿ 686 ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದಂತಾಗಿದೆ ಎಂಬ ಆತಂಕ ಪಾಲಕರಲ್ಲಿದೆ.

ಮೂರು ತಾಲ್ಲೂಕುಗಳಲ್ಲಿ ಒಟ್ಟು 135 ಅನುದಾನರಹಿತ (ಪ್ರಾಥಮಿಕ, ಪ್ರೌಢ), 25 ಅನುದಾನ ಸಹಿತ ಶಾಲೆ, 357 ಸರ್ಕಾರಿ ಶಾಲೆ, 9 ವಸತಿ ಶಾಲೆ, ಅಲ್ಪಸಂಖ್ಯಾತರ ಇಲಾಖೆಯ 3 ಮೌಲಾನಾ ಆಜಾದ್ ವಸತಿ ಶಾಲೆಗಳಿವೆ. ಸದ್ಯ ಅನುದಾನ ಸಹಿತ ಮತ್ತು ಸರ್ಕಾರಿ ಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ.

310 ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 1,823 ಶಿಕ್ಷಕರ ಮಂಜೂರಾತಿ ಹುದ್ದೆಗಳಿದ್ದು, 1,137 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 47 ಪ್ರೌಢಶಾಲೆಗಳಲ್ಲಿ 391 ಶಿಕ್ಷಕರ ಮಂಜೂರಾತಿ ಹುದ್ದೆಗಳಿದ್ದು, 220 ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರ ಖಾಲಿ ಹುದ್ದೆಗಳು:

ಮಕ್ಕಳಿಗೆ ಆರಂಭಿಕ ಹಂತದ ಶಿಕ್ಷಣ ತುಂಬ ಮುಖ್ಯವಿದ್ದು, ಅಖಂಡ ತಾಲ್ಲೂಕಿನ ಪ್ರಾಥಮಿಕ ಶಾಲೆಗಳಲ್ಲಿ 43 ಹಿರಿಯ ಮುಖ್ಯಶಿಕ್ಷಕರು, 37 ಮುಖ್ಯ ಶಿಕ್ಷಕರು, ಪ್ರಾಥಮಿಕ ಶಾಲೆಯ 238 ಶಿಕ್ಷಕರು, 354 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು, 14 ಗ್ರೇಡ್-2 ದೈಹಿಕ ಶಿಕ್ಷಕರು, 1 ಚಿತ್ರಕಲಾ ಶಿಕ್ಷಕರ ಹುದ್ದೆಗಳು ಖಾಲಿಯಿವೆ.

ಪ್ರೌಢ ಶಾಲಾ ಶಿಕ್ಷಕರ ಖಾಲಿ ಹುದ್ದೆಗಳು:

ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಪ್ರೌಢಶಾಲಾ ಶಿಕ್ಷಣ ತುಂಬ ಅಗತ್ಯ. ಆದರಿಲ್ಲಿ ಸಂಪನ್ಮೂಲ ಶಿಕ್ಷಕರ ಕೊರತೆಯಿಂದ ಕೆಲ ವರ್ಷಗಳಿಂದ ಫಲಿತಾಂಶ ಇಳಿಮುಖವಾಗುತ್ತಿದೆ. ಸದ್ಯ ಪ್ರೌಢಶಾಲೆಗಳಲ್ಲಿ ಕನ್ನಡ ಕಲಾ-28, ಕನ್ನಡ-47, ಇಂಗ್ಲಿಷ್-26, ಹಿಂದಿ-23, ಪಿಸಿಎಂ (ಕನ್ನಡ) 24, ಪಿಸಿಎಂ (ಉರ್ದು)-1, ಸಿಬಿಝಡ್ (ಕನ್ನಡ)-21, ಸಿಬಿಝಡ್ (ಇಂಗ್ಲೀಷ್) -1 ಹುದ್ದೆ ಖಾಲಿಯಿವೆ.

ಫಲಿತಾಂಶ ಏರುಪೇರು: ಕಳೆದ ವರ್ಷ ತಾಲ್ಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 92ರಷ್ಟು ಗಳಿಸಿ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿತ್ತು. ಆದರೆ ಈ ಬಾರಿಯ ಫಲಿತಾಂಶ ಶೇ 63.28 ರಷ್ಟು ಗಳಿಸಿ ಪಡೆದು ಜಿಲ್ಲೆಗೆ ಮೂರನೇ ಸ್ಥಾನ ಪಡೆದಿದ್ದು, ಫಲಿತಾಂಶ ಹಿನ್ನಡೆಗೆ ಸಂಪನ್ಮೂಲ ಶಿಕ್ಷಕರ ಕೊರತೆ ಸಹ ಮೂಲ ಕಾರಣವಾಗಿದೆ. ಹಾಗಾಗಿ ಪಾಲಕರು ಸೂಕ್ತ ಶಿಕ್ಷಕರ ನೇಮಕಾತಿಗೆ ಆಗ್ರಹ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT