* ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಗೌರವ ಲಭಿಸಿದೆ. ಈ ಬಗ್ಗೆ ಹೇಳಿ.
ಹಿಂದೆ ನಡೆದ ಸಮ್ಮೇಳನಗಳಲ್ಲಿ ಅನೇಕ ಘಟಾನುಘಟಿಗಳು ಅಧ್ಯಕ್ಷರಾಗಿದ್ದಾರೆ. ಇವರೆಲ್ಲರ ಮುಂದೆ ನಾನು ಸಣ್ಣವನು ಎನಿಸುತ್ತಿದೆ. ಅಧ್ಯಕ್ಷ ಸ್ಥಾನವೆನ್ನುವುದು ದೊಡ್ಡ ಗೌರವ. ಪರಿಷತ್ತು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದು ಅದಕ್ಕೆ ಗೌರವ ಕೊಡುವ ಜವಾಬ್ದಾರಿ ನನ್ನದು. ಅಧ್ಯಕ್ಷ ಸ್ಥಾನ ಖುಷಿ ನೀಡಿದೆ.
* ತಂತ್ರಜ್ಞಾನ ಮುಂದುವರಿದ ಈ ದಿನಗಳಲ್ಲಿ ಕನ್ನಡದ ಅಳಿವು, ಉಳಿವಿನ ಪ್ರಶ್ನೆ ಎದುರಾಗಿದೆಯಲ್ಲ?
ಅಂಗೈಯಲ್ಲಿಯೇ ಜಗತ್ತು ನೋಡುವ ಅವಕಾಶವಿದ್ದು, ಸದ್ಬಳಕೆಗಿಂತ ದುರಪಯೋಗವೇ ಹೆಚ್ಚಾಗುತ್ತಿದೆ. ತಂತ್ರಜ್ಞಾನ ಬಳಸಿಕೊಂಡು ಕನ್ನಡವನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಿತ್ತು. ಯುವಜನತೆ ಹಾಗೂ ಬರಹಗಾರರಲ್ಲಿ ಓದುವ ಹವ್ಯಾಸ ಕಡಿಮೆಯಾಗಿದ್ದು ಲೇಖಕ ತಾನು ಬರೆದಿದ್ದೇ ಶ್ರೇಷ್ಠ ಎನ್ನುವ ಭ್ರಮಾಲೋಕ ಸೃಷ್ಟಿಸಿಕೊಂಡಿದ್ದಾನೆ. ಸಣ್ಣದೊಂದು ಕವಿತೆ ಬರೆದರೂ ಎಲ್ಲರೂ ಓದಬೇಕು ಎಂದು ಬಯಸುವ ಬರಹಗಾರ ಇನ್ನೊಬ್ಬರು ಬರೆದದ್ದನ್ನು ತಾನು ಓದುತ್ತಿಲ್ಲ. ಓದು ಕಡಿಮೆಯಾದಾಗ ಭಾಷೆ ಅವನತಿಯತ್ತ ಸಾಗುತ್ತದೆ. ರಾಜ್ಯದಲ್ಲಿ ಪ್ರತಿವರ್ಷ ಬರುತ್ತಿರುವ ಸಾವಿರಾರು ಪುಸ್ತಕಗಳು ಮಾರಾಟವಾಗದೆ ಗ್ರಂಥಾಲಯಕ್ಕೆ ಸೀಮಿತವಾಗುತ್ತಿವೆ.
* ಕನ್ನಡ ಅನ್ನದ ಭಾಷೆಯಾಗಿ ಉಳಿದುಕೊಂಡಿದೆ ಎನಿಸುತ್ತಿದೆಯೇ?
ಕನ್ನಡ ವಿಷಯದಲ್ಲಿ ಪಿಎಚ್‌ಡಿ ಪಡೆದರೂ ಖಾಸಗಿ ಶಾಲೆಗಳಲ್ಲಿ ಮಾಸಿಕ ಏಳೆಂಟು ಸಾವಿರಕ್ಕೆ ಕೆಲಸ ಮಾಡಬೇಕಾದ ದುಸ್ಥಿತಿಯಿದೆ. ಅದೇ ವಿಜ್ಞಾನ ಹಾಗೂ ಗಣಿತ ವಿಷಯದ ಶಿಕ್ಷಕರಿಗೆ ಸಾಕಷ್ಟು ವೇತನ ಸಿಗುತ್ತದೆ. ಈ ತಾರತಮ್ಯ ಹೋಗಬೇಕು. ಈ ಕಾರಣದಿಂದಾಗಿ ಕನ್ನಡ ಅನ್ನದ ಭಾಷೆ ಎಂದು ನೆಚ್ಚಿಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಹತಾಶೆ ಸ್ಥಿತಿಗೆ ತಲುಪಿದ್ದಾರೆ.
* ಇದಕ್ಕೆ ಪರಿಹಾರವೇನು?
ಕನ್ನಡ ಮಾಧ್ಯಮ ಶಾಲೆಗಳನ್ನು ಸರ್ಕಾರ ಸಬಲೀಕರಣಗೊಳಿಸಬೇಕು. ಶಿಕ್ಷಣವೂ ಸಬಲೀಕರಣ ಆಗಬೇಕು.
* ನೈಜ ಕನ್ನಡ ಉಳಿದಿದ್ದು ಎಲ್ಲಿ ಎನಿಸುತ್ತದೆ?
ಗ್ರಾಮೀಣ ಪ್ರದೇಶಗಳಲ್ಲಿ. ಅವರಲ್ಲಿ ಜಾನಪದ ಸಾಹಿತ್ಯ ಪುಂಖಾನುಪುಂಖವಾಗಿ ಬರುತ್ತದೆ. ಬಯಲಾಟದಲ್ಲಿ ಕಠಿಣ ಪದಗಳನ್ನು ಸುಲಲಿತವಾಗಿ ಉಚ್ಛಾರ ಮಾಡುತ್ತಾರೆ. ಅವರಿಗೆ ಅಕ್ಷರ ಜ್ಞಾನವಿಲ್ಲವಷ್ಟೇ. ಆದರೆ ಅವರು ದಡ್ಡರಲ್ಲ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಟ್ಟೆ, ಪುಸ್ತಕ ಉಚಿತವಾಗಿ ಕೊಡುತ್ತಾರೆ. ಆದರೆ ಈ ಶಾಲೆಗಳಿಗಿಂತ ಇಂಗ್ಲಿಷ್ ಮಾಧ್ಯಮ ಶಾಲೆಗಳೇ ಭರ್ತಿಯಾಗುತ್ತಿವೆ.
* ರಾಜ್ಯದ ಭತ್ತದ ಕಣಜ ಗಂಗಾವತಿಯಲ್ಲಿ ಅನ್ನವೇ ವಿಷವಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ರೈತರ ಪರಿಸ್ಥಿತಿಯೇನು. ಇದರ ಬಗ್ಗೆ ಸಮ್ಮೇಳನ ಬೆಳಕು ಚೆಲ್ಲುವುದೇ?
ಹಸಿರು ಕ್ರಾಂತಿ ಪರಿಣಾಮದಿಂದ ಆಹಾರ ಉತ್ಪಾದನೆ ಹೆಚ್ಚಳವಾಯಿತು. ರೈತರು ಅಧಿಕ ಲಾಭ ಪಡೆಯಲು ವಿಜ್ಞಾನಿಗಳು ತಾಂತ್ರಿಕತೆ ಅಭಿವೃದ್ಧಿ ಪಡಿಸಿದರು. ಕಾಲಾನಂತರದಲ್ಲಿ ರಸಗೊಬ್ಬರ ಬಳಕೆ ವಿಪರೀತವಾಯಿತು. ನೀರಾವರಿ ಪ್ರದೇಶದಲ್ಲಿ ಭತ್ತದ ಬೆಳೆಗೆ ಹೆಚ್ಚು ನೀರು ನಿಲ್ಲಿಸುವ ಅಗತ್ಯವಿಲ್ಲದಿದ್ದರೂ ರೈತರು ಅತಿಯಾಗಿ ನೀರು ನಿಲ್ಲಿಸುತ್ತಿರುವ ಪರಿಣಾಮ ಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ಹಲವು ವರ್ಷಗಳು ಇದೇ ರೀತಿ ಮುಂದುವರಿದರೆ ಬರಡಾಗುತ್ತದೆ. ಇದೆಲ್ಲವನ್ನೂ ಅರಿತುಕೊಂಡೇ ಸಮ್ಮೇಳನದ ಅಧ್ಯಕ್ಷೀಯ ಭಾಷಣವನ್ನು ಸಂಪೂರ್ಣವಾಗಿ ರೈತರಿಗೆ ಅರ್ಪಿಸುತ್ತಿರುವೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ‘ಹೊನ್ನ ಬಿತ್ತೋಣು ಬಾರ’ ಪುಸ್ತಕ ಬರೆದಿದ್ದು ಸಮ್ಮೇಳನದಲ್ಲಿಯೇ ಲೋಕಾರ್ಪಣೆಗೊಳಿಸುವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.