ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ: ಸಂಸದ ಸಂಗಣ್ಣ ಕರಡಿ

ಮುನಿರಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಪ್ರಧಾನಿ ಶಂಕುಸ್ಥಾಪನೆ
Published 26 ಫೆಬ್ರುವರಿ 2024, 16:07 IST
Last Updated 26 ಫೆಬ್ರುವರಿ 2024, 16:07 IST
ಅಕ್ಷರ ಗಾತ್ರ

ಕೊಪ್ಪಳ: ‘ಹಿಂದಿನ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಈಗ ಇನ್ನಷ್ಟು ಕಾರ್ಯಗಳಿಗೆ ಚಾಲನೆ ನೀಡಿದ್ದು, ಅಭಿವೃದ್ಧಿಯ ಪಥ ನಿರಂತರವಾಗಿ ಸಾಗುತ್ತದೆ’ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ತಾಲ್ಲೂಕಿನ ಮುನಿರಾಬಾದ್ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಕೇಂದ್ರ ಸರ್ಕಾರದ ಅಮೃತ್ ಭಾರತ ರೈಲು ನಿಲ್ದಾಣಗಳ ಅಭಿವೃದ್ಧಿ ಯೋಜನೆಯಡಿ ಮುನಿರಾಬಾದ್‌ನಲ್ಲಿ ರೈಲು ನಿಲ್ದಾಣ ಪುನರ್‌ ಅಭಿವೃದ್ಧಿ ಮತ್ತು ಎಲ್‌.ಸಿ. 79ರ ಬಳಿ ಮೇಲ್ಸೇತುವ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಕಾರ್ಯಕ್ರಮಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.

ಸ್ಥಳೀಯವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಸಂಗಣ್ಣ ಕರಡಿ ‘ಗ್ಯಾರಂಟಿ ಯೋಜನೆಗಳಿಗೆ ರೈತರ ಹಾಗೂ ಸಾರ್ವಜನಿಕರ ತೆರಿಗೆ ಹಣವನ್ನು ಸರ್ಕಾರ ಉಚಿತವಾಗಿ ಹಂಚುತ್ತಿದ್ದಾರೆ‌. ಆದರೆ ಗ್ಯಾರಂಟಿ ಯೋಜನೆಗಳು ಅಭಿವೃದ್ಧಿ ಸಂಕೇತವಲ್ಲ ಎನ್ನುವುದನ್ನು ಜನ ಮನಗಾಣಬೇಕು. ಮೋದಿ ಬಗ್ಗೆ ಮಾತನಾಡುವುದಾದರೆ ಕೇಳಿ, ಕಂಡರೆಯದ ನಾಯಕ ಎಂದು ಜಗತ್ತು ಮಾತನಾಡುತ್ತದೆ. ಹಿಂದಿನ ಇತಿಹಾಸ ಮೆಲುಕು ಹಾಕಬೇಕು’ ಎಂದರು.

‘ಮೋದಿ ಪ್ರಧಾನಿ ಎಂದು ಮೊದಲ ಬಾರಿಗೆ ಘೋಷಣೆ ಮಾಡಿದಾಗ ಕಿಂಚಿತ್ತೂ ವಿರೋಧವಿಲ್ಲದೆ ಎಲ್ಲರೂ ಒಪ್ಪಿಕೊಂಡರು. ಜನವಿಟ್ಟುಕೊಂಡಿದ್ದ ನಿರೀಕ್ಷೆಯನ್ನು ಅವರು ಹುಸಿ ಮಾಡಲಿಲ್ಲ. ಎರಡು ಬಾರಿ ಸಂಸದನಾಗಿ ಆಯ್ಕೆ ಮಾಡುವ ಮೂಲಕ ನೀವೆಲ್ಲರೂ ಜವಾಬ್ದಾರಿ ಹೊರಿಸಿದ್ದೀರಿ. ರೈಲ್ವೆ ನಿಲ್ದಾಣದ ಆಧುನೀಕರಣಕ್ಕೆ ₹21 ಕೋಟಿ ನೀಡಲಾಗುತ್ತಿದೆ. ಮೇಲ್ಸೇತುವೆ ನಿರ್ಮಾಣವಾಗಬೇಕು ಎನ್ನುವುದು ಬಹಳಷ್ಟು ವರ್ಷಗಳ ಕನಸಾಗಿತ್ತು. ಆ ಕನಸಿಗೆ ಈಗ ಮುಹೂರ್ತ ಕೂಡಿ ಬಂದಿದೆ’ ಎಂದು ಹೇಳಿದರು. 

‘ಕೇಂದ್ರದ ಉಜ್ವಲ ಯೋಜನೆ ಸುಮಾರು 10 ಕೋಟೆ ಮಹಿಳೆಯರಿಗೆ ಅನುಕೂಲವಾಗಿದೆ. ಇತ್ತೀಚೆಗೆ ಜಾರಿಯಾದ ಪಿಎಂ ವಿಶ್ವಕರ್ಮ ಯೋಜನೆಯು ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದ್ದು, ಇದರಲ್ಲಿ ತರಬೇತಿ, ಟೂಲ್ಸ್ ಕಿಟ್ ಜೊತೆಗೆ ಸಾಲ ಸೌಲಭ್ಯ ಸಿಗಲಿದೆ. ಪಿಎಂ ಸ್ವನಿಧಿ ಯೋಜನೆ ಮೂಲಕ ಬೀದಿ ಬದಿ ವ್ಯಾಪಾರಸ್ಥರಿಗೆ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ’ ಎಂದರು.

ರೈಲ್ವೆ ಇಲಾಖೆಯ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ವಿಜಯಕುಮಾರ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಗುಂಗಾಡಿ, ಉಪಾಧ್ಯಕ್ಷ ನಹ್ಮರ್ ಅಲಿ, ಹುಲಿಗೆಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವೀರೇಶ, ಗ್ರಾ.ಪಂ.ಅಧ್ಯಕ್ಷ ಮಾರುತಿ ಬದ್ನಾಳ, ಉಪವಿಭಾಗಾಧಿಕಾದಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಮುಖಂಡರಾದ ಪ್ರಭು ಪಾಟೀಲ, ಪಾಲಕ್ಷಪ್ಪ, ಹೊಸಳ್ಳಿ, ನಾಗರತ್ನ ಪೂಜಾರ, ಗೋಪಾಲ, ರೈಲ್ವೆ ಅಧಿಕಾರಿಗಳಾದ ಪುಟ್ಟರಾಜ, ಶರ್ಮಾ ಪಾಲ್ಗೊಂಡಿದ್ದರು.

ಶಾಸಕ ಹಿಟ್ನಾಳ ವಿರುದ್ಧ ಗರಂ

ಇದೇ ವೇಳೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ಸಂಗಣ್ಣ ಕರಡಿ 2014–15ರಲ್ಲಿ ರೈಲ್ವೆ ಕೆಳಸೇತುವೆ ಕಾಮಗಾರಿ ಮಂಜೂರಾಗಿದ್ದರೂ ಭೂ ಸ್ವಾಧೀನಕ್ಕೆ ₹1.30 ಕೋಟಿ ರಾಜ್ಯ ಸರ್ಕಾರ ನೀಡಲಿಲ್ಲ. ಈ ನಿಟ್ಟಿನಲ್ಲಿ ಹಿಟ್ನಾಳ ಯಾವ ಪ್ರಯತ್ನವನ್ನೂ ಮಾಡಲಿಲ್ಲ ಎಂದರು. ‘ಶಾಸರಾದವರಿಗೆ ಜವಾಬ್ದಾರಿಯಿಲ್ಲವೇ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಹಿಟ್ನಾಳಗೆ ಸಣ್ಣ ಯೋಜನೆ ತರಲು ಆಗಲಿಲ್ಲ. ಹೀಗಾಗಿ ಪೂರ್ಣಗೊಂಡ ಕೆಲಸಗಳು ಲೋಕಾರ್ಪಣೆಯಾಗುತ್ತಿಲ್ಲ. ಇದು ತಲೆ ತಗ್ಗಿಸುವ ವಿಚಾರವಲ್ಲವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT