ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಲಬುರ್ಗಾ | ‘ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ಅಗತ್ಯ’

Published 18 ಮಾರ್ಚ್ 2024, 15:53 IST
Last Updated 18 ಮಾರ್ಚ್ 2024, 15:53 IST
ಅಕ್ಷರ ಗಾತ್ರ

ಯಲಬುರ್ಗಾ: ಸ್ಥಳೀಯ ಗವಿಸಿದ್ದೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ಹಾಗೂ ಏಡ್ಸ್ ನಿಯಂತ್ರಣ ಘಟಕ ಸಹಯೋಗದಲ್ಲಿ ರೆಡ್ ರಿಬ್ಬನ್ ಕ್ಲಬ್ ಉದ್ಘಾಟನೆ, ಹದಿಹರೆಯದವರ ಆರೋಗ್ಯ ಶಿಕ್ಷಣ ಮತ್ತು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಚಾಲನೆ ನೀಡಿದ ಸಂಸ್ಥೆಯ ಅಧ್ಯಕ್ಷ ರಂಗನಾಥ ವಲ್ಮಕೊಂಡಿ ಮಾತನಾಡಿ, ‘ಹದಿಹರೆಯದ ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣ ಅವಶ್ಯಕವಾಗಿದ್ದು, ಆರೋಗ್ಯ ಇಲಾಖೆಯಿಂದ ಹಾಗೂ ಪಾಲಕರಿಂದ ಸೂಕ್ತ ರೀತಿಯ ಮಾರ್ಗದರ್ಶನ ಹಾಗೂ ಮಾಹಿತಿ ನೀಡುವುದು ಸೂಕ್ತವಾಗಿದೆ’ ಎಂದು ಹೇಳಿದರು.

ಹದಿಹರೆಯದವರ ಆತ್ಮಸಮಾಲೋಚಕ ಶರಣಪ್ಪ ಉಪ್ಪಾರ ಮಾತನಾಡಿ, ‘ಏಡ್ಸ್ ಕಾಯಿಲೆ ಬರದಂತೆ ತಡೆಗಟ್ಟುವ ಕ್ರಮಗಳನ್ನು ಅನುಸರಿಸುವುದು ಮುಖ್ಯವಾಗಿದೆ. ರೋಗಗುಣಪಡಿಸಲು ಹರಸಾಹಸ ಪಡುವುದಕ್ಕಿಂತಲೂ ಬರದಂತೆ ಎಚ್ಚರವಹಿಸುವುದು ಹಾಗೂ ಹರಡದಂತೆ ಜಾಗೃತಿವಹಿಸುವುದು ಅಗತ್ಯವಾಗಿದೆ’ ಎಂದರು.

‘ಸರ್ಕಾರ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳ ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿರುವುದರಿಂದ ಏಡ್ಸ್ ಕಾಯಿಲೆ ಹರಡುವಿಕೆ ಪ್ರಮಾಣ ಕಡಿಮೆಯಾಗುತ್ತಿರುವುದು ಆಶಾದಾಯಕವಾಗಿದೆ. ಯುವಕ ಮತ್ತು ಯುವತಿಯರು ಗುಣಮಟ್ಟದ ಆಹಾರ ಸೇವಿಸುವುದು, ದುಶ್ಚಟಗಳಿಂದ ದೂರ ಉಳಿಯುವುದು, ನಿತ್ಯ ಯೋಗ ಮತ್ತು ಆರೋಗ್ಯ ಪೂರ್ಣ ಚಿಂತನೆಗಳತ್ತ ತೊಡಗಿಕೊಳ್ಳುವುದು ಮುಖ್ಯವಾಗಿದೆ’ ಎಂದರು.

ಏಡ್ಸ್‌ ಕುರಿತ ಪ್ರಬಂಧ ಹಾಗೂ ಆಶು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಐಸಿಟಿಸಿ ಪ್ರಯೋಗಶಾಲಾ ತಂತ್ರಜ್ಞ ಚಂದ್ರಶೇಖರ ನಾಯ್ಕ, ಸಿಬ್ಬಂದಿ ಪ್ರತಾಪ ಕಮ್ಮಾರ, ಶ್ವೇತಾ ವಕ್ಕಳದ, ಸಹನಾ ಅಕ್ಕಸಾಲಿ, ನೇತ್ರಾವತಿ ಕಂಬಳಿ, ಮಂಜುನಾಥ ಉದ್ದಾರ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT