ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ: ಒಣಗಿದ ಬೆಳೆ

Last Updated 6 ಜೂನ್ 2020, 11:46 IST
ಅಕ್ಷರ ಗಾತ್ರ

ಕುಕನೂರು: ಅಲ್ಪ ಪ್ರಮಾಣದಲ್ಲಿ ಸುರಿದ ಮಳೆಗೆ ಮಸಬಹಂಚಿನಾಳ, ಬೆಣಕಲ್, ಇಟಗಿ ಭಾಗದಲ್ಲಿ ಹೆಸರು, ಶೇಂಗಾ ಬೆಳೆಗಳ ಶೇ.10 ರಷ್ಟು ಮಾತ್ರ ಬಿತ್ತನೆಯಾಗಿದೆ. ಸದ್ಯ ಮೊಳಕೆಯೊಡೆದು ಸಸಿಯಾಗಿ ಹೊರಬರುತ್ತಿರುವ ಈ ಬೆಳೆಗಳು ಮಳೆ ಕೊರತೆಯಿಂದಾಗಿ ಒಣಗುತ್ತಿವೆ.

ಇನ್ನು ಕೆಲ ದಿನಗಳಲ್ಲಿ ಮಳೆಯಾಗದಿದ್ದರೆ ಬೆಳೆಗಳು ಒಣಗಿ ಹೋಗುವ ಆತಂಕ ರೈತರದ್ದು. ಕೆಲ ಭಾಗಗಳಲ್ಲಿ ಅರೆಬರೆಯಾಗಿರುವ ಹಸಿಯಲ್ಲಿಯೇ ಬಿತ್ತನೆ ಕಾರ್ಯ ನಡೆದಿರುವುದರಿಂದ ಬೀಜಗಳು ಮೊಳಕೆಯೊಡೆದಿಲ್ಲ. ಇನ್ನು ಬಹುತೇಕ ಪ್ರಮಾಣದಲ್ಲಿ ಬಿತ್ತನೆಯೇ ಆಗಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಈ ಭಾಗದಲ್ಲಿ ನಿರೀಕ್ಷಿತ ಮಳೆಯಾಗುತ್ತಿಲ್ಲ. ಕೊಳವೆ ಬಾವಿಗಳು ಬತ್ತಿ ಹೋಗಿವೆ. ಬಹುತೇಕ ಖುಷ್ಕಿ ಬೇಸಾಯವನ್ನೇ ಅವಲಂಬಿಸಿದ ಈ ಭಾಗದ ರೈತರು ಜುಲೈ ಅಂತ್ಯದ ವರೆಗೆ ಮಳೆಗಾಗಿ ಕಾದು ನೋಡುತ್ತಾರೆ. ಮಳೆಯ ಲಕ್ಷಣಗಳು ತೋರದಿದ್ದಾಗ ಅನಿವಾರ್ಯವಾಗಿ ಕುಟುಂಬ ಸಮೇತ ಗುಳೆ ಹೋಗುವುದು ಈ ಭಾಗದಲ್ಲಿ ಪ್ರತಿ ವರ್ಷ ಕಂಡು ಬರುತ್ತದೆ.

‘ಈ ಬಾರಿ ಸರಿಯಾದ ಸಮಯಕ್ಕೆ ಅಲ್ಪಸ್ವಲ್ಪ ಸುರಿದ ಮಳೆಗೆ ಉತ್ಸಾಹಗೊಂಡ ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ. ಸಮರ್ಪಕ ಮಳೆ ಇಲ್ಲದ ಕಾರಣ ಜಾನುವಾರುಗಳ ಹೊಟ್ಟು, ಮೇವಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ’ ಎಂದು ಮಸಬಹಂಚಿನಾಳ ಗ್ರಾಮದ ರೈತ ಮುಖಂಡ ಕಪ್ಪತಪ್ಪ ಅಂಗಡಿ ಹೇಳುತ್ತಾರೆ.

ಬಿತ್ತನೆ ಮಳೆಯಾಗದೇ ಬಹುತೇಕ ಶೇ.90 ರಷ್ಟು ಇನ್ನು ಬಿತ್ತನೆಯಾಗಿಲ್ಲ. ಮೋಡ ಬರತ್ತದೆ. ಆದರೆ ಮಳೆ ಬರದೆ ಗಾಳಿ ಮಾತ್ರ ಬಿಸುತ್ತಿದೆ. ರೈತರು ಬಿತ್ತನೆ ಬೀಜ, ಗೊಬ್ಬರಕ್ಕಾಗಿ ಸಾಲ ಮಾಡಿದ್ದು, ಬೆಳೆಗೆ ಮಳೆಯಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT