ಸಂಸ್ಕೃತ ಪ್ರಬುದ್ಧಗೊಳಿಸಿದ ಸತ್ಯಪ್ರಮೋದ ತೀರ್ಥರು

ಹನುಮಸಾಗರ: ‘ಭಾರತದ ಇತಿಹಾಸದಲ್ಲಿ ಮರೆಯಲಾಗದ ಸಂಸ್ಕೃತ ಪಾಂಡಿತ್ಯ ಪ್ರದರ್ಶಿಸಿ, ದೇಶದ ಉದ್ದಗಲಕ್ಕೂ ಸಂಚರಿಸಿ, ಭಾಷೆಯನ್ನು ಪ್ರಬುದ್ಧಗೊಳಿಸಿ, ಕಷ್ಟ ಕಾಲದಲ್ಲಿ ಅವರಿಗೆ ಸಂಸ್ಕೃತ ಪಂಡಿತರಿಗೆ ಸಹಾಯ ಮಾಡಿದವರೇ ಉತ್ತರಾದಿ ಮಠದ 41ನೇ ಯತಿಗಳಾಗಿ ಸತ್ಯಪ್ರಮೋದ ತೀರ್ಥರು’ ಎಂದು ಜ್ಞಾನದಾಯಿನಿ ಸಂಸ್ಕೃತ ಪಾಠ ಶಾಲೆಯ ಮುಖ್ಯಸ್ಥ ಪಂ.ಧಿರೇಂದ್ರಾಚಾರ ಪೂಜಾರ ಹೇಳಿದರು.
ಇಲ್ಲಿನ ಜ್ಞಾನದಾಯಿನಿ ಸಂಸ್ಕೃತ ಪಾಠ ಶಾಲೆಯಲ್ಲಿ ಭಾನುವಾರ ನಡೆದ ಸತ್ಯಪ್ರಮೋದ ತೀರ್ಥರ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದರು.
ದ್ವೈತ ವೇದಾಂತ ಪ್ರತಿಪಾದಕ ಮಧ್ವಾಚಾರ್ಯರ ತತ್ವಗಳನ್ನು ಜಗತ್ತಿನ ಉದ್ದಗಲಕ್ಕೂ ಪಸರಿಸಿ ಅನೇಕ ಜನರಿಗೆ ಜ್ಞಾನದ ರಸದೌತಣ ಉಣಬಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸತತ 50 ವರ್ಷಗಳ ಕಾಲ ಮೂಲ ರಾಮ ದೇವರ ಪೂಜೆ ಕೈಗೊಂಡು ಅತಿ ಹಿಂದುಳಿದ ಗ್ರಾಮೀಣ ಭಾಗದಲ್ಲಿ ಸಂಚರಿಸಿ ವೈದಿಕ ತತ್ವಜ್ಞಾನ ಪ್ರಸಾರ ಮಾಡಿ ಭಕ್ತರಿಗೆ ಸನ್ಮಾರ್ಗದ ದಾರಿ ತೋರಿದರಲ್ಲದೇ ಸುಧಾ ಮಂಡನ, ವಿಜಯೀಂದ್ರ ವಿಜಯ ವೈಭವ, ಯುಕ್ತಿಮಲ್ಲಿಕಾ, ವಾಯುಸ್ತುತಿ ಮಂಡನ ಸೇರಿದಂತೆ ಅನೇಕ ಗ್ರಂಥಗಳನ್ನು ಬರೆದರು ಎಂದು ತಿಳಿಸಿದರು.
ತರ್ಕ ಶಾಸ್ತ್ರದ ಕುರಿತು ಅನೇಕ ಗ್ರಂಥಗಳ ಮೇಲೆ ಬೆಳಕು ಚೆಲ್ಲಿ, ಅವುಗಳ ಬಗ್ಗೆ ಸಾಮಾನ್ಯರಿಗೂ ಮನವರಿಕೆ ಮಾಡಿಕೊಟ್ಟ ಸಾಧನೆ ಯತಿಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಮಂತ್ರ ಹಾಗೂ ವೇದಘೋಷಣ ಮಾಡಿದರು.
ಮಹಾಮಂಗಳಾರತಿ, ಪ್ರಸಾದ ವಿತರಣೆ ಮಾಡಲಾಯಿತು. ದಾಸಸಾಹಿತ್ಯ ಪ್ರಸ್ತುತಪಡಿಸಿದರು. ಪಾಠ ಶಾಲೆಯ ಹಳೆ ವಿದ್ಯಾರ್ಥಿಗಳು ಪಂ.ಧಿರೇಂದ್ರಾಚಾರ ಅವರಿಗೆ ಪೂಜಾ ಮಂಟಪ ನೀಡಿದರು.
ಪಾಂಡುರಂಗ ಪಪ್ಪು, ಪ್ರಹ್ಲಾದ ಪೂಜಾರ, ಪ್ರಹ್ಲಾದ ಆಶ್ರೀತ, ಪವನ ಅಧ್ಯಾಪಕ, ಮದನ ಅಧ್ಯಾಪಕ, ಅಕ್ಷಯ ಕಟ್ಟಿ, ವಿಷ್ಣು ಪುರೋಹಿತ, ಶ್ರೀದೇವಿ ಪೂಜಾರ, ವಾಣಿಶ್ರೀ ಅಧ್ಯಾಪಕ, ಅನಿತಾ ಕುಲಕರ್ಣಿ ಹಾಗೂ ಪ್ರತೀಕ್ಷಾ ಪೂಜಾರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.